ADVERTISEMENT

ಚೆಂಡು ಕೈಚೆಲ್ಲಿದ್ದಕ್ಕೆ ತೆತ್ತ ದಂಡ: ಕ್ಯಾಟಿಚ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಬೆಂಗಳೂರು: `ಚೆಂಡು ಕೈಚೆಲ್ಲಿದ್ದಕ್ಕೆ ತೆತ್ತ ದುಬಾರಿ ದಂಡವಿದು~ ಎಂದು ಹೇಳಿರುವ ನ್ಯೂ ಸೌತ್ ವೇಲ್ಸ್ ನಾಯಕ ಸೈಮನ್ ಕ್ಯಾಟಿಚ್ ಕ್ಷೇತ್ರ ರಕ್ಷಣೆಯಲ್ಲಿ ತಮ್ಮ  ತಂಡದವರು ಮಾಡಿದ ಪ್ರಮಾದಗಳ ಕಡೆಗೆ ಬೆರಳು ತೋರಿಸಿದ್ದಾರೆ.

ಪಂದ್ಯದ ಮಹತ್ವದ ಘಟ್ಟದಲ್ಲಿ ಕ್ಯಾಚ್ ಪಡೆಯುವಲ್ಲಿ ವಿಫಲವಾಗಿದ್ದರಿಂದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲಿನ ಆಘಾತ ಅನುಭವಿಸಬೇಕಾಯಿತು ಎನ್ನುವುದು ಅವರ ಅಭಿಪ್ರಾಯ.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಚಾಲೆಂಜರ್ಸ್ ವಿರುದ್ಧ ಆರು ವಿಕೆಟ್‌ಗಳ ಅಂತರದಿಂದ ಪರಾಭವಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾಟಿಚ್ `ಗೆಲುವು ಸಾಧ್ಯವಿತ್ತು. ಆದರೆ ಕ್ಷೇತ್ರ ರಕ್ಷಣೆಯಲ್ಲಿ ತಪ್ಪುಗಳು ನಡೆದವು. ಆದ್ದರಿಂದ ಪಂದ್ಯ ಕೈಜಾರಿತು~ ಎಂದರು.

`200ಕ್ಕೂ ಹೆಚ್ಚು ಮೊತ್ತದ ಗುರಿನೀಡಿದ್ದೆವು. ಬೌಲಿಂಗ್ ಕೂಡ ಕೆಟ್ಟದ್ದೇನು ಆಗಿರಲಿಲ್ಲ. ಆದರೆ ಕೈಗೆ ಬಂದ ಚೆಂಡನ್ನು ಹಿಡಿುವಲ್ಲಿ ಕ್ಷೇತ್ರ ರಕ್ಷಕರು ಎಡವಿದರು. ಆದ್ದರಿಂದ ಪಂದ್ಯದ ಮೇಲೆ ಹಿಡಿತ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ~ ಎಂದ ಅವರು `ರಾಯಲ್ ತಂಡವು 204 ರನ್‌ಗಳ ಗುರಿಯನ್ನು ಮುಟ್ಟುವಲ್ಲಿ ಗೇಲ್ ಹಾಗೂ ಕೊಹ್ಲಿ ವಹಿಸಿದ ಪಾತ್ರ ಮಹತ್ವದ್ದು. ಗೇಲ್ ಅಂತೂ ರನ್ ಗತಿಯನ್ನು ಚುರುಕುಗೊಳಿಸಿದ ರೀತಿ ಅದ್ಭುತ~ ಎಂದರು.

ಚಿನ್ನಸ್ವಾಮಿ ಅಂಗಳದಲ್ಲಿ ಬ್ಯಾಟಿಂಗ್ ಕಷ್ಟವೆನಿಸಲೇ ಇಲ್ಲ ಎಂದ ಅವರು `ನಾವು ಬೌಲಿಂಗ್ ಮಾಡುವ ಹೊತ್ತಿಗೆ ಪಿಚ್ ಸ್ವಲ್ಪ ಮಟ್ಟಿಗೆ ಸ್ವರೂಪ ಬದಲಿಸಿಕೊಂಡಿತ್ತು. ಆದ್ದರಿಂದ ನಮ್ಮ ಬೌಲರ್‌ಗಳು ಕಷ್ಟಪಡಬೇಕಾಯಿತು. ಎದುರಾಳಿ ಪಡೆಯ ಬ್ಯಾಟ್ಸ್‌ಮನ್‌ಗಳು ಜೀವದಾನ ಪಡೆದು ಬೆಳೆದಿದ್ದರಿಂದ ನಮ್ಮ ಬೌಲರ್‌ಗಳ ಹುಮ್ಮಸ್ಸು ಕುಗ್ಗಿತು~ ಎಂದು ವಿವರಿಸಿದರು.

ಆದರೆ ಕ್ಯಾಟಿಚ್ ಅವರ ಈ ಅಭಿಪ್ರಾಯವನ್ನು ಆಕ್ಷೇಪಿಸಿದ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಡೇನಿಯಲ್ ವೆಟೋರಿ `ಕೇವಲ ಇಪ್ಪತ್ತು ಓವರುಗಳ ನಂತರ ಅಂಗಳದ ಗುಣದಲ್ಲಿ ಭಾರಿ ವ್ಯತ್ಯಾಸ ಸಾಧ್ಯವಿಲ್ಲ.

ವೇಲ್ಸ್ ಬೌಲಿಂಗ್ ಮಾಡಿದ್ದಾಗಲೂ ಆಕ್ರಮಣಕಾರಿ ಆಟವಾಡುವುದು ಅಷ್ಟೇನು ಸುಲಭವಾಗಿರಲಿಲ್ಲ. ಆದರೆ ಚೆಂಡನ್ನು ದಂಡಿಸುವ ಸಹಜ ಗುಣದ ಗೇಲ್ ಹಾಗೂ ಕೊಹ್ಲಿ ಪಂದ್ಯದ ಫಲಿತಾಂಶದ ತಕ್ಕಡಿ ನಮ್ಮ ಕಡೆಗೆ ವಾಲುವಂತೆ ಮಾಡಿದರು~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.