ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಫೆ.9ಕ್ಕೆ ಐಒಎ ಚುನಾವಣೆ
ನವದೆಹಲಿ (ಪಿಟಿಐ):
ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಕಳೆದ ಡಿಸೆಂಬರ್‌ 8ರಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಫೆಬ್ರುವರಿ 9 ಕ್ಕೆ ಸಂಸ್ಥೆಗೆ ನೂತನವಾಗಿ ಚುನಾವಣೆ ನಡೆಸಲು ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಐಒಸಿ ನಿರ್ದೇಶನದಂತೆ ಸಂಸ್ಥೆಗೆ ಚುನಾವಣೆ ನಡೆಸಲು ನಿರ್ಧರಿಸಿರುವುದರಿಂದ ಭಾರತೀಯ ಕ್ರೀಡಾಪಟುಗಳು ಇನ್ನು ಮುಂದೆ ಒಲಿಂಪಿಕ್ಸ್‌ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳಲ್ಲಿ ರಾಷ್ಟ್ರಧ್ವಜದ ಅಡಿಯಲ್ಲಿಯೇ  ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್: ಕರ್ನಾಟಕ ತಂಡ ಮೇಲುಗೈ
ಬೆಂಗಳೂರು:
ಹಿಮಾಚಲ ಪ್ರದೇಶ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಕರ್ನಾಟಕದ ಬೌಲರ್‌ಗಳು ಹಿಮಾಚಲ ಪ್ರದೇಶದ ಅಮ್ತನ್‌ನಲ್ಲಿ ನಡೆಯುತ್ತಿರುವ 25 ವರ್ಷದೊಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 189 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 602 ರನ್‌ ಕಲೆ ಹಾಕಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ದಿನವಾದ ಸೋಮವಾರದ ಅಂತ್ಯಕ್ಕೆ  ತಂಡ 549 ರನ್‌ ಗಳಿಸಿತ್ತು.

ಇದಕ್ಕುತ್ತರವಾಗಿ ಹಿಮಾಚಲ ಪ್ರದೇಶ ಮಂಗಳವಾರದ ದಿನದಾಟದ ಕೊನೆಯಲ್ಲಿ 79  ಓವರ್‌ಗಳಲ್ಲಿ 265 ರನ್‌ ಗಳಿಸಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಒಂದು ದಿನದ ಆಟ ಬಾಕಿ ಇದ್ದು, ಪಂದ್ಯ ಬಹುತೇಕ ಡ್ರಾ ಹಾದಿಯಲ್ಲಿ ಸಾಗಿದೆ. ಆದರೆ, ಇನಿಂಗ್ಸ್‌ ಮುನ್ನಡೆ ಕರ್ನಾಟಕದ ಪಾಲಾಗುವ ಸಾಧ್ಯತೆಯಿದೆ.

ಸಂಕ್ಷಿಪ್ತ ಸ್ಕೋರು: ಕರ್ನಾಟಕ ಮೊದಲ ಇನಿಂಗ್ಸ್‌ 189 ಓವರ್‌ಗಳಲ್ಲಿ 9 ವಿಕೆಟ್‌ಗೆ 602 ಡಿಕ್ಲೇರ್ಡ್‌. (ಆದಿತ್ಯ ಬಿ. ಸಾಗರ್‌ ಔಟಾಗದೆ 61, ಕೆ. ಹೊಯ್ಸಳ ಔಟಾಗದೆ 50; ಎ.ಪಿ. ವಶಿಷ್ಠ 128ಕ್ಕೆ3, ಎ.ಕೆ. ಕೌಶಿಕ್‌ 131ಕ್ಕೆ3). ಹಿಮಾಚಲ ಪ್ರದೇಶ 79 ಓವರ್‌ಗಳಲ್ಲಿ 5 ವಿಕೆಟ್‌ಗೆ 265. (ಎಸ್‌.ಎಲ್‌. ವರ್ಮ ಬ್ಯಾಟಿಂಗ್‌ 121, ಎ.ಆರ್‌. ಕಲ್ಸಿ 34, ಎ.ಕೆ. ಕೌಶಿಕ್‌ ಬ್ಯಾಟಿಂಗ್‌ 52; ಆದಿತ್ಯ ಸಾಗರ್‌ 37ಕ್ಕೆ2, ಡೇವಿಡ್‌ ಮ್ಯಾಥ್ಯೂಸ್‌ 52ಕ್ಕೆ2).

ರಾಷ್ಟ್ರಮಟ್ಟದ ಹಾಕಿ ಟೂರ್ನಿ ಇಂದಿನಿಂದ
ಹುಬ್ಬಳ್ಳಿ:
ಹುಬ್ಬಳ್ಳಿ ಹಾಕಿ ಅಕಾಡೆಮಿ ಆಶ್ರಯದಲ್ಲಿ ‘ಹುಬ್ಬಳ್ಳಿ ಹಾಕಿ ಅಕಾಡೆಮಿ ಟ್ರೋಫಿ–14’ ಅಖಿಲ ಭಾರತ ಮಟ್ಟದ ಆಹ್ವಾನಿತ ಹಾಕಿ ಟೂರ್ನಿಯು ಇದೇ 8ರಿಂದ 12ರವರೆಗೆ ಇಲ್ಲಿನ ಯಂಗ್‌ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಹಾಕಿ ಮೈದಾನದಲ್ಲಿ ನಡೆಯಲಿದೆ.

ಕೊಲ್ಹಾಪುರ ಹಾಕಿ ಕ್ಲಬ್‌, ಭಾರತೀಯ ಕ್ರೀಡಾ ಪ್ರಾಧಿಕಾರದ ಔರಂಗಾಬಾದ್‌, ಇಸ್ಲಾಂಪುರ ತಂಡಗಳು, ಪೋಸ್ಟಲ್‌ ಬೆಂಗಳೂರು, ಗದುಗಿನ ಎಚ್‌ಎಸ್‌ಬಿಸಿ ತಂಡಗಳ ಜೊತೆಗೆ ಹುಬ್ಬಳ್ಳಿಯ ವೈಎಸ್‌ಎಸ್‌ಸಿ, ವಾಸು ಇಲೆವೆನ್‌, ಕೆಕೆಎಸ್‌ಸಿ ಹಾಗೂ ಆತಿಥೇಯ ಹುಬ್ಬಳ್ಳಿ ಅಕಾಡೆಮಿ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ರಾಜ್ಯ ಜೂನಿಯರ್ ಟೆನಿಸ್ 13ರಿಂದ
ಮೈಸೂರು:
 ರಘುವೀರ ಟೆನಿಸ್ ಅಕಾಡೆಮಿ ಆಶ್ರಯದಲ್ಲಿ ಜನವರಿ 13 ರಿಂದ 15ರವರೆಗೆ ‘ಸಂಕ್ರಾಂತಿ ಕಪ್‘ಕರ್ನಾಟಕ ರಾಜ್ಯ ರ್‌್ಯಾಂಕಿಂಗ್ ಜೂನಿಯರ್ ಟೆನಿಸ್ ಚಾಂಪಿಯನ್‌ಷಿಪ್ ನಡೆಯಲಿದೆ.

10, 12 ಮತ್ತು 14 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್, ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.  ಹೆಸರು ನೋಂದಾಯಿಸಲು ಜ.12 ಕೊನೆಯ ದಿನವಾಗಿದೆ.  ವಿವರಗಳಿಗೆ;  ಎಸ್. ಶಬರೀಶ್ (ಮೊ: 9986688111) ಮತ್ತು ದಿನಕರ್ (ಮೊ: 8050273789) ಅವರನ್ನು ಅಥವಾ ಇಮೇಲ್:  raghuveertennisacademy@gmail.com ಮೂಲಕ ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT