ADVERTISEMENT

ಚಾಂಪಿಯನ್ಸ್ ಲೀಗ್: ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಮಹಮ್ಮದ್ ನೂಮಾನ್
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಬೆಂಗಳೂರು: ಇನ್ನುಳಿದ ಎರಡು ಲೀಗ್ ಪಂದ್ಯಗಳಲ್ಲಿ ಗೆಲುವು ಪಡೆದರೂ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತವಿಲ್ಲ. ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಎದುರಾಗಿರುವ ಪರಿಸ್ಥಿತಿ ಇದು.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಆರಂಭಕ್ಕೆ ಮುನ್ನ ಆರ್‌ಸಿಬಿ `ಬಿ~ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ಫೇವರಿಟ್ ತಂಡಗಳಲ್ಲಿ ಒಂದೆನಿಸಿತ್ತು. ಆದರೆ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಕಾರಣ ಇದೀಗ ಸೆಮಿಫೈನಲ್ ಕಾಣದೆ ಹೊರಬೀಳುವ ಅಪಾಯದಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಸಾಮರ್ಸೆಟ್ ವಿರುದ್ಧದ ಪಂದ್ಯ ಡೇನಿಯಲ್ ವೆಟೋರಿ ಬಳಗಕ್ಕೆ `ಮಾಡು ಇಲ್ಲವೇ ಮಡಿ~ ಎನಿಸಿದೆ. ಗೆದ್ದರೆ ನಾಲ್ಕರಘಟ್ಟ ಪ್ರವೇಶಿಸುವ ಕನಸು ಜೀವಂತವಾಗಿ ಉಳಿಯಲಿದೆ. ಸೋತರೆ ಸೆಮಿಫೈನಲ್ ಮಾತ್ರವಲ್ಲ, ಪ್ರಶಸ್ತಿಯ ಕನಸು ನುಚ್ಚುನೂರಾಗಲಿದೆ.

`ಚಾಂಪಿಯಲ್ಸ್ ಲೀಗ್ ಟೂರ್ನಿಯಲ್ಲಿ ಉತ್ತಮ ಆರಂಭ ಅಗತ್ಯ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ ಪ್ರಶಸ್ತಿಯ ಕನಸು ಕೈಬಿಡಬೇಕು~ ಎಂದು ಟೂರ್ನಿಗೆ ಮುನ್ನ ಆರ್‌ಸಿಬಿ ನಾಯಕ ಡೇನಿಯಲ್ ವೆಟೋರಿ ನುಡಿದಿದ್ದರು. ಅವರ ಮಾತನ್ನು ಸಹ ಆಟಗಾರರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಬೆಂಗಳೂರಿನ ಈ ತಂಡ ವಾರಿಯರ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ಎದುರು ಮುಗ್ಗರಿಸಿದೆ. ಇದುವರೆಗೆ ಸಂಘಟಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ

ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿರುವ ವಾರಿಯರ್ಸ್ `ಬಿ~ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಲೀಗ್ ವ್ಯವಹಾರ ಕೊನೆಗೊಳಿಸಿರುವ ನೈಟ್ ರೈಡರ್ಸ್ ನಾಲ್ಕು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಾಮರ್ಸೆಟ್ ಮತ್ತು ಸೌತ್ ಆಸ್ಟ್ರೇಲಿಯಾ ತಲಾ ಮೂರು ಪಾಯಿಂಟ್ ಕಲೆಹಾಕಿವೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಆರ್‌ಸಿಬಿ ಪಾಯಿಂಟ್ ಖಾತೆ ತೆರೆದಿಲ್ಲ.

ಕ್ರಿಸ್ ಗೇಲ್, ತಿಲಕರತ್ನೆ ದಿಲ್ಶಾನ್, ಸೌರಭ್ ತಿವಾರಿ ಮತ್ತು ವಿರಾಟ್ ಕೊಹ್ಲಿ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಂಡವೊಂದು ಇನ್ನೂ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ಅಚ್ಚರಿ ಉಂಟುಮಾಡಿದೆ. ಗೇಲ್ ಕಳೆದ ಎರಡು ಪಂದ್ಯಗಳಲ್ಲಿ ಅಬ್ಬರದ ಆರಂಭ ಪಡೆದಿದ್ದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು.

ಬೌಲಿಂಗ್ ಮತ್ತು ಫೀಲ್ಡಿಂಗ್ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ನಾಯಕ ವೆಟೋರಿ ಚಿಂತೆಗೆ ಕಾರಣವಾಗಿದೆ. ಆತ್ಮವಿಶ್ವಾಸ ಕಳೆದುಕೊಂಡಿರುವ ಆಟಗಾರರಿಗೆ ಉತ್ತೇಜನ ನೀಡಿ ಅವರು ತಂಡವನ್ನು ಗೆಲುವಿನೆಡೆಗೆ ಮುನ್ನಡೆಸುವರೇ ಎಂಬುದನ್ನು ನೋಡಬೇಕು.

ಆರ್‌ಸಿಬಿ ತಂಡದ ರನ್‌ರೇಟ್ ಕೂಡಾ ಉತ್ತಮವಾಗಿಲ್ಲ. ಈ ಕಾರಣ ಸೋಮವಾರ ಸಾಮರ್ಸೆಟ್ ಎದುರು ಹಾಗೂ ಅಕ್ಟೋಬರ್ 5 ರಂದು ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ವಿರುದ್ಧದ   ಕೊನೆಯ ಲೀಗ್ ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ.

ಕಳೆದ ಕೆಲದಿನಗಳಿಂದ ಉದ್ಯಾನನಗರಿಯಲ್ಲಿ ಮಳೆಯಾಗುತ್ತಿದೆ. ಭಾನುವಾರ ಕೂಡಾ ಮಳೆಯಾಗಿದ್ದು, ಎರಡೂ ತಂಡಗಳಿಗೆ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಇಂದಿನ ಪಂದ್ಯ ಎಲ್ಲಾದರೂ ಮಳೆಯಿಂದ ರದ್ದುಗೊಂಡರೆ, ಆರ್‌ಸಿಬಿಯ ಸೆಮಿಫೈನಲ್ ಕನಸು ಕೂಡಾ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದೆ.

ತಂಡಗಳು ಇಂತಿವೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡೇನಿಯಲ್ ವೆಟೋರಿ (ನಾಯಕ), ಮಯಾಂಕ್ ಅಗರ್‌ವಾಲ್, ಶ್ರೀನಾಥ್ ಅರವಿಂದ್, ರಾಜು ಭಟ್ಕಳ್, ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಲ್, ಅರುಣ್ ಕಾರ್ತಿಕ್, ವಿರಾಟ್ ಕೊಹ್ಲಿ, ಮೊಹಮ್ಮದ್ ಕೈಫ್, ಅಭಿಮನ್ಯು ಮಿಥುನ್, ಜಮಾಲುದ್ದೀನ್ ಸಯ್ಯದ್ ಮೊಹಮ್ಮದ್, ಡಿರ್ಕ್ ನಾನೆಸ್, ಅಸದ್ ಪಠಾಣ್, ಸೌರಭ್ ತಿವಾರಿ.

ಸಾಮರ್ಸೆಟ್: ಅಲ್ಫೋನ್ಸೊ ಥಾಮಸ್ (ನಾಯಕ), ಅಲೆಕ್ಸ್ ಬರೋ, ನಿಕ್ ಕಾಂಪ್ಟನ್, ಆ್ಯಡಮ್ ಡಿಬ್ಲ್, ಜಾರ್ಜ್ ಡಾಕ್ರೆಲ್, ಲೆವಿಸ್ ಗ್ರೆಗೊರಿ, ಜೇಮ್ಸ ಹಿಲ್ಡ್ರೆತ್, ಕ್ರಿಸ್ ಜೋನ್ಸ್, ಮುರಳಿ ಕಾರ್ತಿಕ್, ಸ್ಟೀವ್ ಕಿರ್ಬಿ, ಸ್ಟೀವ್ ಸ್ನೆಲ್, ಅರುಲ್ ಸುಪ್ಪಯ್ಯ, ಪೀಟರ್ ಟ್ರೆಗೊ, ರೆಲೋಫ್ ವಾನ್ ಡೆರ್ ಮೆರ್ವ್,
ಪಂದ್ಯದ ಆರಂಭ: ರಾತ್ರಿ 8.00ಕ್ಕೆ
ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.