ADVERTISEMENT

ಚೆಸ್: ಆದಿತ್ಯ, ಗವಿಸಿದ್ದಯ್ಯಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಮೈಸೂರು: ಕರ್ನಾಟಕದ ಗವಿಸಿದ್ದಯ್ಯ ಮತ್ತು ಆದಿತ್ಯ ಚಕ್ರವರ್ತಿ ಅವರು ತಲಾ 5 ಪಾಯಿಂಟ್ಸ್ ಗಳಿಸುವ ಮೂಲಕ ಇಲ್ಲಿ ನಡೆಯುತ್ತಿರುವ 3ನೇ ಎಂಡಿಸಿಎ ಅಖಿಲ ಭಾರತ ಮುಕ್ತ ಫಿಡೆ ರೇಟಿಂಗ್ ಚೆಸ್ ಟೂರ್ನಿಯ 5ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು.

ನಗರದ ಎಂಜಿನಿಯರ್ ಸಂಸ್ಥೆಯಲ್ಲಿ ಮೈಸೂರು ಜಿಲ್ಲಾ ಚೆಸ್ ಸಂಸ್ಥೆ (ಎಂಡಿಸಿಎ) ವತಿಯಿಂದ ಬುಧವಾರ ನಡೆದ ಈ ಟೂರ್ನಿಯಲ್ಲಿ ಗವಿಸಿದ್ದಯ್ಯ (ರೇಟಿಂಗ್ 1952) ಮತ್ತು ಆದಿತ್ಯ ಚಕ್ರವರ್ತಿ (ರೇ 1908) ಅವರು ಕರ್ನಾಟಕದ ಮತ್ತಿಬ್ಬರು ಅಗ್ರ ಶ್ರೇಯಾಂಕದ ಆಟಗಾರರಾದ ಕ್ರಮವಾಗಿ ಎಚ್.ಜಿ.ಸಂತೋಷ್ ಕಶ್ಯಪ್ (ರೇಟಿಂಗ್ 2050) ಮತ್ತು ವಿ.ರಾಘವೇಂದ್ರ (ರೇ.2040) ಅವರನ್ನು ಮಣಿಸಿದರು.

ತಮಿಳುನಾಡಿನ ಎಸ್.ಪ್ರಸನ್ನ ಮತ್ತು ಶ್ರಿಜಾ ಶೇಷಾದ್ರಿ ಅವರು ಕ್ರಮವಾಗಿ ಕರ್ನಾಟಕದ ಕುಲಕರ್ಣಿ ವಿನಾಯಕ್ ಮತ್ತು ತಮಿಳುನಾಡಿನ ಆರ್.ಪಿ. ಸೆಂದಿಲ್ ಕುಮಾರನ್ ವಿರುದ್ಧ ಜಯ ಸಾಧಿಸಿದರು. ತಮಿಳುನಾಡಿನ ಅಗ್ರ ಶ್ರೇಯಾಂಕದ ಆಟಗಾರ ಎಂ.ಕುನಾಲ್ (ರೇ.2291) ಅವರು ತಮಗಿಂತ ಕಡಿಮೆ ರೇಟಿಂಗ್ ಹೊಂದಿರುವ ಆಟಗಾರ್ತಿ ಕರ್ನಾಟಕದ ಸುಶ್ರುತಾ ರೆಡ್ಡಿ (ರೇ.1868) ಎದುರು ಸೋಲು ಅನುಭವಿಸಿದರು.

ಕರ್ನಾಟಕದ ಎ.ಆಗಸ್ಟಿನ್ ಅವರು ಕೇರಳದ ಎ.ಅಭಿಷೇಕ್ ವಿರುದ್ಧ ಹಾಗೂ ತಮಿಳುನಾಡಿನ ಡಿ.ಆರ್.ಶ್ರೀನಿವಾಸ್ ಅವರು ಅದೇ ರಾಜ್ಯದ ಎಸ್.ಜಾನ್ ಜೋಸೆಫ್ ಎದುರು   ಪಾಯಿಂಟ್ಸ್ ಹಂಚಿಕೊಂಡರು. ಮೈಸೂರಿನ ಬಿ.ಎನ್.ಗಂಗಮ್ಮ ಅವರು ನಮ್ಮ ರಾಜ್ಯದವರೇ ಆದ ರಾಮಚಂದ್ರ ಭಟ್ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.