ADVERTISEMENT

ಚೆಸ್: ಅನುರಾಗ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST

ಮಂಗಳೂರು: ಟೂರ್ನಿಯುದ್ದಕ್ಕೂ ಮುನ್ನಡೆ ಕಾಯ್ದುಕೊಂಡಿದ್ದ ಗೋವಾದ ಎರಡನೆ ಶ್ರೇಯಾಂಕದ ಆಟಗಾರ ಅನುರಾಗ್ ಮಾಮಲ್ ಅವರು ಚೊಚ್ಚಲ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಬುಧವಾರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ನಗರದ ಕೊಡಿಯಾಲ್‌ಬೈಲ್ ಸುಬ್ರಹ್ಮಣ್ಯ ಸಭಾದಲ್ಲಿ ನಡೆದ ಟೂರ್ನಿಯ ಅಂತಿಮ ಸುತ್ತಿನ ಬಳಿಕ ಅನುರಾಗ್ ಮಾಮಲ್, ವಿ.ರಾಘವೇಂದ್ರ (ಕರ್ನಾಟಕ) ಹಾಗೂ ಅಗ್ರಶ್ರೇಯಾಂಕದ ಆಕಾಶ್ ಥಾಕೂರ್ (ಮಹಾರಾಷ್ಟ್ರ) ತಲಾ 7.5 ಪಾಯಿಂಟ್ ಕಲೆ ಹಾಕಿದರು. ಪ್ರೊಗ್ರೆಸಿವ್ ಅಂಕಗಳ ಆಧಾರದ ಮೇಲೆ ಅನುರಾಗ್ ಮಾಮಲ್ ಚಾಂಪಿಯನ್ ಪಟ್ಟ ಗಳಿಸಿದರು. ವಿ.ರಾಘವೇಂದ್ರ ದ್ವಿತೀಯ ಹಾಗೂ ಆಕಾಶ್ ಥಾಕೂರ್ ಮೂರನೇ ಸ್ಥಾನ ಪಡೆದರು.

ಅಂತಿಮ ಸುತ್ತಿನಲ್ಲಿ ಅನುರಾಗ್ ಅವರು ಎಂ.ಕುನಾಲ್ ಜತೆ ಹಾಗೂ ಆಕಾಶ್ ಥಾಕೂರ್ ಅವರು  ಪ್ರಣವ್ ವಿಜಯ್ ಜತೆ  ಪಾಯಿಂಟ್ ಹಂಚಿಕೊಂಡರು. ಮಂಗಳೂರಿನ ರಾಘವೇಂದ್ರ ಅವರು ಎಚ್.ಜಿ.ಸಂತೋಷ್ ಕಷ್ಯಪ್ (ಕರ್ನಾಟಕ) ಅವರನ್ನು ಸೋಲಿಸುವ ಮೂಲಕ 7.5 ಪಾಯಿಂಟ್ ಕಲೆಹಾಕಿದರು.  
ವಿಜೇತ ಅನುರಾಗ್ ಅವರಿಗೆ ರೂ 30 ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ಉದ್ಯಮಿ ಟಿ.ಎ.ನಾಗೇಂದ್ರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಕೆ.ಅನಿಲ್, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್, ಅಧ್ಯಕ್ಷ ಎಂ.ಎಸ್.ಗುರುರಾಜ್, ಕಾರ್ಯದರ್ಶಿ ವಿ.ರಾಘವೇಂದ್ರ, ಪೋಷಕ ಬಿ.ವಿ.ಅಚ್ಚುತಾನಂದ ರೆಡ್ಡಿ ಹಾಗೂ ಮುಖ್ಯ ತೀರ್ಪುಗಾರ ವಾಸುದೇವ ಬಹುಮಾನ ವಿತರಣೆ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.