ADVERTISEMENT

ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಲಾಢ್ಯ ಡೆವಿಲ್ಸ್ ಸವಾಲು

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಚೆನ್ನೈ (ಪಿಟಿಐ): ರಾಜಸ್ತಾನ ರಾಯಲ್ಸ್ ವಿರುದ್ಧದ ರೋಚಕ ವಿಜಯದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಮಹತ್ವಾಕಾಂಕ್ಷೆಯ ರೆಕ್ಕೆಗಳು ಬಲಿತಿವೆ. ಇನ್ನಷ್ಟು ಎತ್ತರಕ್ಕೆ ಹಾರಬೇಕು ಎನ್ನುವ ಆಸೆಯೂ ಬಲಗೊಂಡಿದೆ.
ಡೆಲ್ಲಿ ಡೇರ್‌ಡೆವಿಲ್ಸ್ ಕೂಡ ವಿಶ್ವಾಸದಿಂದ ಮುನ್ನುಗ್ಗುತ್ತಿರುವ ತಂಡ.
 
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಲೀಗ್ ಪಟ್ಟಿಯಲ್ಲಿ ಅಗ್ರಪಟ್ಟ ಕಾಯ್ದುಕೊಳ್ಳುವುದು `ವೀರೂ~ ಪಡೆಯ ಗುರಿ.ತಮ್ಮ ಸಾಮರ್ಥ್ಯದಲ್ಲಿ ಅಪಾರ ಭರವಸೆ ಹೊಂದಿರುವಂಥ ಈ ಎರಡು ತಂಡಗಳ ನಡುವೆಯೇ ಶನಿವಾರ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಹಣಾಹಣಿ. ಆದ್ದರಿಂದ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನ ಆಗುವುದೆಂದು ನಿರೀಕ್ಷೆ ಮಾಡುವುದು ಸಹಜ.

ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ಎದುರು ಕೊನೆಯ ಕ್ಷಣದಲ್ಲಿ ನಾಟಕೀಯ ತಿರುವಿನೊಂದಿಗೆ ಪಂದ್ಯ ಗೆದ್ದ ಸೂಪರ್ ಕಿಂಗ್ಸ್ ಲೀಗ್ ಪಟ್ಟಿಯಲ್ಲಿ ನಾಲ್ಕರದಲ್ಲಿ ಒಂದು ಸ್ಥಾನವನ್ನು ಗಟ್ಟಿಯಾಗಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಡೆವಿಲ್ಸ್ ವಿರುದ್ಧವೂ ವಿಜಯ ಸಾಧಿಸುವುದು ಅಗತ್ಯ. ಆದ್ದರಿಂದ ಅದು ತನ್ನ ನೆಲದಲ್ಲಿ ನಡೆಯುವ ಪಂದ್ಯದಲ್ಲಿ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಹೋರಾಡಲು ಸಜ್ಜಾಗಿದೆ.

ಕೊನೆಯ ಕ್ಷಣದಲ್ಲಿ ಒತ್ತಡಕ್ಕೆ ಸಿಲುಕದ ರೀತಿಯಲ್ಲಿ ಆಡಿ ಒತ್ತಡದಿಂದ ಮುಕ್ತವಾಗಿ ಗೆಲುವು ಪಡೆಯಬೇಕು. ಇದೇ ನಾಯಕ ದೋನಿ ಯೋಜನೆ. ಆ ನಿಟ್ಟಿನಲ್ಲಿ `ಟಾಸ್~ ಮಹತ್ವದ್ದೆಂದು ಅವರಿಗೆ ಅನಿಸುವುದಿಲ್ಲ. ಮೊದಲ ಬ್ಯಾಟಿಂಗ್ ಮಾಡಿದರೆ ದೊಡ್ಡ ಮೊತ್ತ ಪೇರಿಸಬೇಕು, ಗುರಿಯನ್ನು ಬೆನ್ನಟ್ಟುವಾಗ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಬೇಕು.
 
ಪಂದ್ಯವನ್ನು ಗೆಲ್ಲಿಸಿ ಕೊಡಬಲ್ಲ ಅಲ್ಬಿ ಮಾರ್ಕೆಲ್ ಹಾಗೂ ಶ್ರೀಕಾಂತ್ ಅನಿರುದ್ಧ ಅವರಂಥ ಬ್ಯಾಟ್ಸ್‌ಮನ್‌ಗಳಿದ್ದರೂ, ಇಕ್ಕಟ್ಟಿನ ಸ್ಥಿತಿಯಲ್ಲಿ ಅವರ ಮೇಲೆ ಹೊರೆ ಬೀಳಬಾರದು. ಹಾಗೆ ಇನಿಂಗ್ಸ್ ಕಟ್ಟಬೇಕು. ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲವೆಂದು `ಮಹಿ~ ಸ್ಪಷ್ಟವಾಗಿ ಅರಿತಿದ್ದಾರೆ.ವೀರೇಂದ್ರ ಸೆಹ್ವಾಗ್‌ಗೆ ತಮ್ಮ ತಂಡದ ಬ್ಯಾಟಿಂಗ್ ಬಗ್ಗೆ ಅನುಮಾನಗಳಿಲ್ಲ. ಡೆಕ್ಕನ್    ಚಾರ್ಜರ್ಸ್ ಎದುರು ತಾವು ವಿಫಲವಾದರೂ, ಡೇವಿಡ್ ವಾರ್ನರ್ ಹಾಗೂ ನಮನ್ ಓಜಾ ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು ಎನ್ನುವ ತೃಪ್ತಿ ಹೊಂದಿದ್ದಾರೆ.
ಪಂದ್ಯ ಆರಂಭ: ರಾತ್ರಿ 8.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.