ADVERTISEMENT

ಚೆಸ್‌: ಸೇತುರಾಮನ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಕೊಜಾಯೆಲಿ, ಟರ್ಕಿ (ಪಿಟಿಐ):  ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಎಸ್‌.ಪಿ.ಸೇತುರಾಮನ್‌ ಹಾಗೂ ವಿದಿತ್‌ ಗುಜರಾತಿ ಇಲ್ಲಿ ನಡೆಯುತ್ತಿ­ರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಹತ್ತನೇ ಸುತ್ತಿನ ಪಂದ್ಯದಲ್ಲಿ ಸೇತುರಾಮನ್‌ ಗ್ರೀಸ್‌ನ ಆ್ಯಂಟೊನಿ­ಯಸ್‌ ಪಾವ್ಲಿದಿಸ್‌ ಎದುರು ಗೆಲುವು ಸಾಧಿಸಿದರು. ಬಿಳಿಯ ಕಾಯಿಗಳಿಂದ ಕಿಂಗ್‌ ಇಂಡಿಯನ್‌ ಡಿಫೆನ್ಸ್‌ ಮಾದರಿ ಆಟಕ್ಕೆ ಮುಂದಾದ ಅವರು ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಆ್ಯಂಟೊನಿಯಸ್‌ ಅವರು 30ನೇ ನಡೆಯಲ್ಲಿ ಪಂದ್ಯ ಕೈಚೆಲ್ಲಿದರು.

ಈ ಗೆಲುವಿನೊಂದಿಗೆ ಸೇತುರಾಮನ್‌ ಬಳಿ ಈಗ ಒಟ್ಟು 7 ಪಾಯಿಂಟ್‌ಗಳಿವೆ. ಅವರೀಗ ಜಂಟಿ ಐದನೇ ಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಇನ್ನೂ ಮೂರು ಸುತ್ತುಗಳ ಆಟ ಬಾಕಿಯುಳಿದಿದ್ದು ಪ್ರಶಸ್ತಿ  ವೇದಿಕೆ ಮೇಲೆ ನಿಲ್ಲಲು ಅವರಿಗೆ ಅವಕಾಶವಿದೆ. ಚೀನಾದ ಯು ಯಾಂಗ್ವಿ ಹಾಗೂ ಟರ್ಕಿಯ ಅಲೆಕ್ಸಾಂಡರ್‌ ಇಪಾಟೋವ್‌ ತಲಾ 8.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ವಿದಿತ್‌ ಗುಜರಾತಿ ಹಾಗೂ ದೆಬಾಶಿಶ್‌ ದಾಸ್‌ ಕೂಡ ಏಳು ಪಾಯಿಂಟ್‌ ಹೊಂದಿದ್ದಾರೆ. ವಿದಿತ್‌ ಮಂಗಳವಾರ ತಮ್ಮ ದೇಶದವರೇ ಆದ ಎನ್‌.ಶ್ರೀನಾಥನ್‌ ಎದುರು ಗೆಲುವು ಸಾಧಿಸಿದರು. ದೆಬಾಶಿಶ್‌ ಇರಾನ್‌ನ ಪೌಯಾ ಇದಾನಿ ಎದುರು ಜಯ ಗಳಿಸಿದರು.

ಆದರೆ ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಗ್ರೋವರ್‌ ಆಘಾತ ಅನುಭವಿಸಿದರು. ಅವರು ಚೀನಾದ ವೀ ಯಿ ಎದುರು ಸೋಲು ಕಂಡರು. ಗ್ರೋವರ್‌ ಬಳಿ ಆರೂವರೆ ಪಾಯಿಂಟ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.