ADVERTISEMENT

ಚೆಸ್: ಆನಂದ್- ಗ್ರಿಸ್ಚುಕ್ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ವಿಕ್ ಆನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಅಲೆಕ್ಸಾಂಡರ್ ಗ್ರಿಸ್ಚುಕ್ ಜೊತೆ ಡ್ರಾಗೆ ತೃಪ್ತಿಪಟ್ಟುಕೊಂಡರು.

ಆದರೂ ಟೂರ್ನಿಯಲ್ಲಿ ಆನಂದ್ ಅವರು ಜಂಟಿ ಮುನ್ನಡೆಯಲ್ಲಿದ್ದಾರೆ. ಭಾರತದ ಗ್ರ್ಯಾಂಡ್‌ಮಾಸ್ಟರ್ ಇದೀಗ 4.5 ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಅಮೆರಿಕದ ಹಿಕಾರು ನಕಮುರ ಇಷ್ಟೇ ಪಾಯಿಂಟ್ ಕಲೆಹಾಕಿದ್ದು, ಆನಂದ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ನಕಮುರ ಅವರು ‘ಎ’ ಗುಂಪಿನ ಆರನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ಎರ್ವಿನ್ ಲಾ ಅಮಿ ವಿರುದ್ಧ ಜಯ ಪಡೆದರು. ಅರ್ಮೆನಿಯದ ಲೆವೊನ್ ಅರೋನಿಯನ್, ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್, ಇಯಾನ್ ನೆಪೊಂನಿಯಾಚಿ, ಫ್ರಾನ್ಸ್‌ನ ಮ್ಯಾಕ್ಸಿಮ್ ಲಗ್ರೇವ್ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರು ತಲಾ 3.5 ಪಾಯಿಂಟ್ ಹೊಂದಿದ್ದಾರೆ.

ಇದೇ ಟೂರ್ನಿಯ ‘ಸಿ’ ಗುಂಪಿನಲ್ಲಿ ಕಣದಲ್ಲಿರುವ ಭಾರತದ ತಾನಿಯಾ ಸಚ್‌ದೇವ್ ಆರನೇ ಸುತ್ತಿನಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.ಅವರು ಅಗ್ರಸ್ಥಾನದಲ್ಲಿದ್ದ ಇಟಲಿಯ ಡೇನಿಯೆಲ್ ವೊಕಾಟುರೊ ವಿರುದ್ಧ ಜಯ ಸಾಧಿಸಿದರು. ಈ ಗೆಲುವಿನ ಮೂಲಕ ತಾನಿಯಾ ತಮ್ಮ ಪಾಯಿಂಟ್‌ನ್ನು 3.5ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತದ ಸೂರ್ಯಶೇಖರ್ ಗಂಗೂಲಿ ಅವರು ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.