ADVERTISEMENT

ಚೆಸ್: 15 ವರ್ಷದೊಳಗಿನವರ ಚಾಂಪಿಯನ್‌ಷಿಪ್: ಅಗ್ರಸ್ಥಾನಕ್ಕೇರಿದ ಸಾತ್ವಿಕ್:

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಮಂಗಳೂರು: ಬೆಂಗಳೂರಿನ ಎಂ.ಸಾತ್ವಿಕ್, ರಾಜ್ಯ 15 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ಐದೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದು, ಶುಕ್ರವಾರದ ಕೊನೆಗೆ ನಿಕಟ  ಸ್ಪರ್ಧಿಗಳಿಗಿಂತ ಒಂದು ಪಾಯಿಂಟ್ ಮುನ್ನಡೆಯ ಅನುಕೂಲ ಸಾಧಿಸಿದ್ದಾರೆ.

ದ.ಕ. ಜಿಲ್ಲಾ ಚೆಸ್ ಸಂಸ್ಥೆ (ಎಸ್‌ಕೆಡಿಸಿಎ) ಆಶ್ರಯದಲ್ಲಿ ಕೊಡಿಯಾಲಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸಾತ್ವಿಕ್ ಅವರನ್ನು ಮೂವರು ಹಿಂಬಾಲಿಸಿದ್ದಾರೆ. ಮಂಗಳೂರಿನ ಆಂಡ್ರಿಯಾ ಎಲ್.ಡಿಸೋಜ, ಕೊಡಗಿನ ಆಗಸ್ಟಿನ್ ಮತ್ತು ಶಿವಮೊಗ್ಗದ ನಿಖಿಲ್ ಆರ್.ಉಮೇಶ್ ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

ಮಂಗಳೂರಿನ ಶಾಬ್ಧಿಕ್ ವರ್ಮಾ, ಶರಣ್ ರಾವ್, ಬೆಂಗಳೂರಿನ ಪಾರ್ಥಸಾರಥಿ ತಲಾ ನಾಲ್ಕು ಪಾಯಿಂಟ್‌ಗಳೊಡನೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ADVERTISEMENT

ಆರನೇ ಸುತ್ತಿನ ಮೊದಲ ಬೋರ್ಡ್‌ನ ಪಂದ್ಯ ಹೋರಾಟದಿಂದ ಕೂಡಿದ್ದರೂ ಎರಡನೇ ಶ್ರೇಯಾಂಕದ ಸಾತ್ವಿಕ್, ನಿಖಿಲ್ ಆರ್.ಉಮೇಶ್ ಜತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು. ಆಂಡ್ರಿಯಾ ಡಿಸೋಜ ಮತ್ತು ಪಾರ್ಥಸಾರಥಿ ನಡುವಣ ಎರಡನೇ ಬೋರ್ಡ್ ಪಂದ್ಯವೂ ಡ್ರಾ ಆಯಿತು.

ಆರಂಭದ ಸುತ್ತುಗಳ ಹಿನ್ನಡೆಯಿಂದ ಚೇತರಿಸಿದ ಆಗಸ್ಟಿನ್, ಮೈಸೂರಿನ ಎಚ್.ಎ.ಅಮೋಘ (3.5) ವಿರುದ್ಧ 21 ನಡೆಗಳಲ್ಲಿ ಜಯಗಳಿಸಿದರೆ, ಮಂಗಳೂರಿನ ಪಿ.ಗೋಪಾಲಕೃಷ್ಣ ನಾಯಕ್ (3), ಶರಣ್ ರಾವ್ ಎದುರು ಶರಣಾದ. ವಿವೇಕರಾಜ್ (3), ಶಾಬ್ಧಿಕ್ ವರ್ಮಾ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.