ಹೈದರಾಬಾದ್ (ಐಎಎನ್‌ಎಸ್): ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ತನ್ನ ವಿರುದ್ಧ ಕೆಟ್ಟ ಮಾತುಗಳನ್ನಾಡುತ್ತಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ಆರೋಪಿಸಿದ್ದಾರೆ.ನಾನು ಮೂರು ವರ್ಷಗಳ ಕಾಲ ಆಡಿದ್ದ ತಂಡದ ಅಧಿಕಾರಿಯೊಬ್ಬರು ಇಂತಹ ವರ್ತನೆ ತೋರುತ್ತಿರುವುದು ಬೇಸರ ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್ ಐಪಿಎಲ್‌ನ ಮೊದಲ ಮೂರು ವರ್ಷಗಳ ಕಾಲ ಚಾರ್ಜರ್ಸ್ ತಂಡವನ್ನು ಮುನ್ನಡೆಸಿದ್ದರು. ಈ ಋತುವಿನಲ್ಲಿ ಅವರು ಕಿಂಗ್ಸ್ ಇಲೆವೆನ್ ತಂಡವನ್ನು ಮುನ್ನಡೆಸುತ್ತಿದ್ದಾರೆ.ಶನಿವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡ ಚಾರ್ಜರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು. ‘ಕಳೆದ ಮೂರು ವರ್ಷಗಳನ್ನು ಚಾರ್ಜರ್ಸ್ ಪರ ಕಳೆದಿದ್ದೇನೆ. ಆದರೆ ಅದೇ ತಂಡದ ಅಧಿಕಾರಿಯೊಬ್ಬರು ನನ್ನ ವಿರುದ್ಧ ಕೆಟ್ಟ ಮಾತುಗಳನ್ನಾಡುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಆ ತಂಡದ ವಿರುದ್ಧ ಗೆಲುವು ಲಭಿಸಿದ್ದು ಸಂತಸ ಉಂಟುಮಾಡಿದೆ’ ಎಂದು ಗಿಲ್‌ಕ್ರಿಸ್ಟ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
‘ಚಾರ್ಜರ್ಸ್ ತಂಡವನ್ನು ತೊರೆದ ದಿನದಿಂದಲೇ ಆ ಅಧಿಕಾರಿ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಆ ವ್ಯಕ್ತಿ ಯಾರು ಮತ್ತು ಅವರು ಏನು ಹೇಳಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ’ ಎಂದು ಅವರು ನುಡಿದಿದ್ದಾರೆ. ಚಾರ್ಜರ್ಸ್ ತಂಡದ ಕೋಚ್ ಡರೆನ್ ಲೆಹ್ಮನ್ ಅವರು ಈ ಕುರಿತ ಪ್ರಶ್ನೆಗೆ, ‘ಇದರ ಬಗ್ಗೆ ನಾನು ಏನನ್ನೂ ಹೇಳಲಾರೆ. ಗಿಲ್‌ಕ್ರಿಸ್ಟ್ ಒಬ್ಬ ಶ್ರೇಷ್ಠ ಆಟಗಾರ. 41ರ ಹರೆಯದಲ್ಲೂ ಅವರು ಅದ್ಭುತವಾಗಿ ಆಡುತ್ತಿದ್ದಾರೆ’ ಎಂದು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.