ADVERTISEMENT

ಚೆನ್ನೈಯಿನ್‌ಗೆ ಮುಂಬೈ ಸಿಟಿ ಎಫ್‌ಸಿ ಸವಾಲು

ಪಿಟಿಐ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಚೆನ್ನೈಯಿನ್ ಎಫ್‌ಸಿ ತಂಡದ ಜೆಜೆ ಲಾಲ್‌ಪೆಖ್ಲುವಾ (ಮಧ್ಯ) ಮಿಂಚುವ ವಿಶ್ವಾಸದಲ್ಲಿದ್ದಾರೆ. –ಪಿಟಿಐ ಚಿತ್ರ.
ಚೆನ್ನೈಯಿನ್ ಎಫ್‌ಸಿ ತಂಡದ ಜೆಜೆ ಲಾಲ್‌ಪೆಖ್ಲುವಾ (ಮಧ್ಯ) ಮಿಂಚುವ ವಿಶ್ವಾಸದಲ್ಲಿದ್ದಾರೆ. –ಪಿಟಿಐ ಚಿತ್ರ.   

ಚೆನ್ನೈ: ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಕೊನೆಯ ಹಂತದಲ್ಲಿ ಪ್ರಬಲ ಹೋರಾಟಕ್ಕೆ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ಶನಿವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಚೆನ್ನೈಯಿನ್‌ ಎಫ್‌ಸಿ ತಂಡವನ್ನು ಮುಂಬೈ ಸಿಟಿ ಎಫ್‌ಸಿ ತಂಡ ಎದುರಿಸಲಿದೆ. ಎರಡೂ ತಂಡಗಳಿಗೆ ಇದು ಲೀಗ್ ಹಂತದ ಕೊನೆಯ ಪಂದ್ಯ.

ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಚೆನ್ನೈಯಿನ್ ಎಫ್‌ಸಿ ಅಂತಿಮ ನಾಲ್ಕರಲ್ಲಿ ಯಾವ ಸ್ಥಾನ ಪಡೆದುಕೊಳ್ಳಲಿದೆ ಎಂಬುದು ಶನಿವಾರ ನಿರ್ಧಾರವಾಗಲಿದೆ. ಸೆಮಿಫೈನಲ್‌ನಲ್ಲಿ ಎದುರಾಳಿ ಯಾರು ಎಂಬುದು ಕೂಡ ಈ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ.

ADVERTISEMENT

ಅಂತಿಮ ಲೀಗ್ ಪಂದ್ಯಕ್ಕೂ ಮೊದಲು ಚೆನ್ನೈಯಿನ್ ತಂಡದ ಕೋಚ್ ಜಾನ್ ಗ್ರೆಗರಿ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

‘ಈ ಪಂದ್ಯವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೆಲವು ಬದಲಾವಣೆ ಮಾಡಲಿದ್ದರೂ ಈ ವರೆಗೆ ಅವಕಾಶ ಸಿಗದವರಿಗೆ ಕೆಲವು ನಿಮಿಷ ಮಾತ್ರ ಅಂಗಣಕ್ಕೆ ಇಳಿಯಲು ಅವಕಾಶ ನೀಡಲಾಗುವುದು. ಈ ಮೂಲಕ ಅವರ ಸಾಮರ್ಥ್ಯ ಅಳೆಯಲಾಗುವುದು’ ಎಂದು ಅವರು ಹೇಳಿದ್ದಾರೆ.

‘ನಮ್ಮ ತಂಡ ಅತ್ಯುತ್ತಮ ಆಟಗಾರರನ್ನು ಹೊಂದಿದೆ. ವೃತ್ತಿಜೀವನದಲ್ಲಿ ಇಂಥ ತಂಡವನ್ನು ನಾನು ನೋಡಿಲ್ಲ’ ಎಂದು ಅವರು ಶ್ಲಾಘಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ಡೈನಾಮೊಸ್ ಎಫ್‌ಸಿ ಎದುರು ಸೋತಿರುವ ಮುಂಬೈ ಸಿಟಿ ಎಫ್‌ಸಿ ತಂಡ ಪ್ಲೇ ಆಫ್‌ಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಹೀಗಾಗಿ ಲೀಗ್‌ನಲ್ಲಿ ಇದು ತಂಡಕ್ಕೆ ಕೊನೆಯ ಪಂದ್ಯ. ಈ ಬಾರಿಯ ವೈಫಲ್ಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕೋಚ್‌ ಅಲೆಕ್ಸಾಂಡ್ರೆ ಗ್ಯುಮರಾಯಿಸ್ ‘ಕೊನೆಯ ಪಂದ್ಯದಲ್ಲಿ ಪೂರ್ಣ ಶಕ್ತಿಯನ್ನು ಬಳಸಿ ತಂಡ ಆಡಲಿದೆ. ಬಲಿಷ್ಠ ಆಟಗಾರರನ್ನು ಈ ಪಂದ್ಯದಲ್ಲಿ ಕಣಕ್ಕಿಳಿಸಲಿದ್ದು ಆರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸುವುದು ಉದ್ದೇಶ’ ಎಂದರು.


–ಮುಂಬೈ ಸಿಟಿ ಎಫ್‌ಸಿ ತಂಡದ ನಾಯಕ ಡೀಗೊ ಫ್ಲೋರನ್ ಜಯದ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.