ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಒಲಿಂಪಿಕ್ಸ್ ಬಳಿಕ ಇಸಿನ್‌ಬಯೆವಾ ವಿದಾಯ?
ಮಾಸ್ಕೊ (ಐಎಎನ್‌ಎಸ್): ಒಲಿಂಪಿಕ್ ಚಿನ್ನದ ಪದಕ ವಿಜೇತೆ ಹಾಗೂ ಪೋಲ್ ವಾಲ್ಟ್‌ನಲ್ಲಿ ವಿಶ್ವದಾಖಲೆ ಹೊಂದಿರುವ ರಷ್ಯಾದ ಅಥ್ಲೀಟ್ ಯೆಲೆನಾ ಇಸಿನ್‌ಬಯೆವಾ ಲಂಡನ್ ಒಲಿಂಪಿಕ್ಸ್ ಬಳಿಕ ವಿದಾಯ ಹೇಳುವ ಸಾಧ್ಯತೆ ಇದೆ.

ಇಂತಹ ಒಂದು ಸುಳಿವು ನೀಡಿರುವುದು ರಷ್ಯಾ ಅಥ್ಲೆಟಿಕ್ ತಂಡದ ಮುಖ್ಯ ಕೋಚ್ ವಾಲೆಂಟಿನ್ ಮಸಲ್ಕೋವ್. `ಲಂಡನ್ ಒಲಿಂಪಿಕ್ಸ್ ಮುಗಿದ ಬಳಿಕ ಇಸಿನ್‌ಬಯೆವಾ ಅವರ ಅಥ್ಲೆಟಿಕ್ ಜೀವನವೂ ಕೊನೆಗೊಳ್ಳಬಹುದು~ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯೆಲೆನಾ ಕಳಪೆ ಫಾರ್ಮ್ ಹಾಗೂ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.
 
ಮಯೂಖಾ ಕೋಚ್‌ಗೆ ಸಿಗದ ಹಸಿರು ನಿಶಾನೆ
ಕೊಯಿಕೋಡ್ (ಐಎಎನ್‌ಎಸ್): ಅಥ್ಲೀಟ್ ಮಯೂಖಾ ಜಾನಿ ಅವರ ಕೋಚ್‌ಗೆ ಲಂಡನ್ ಒಲಿಂಪಿಕ್‌ಗೆ ಹೋಗಲು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಇನ್ನೂ ಹಸಿರು ನಿಶಾನೆ ತೋರಿಸಿಲ್ಲ.

ಮಯೂಖಾ ಕೋಚ್ ಕೂಡ ಆಗಿರುವ ಅವರ ತಂದೆ ಮಾಜಿ ದೇಹದಾರ್ಢ್ಯಪಟು ಎಂ.ಡಿ.ಜಾನಿ ಅವರು ಎಎಫ್‌ಐ ವಿಳಂಬ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್: ಸ್ಮಿತ್, ಆಮ್ಲಾ ಶತಕ
ಲಂಡನ್: ಗ್ರೇಮ್ ಸ್ಮಿತ್ ಮತ್ತು ಹಾಶೀಮ್ ಆಮ್ಲಾ ಗಳಿಸಿದ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಮರುಹೋರಾಟ ನಡೆಸಿದೆ. ಮೂರನೇ ದಿನದಾಟದ ಚಹಾ ವಿರಾಮದ ಬಳಿಕ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 118 ಓವರ್‌ಗಳಲ್ಲಿ 2 ವಿಕೆಟ್‌ಗೆ 353 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: ಮೊದಲ ಇನಿಂಗ್ಸ್ 125.5 ಓವರ್‌ಗಳಲ್ಲಿ 385. ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 118 ಓವರ್‌ಗಳಲ್ಲಿ 2 ವಿಕೆಟ್‌ಗೆ 353 (ಗ್ರೇಮ್ ಸ್ಮಿತ್ 131, ಹಾಶಿಮ್ ಆಮ್ಲಾ ಬ್ಯಾಟಿಂಗ್ 165, ಜಾಕ್ ಕಾಲಿಸ್ ಬ್ಯಾಟಿಂಗ್ 50, ಟಿಮ್ ಬ್ರೆಸ್ನನ್ 64ಕ್ಕೆ 1)

ಒಲಿಂಪಿಕ್ಸ್‌ಗಿಂತ ವಿಶ್ವ ಚಾಂಪಿಯನ್‌ಷಿಪ್ ಕಷ್ಟ: ಮೇರಿ ಕೋಮ್
ನವದೆಹಲಿ (ಪಿಟಿಐ): ಒಲಿಂಪಿಕ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನಷ್ಟು ಪ್ರಬಲ ಪೈಪೋಟಿ ಇರುವುದಿಲ್ಲ ಎನ್ನುವುದು ಭಾರತದ ಬಾಕ್ಸರ್ ಮೇರಿ ಕೋಮ್ ಅಭಿಪ್ರಾಯ.

ಆರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಐದು ಸ್ವರ್ಣ ಹಾಗೂ ಒಂದು ಬೆಳ್ಳಿಯ ಪದಕ ಗೆದ್ದು ವಿಶಿಷ್ಟ ಸಾಧನೆ ಮಾಡಿರುವ 29 ವರ್ಷ ವಯಸ್ಸಿನ ಮೇರಿ `ಮೊದಲ ಬಾರಿಗೆ ಮಹಿಳಾ ಬಾಕ್ಸಿಂಗ್ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲಾಗಿದೆ. ಆದ್ದರಿಂದ ವಿಶ್ವ ಮಟ್ಟದಿಂದ ಆಯ್ದ ಪ್ರಬಲ ಬಾಕ್ಸರ್‌ಗಳು ಕಣದಲ್ಲಿ ಇರುತ್ತಾರೆಂದು ನಿರೀಕ್ಷೆ ಮಾಡಬಹುದು. ಆದರೂ ವಿಶ್ವ ಚಾಂಪಿಯನ್‌ಷಿಪ್‌ನಷ್ಟು ಕಷ್ಟವೇನಲ್ಲ~ ಎಂದು ಅವರು ತಿಳಿಸಿದ್ದಾರೆ.

ಸ್ನೂಕರ್: ಪಂಕಜ್ ನಿರ್ಗಮನ
ಗ್ಲಾಸೆಸ್ಟರ್ (ಪಿಟಿಐ): ಪಂಕಜ್ ಅಡ್ವಾಣಿ ಅವರು `ಯುಕೆ ಪ್ಲೇಯರ್ಸ್ ಟೂರ್ ಸ್ನೂಕರ್ ಚಾಂಪಿಯನ್‌ಷಿಪ್~ನಿಂದ ನಿರಾಸೆಗೊಂಡು ನಿರ್ಗಮಿಸಿದ್ದಾರೆ.

ಶನಿವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಅವರು 0-4 ಫ್ರೇಮ್‌ಗಳ ಅಂತರದಿಂದ ಆತಿಥೇಯ ಇಂಗ್ಲೆಂಡ್‌ನ ಮೈಕಲ್ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.