ADVERTISEMENT

ಚೊಚ್ಚಲ ಪಂದ್ಯದಲ್ಲಿ ‘ಸಮರ್ಥ’ ಆಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಬೆಂಗಳೂರು: ‘ಮೊದಲ ರಣಜಿ ಪಂದ್ಯ ದಲ್ಲಿ  ಉತ್ತಮವಾಗಿ ಆಡಬೇಕೆನ್ನುವ ಆಸೆ ಹೊಂದಿದ್ದೆ. ಮೊದಲ ಇನಿಂಗ್ಸ್‌ ನಲ್ಲಿ ಅದು ಸಾಧ್ಯವಾಗಲಿಲ್ಲವಾದರೂ, ಎರಡನೇ ಇನಿಂಗ್ಸ್‌ನಲ್ಲಿ  ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ...’ ಮುಂಬೈ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಮಂಗಳವಾರ ಅರ್ಧಶತಕ ಗಳಿಸಿದ ಮೈಸೂರಿನ ರವಿಕುಮಾರ್‌ ಸಮರ್ಥ್‌ ಹೇಳಿದ ಮಾತಿದು.

ಶಫಿ ದಾರಾಶಾ ಟೂರ್ನಿಯಲ್ಲಿ ಈ ಆರಂಭಿಕ ಬ್ಯಾಟ್ಸ್‌ಮನ್‌ ರನ್‌ ಹೊಳೆಯೇ ಹರಿಸಿದ್ದರು. ಐದು ಪಂದ್ಯಗಳಿಂದ ಆರು ಶತಕ ಸೇರಿದಂತೆ ಒಟ್ಟು 850 ರನ್ ಗಳಿಸಿದ್ದು ಇದಕ್ಕೆ ಸಾಕ್ಷಿ. ಇದು ಅವರಿಗೆ ರಣಜಿ ತಂಡದಲ್ಲಿ ಸ್ಥಾನ ದೊರಕಿಸಿಕೊಟ್ಟಿದೆ. ಈ ಮಾತನ್ನು ಸಮರ್ಥ್‌ ಕೂಡಾ ಒಪ್ಪುತ್ತಾರೆ.

ಮೂರನೇ ದಿನದಾಟದ ನಂತರ ಮಾತನಾಡಿದ ಅವರು ‘ಈ ವರ್ಷದ ಶಫಿ ದಾರಾಶಾ ಟೂರ್ನಿ ನನ್ನ ಜೀವನಕ್ಕೆ ಲಭಿಸಿದ ಮಹತ್ವದ ತಿರುವು. ಮೊದಲ ರಣಜಿ ಪಂದ್ಯದಲ್ಲಿ ಅರ್ಧಶತಕ ಗಳಿಸಲು ಸಾಧ್ಯವಾಗಿದ್ದು ಖುಷಿನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾಗಿದ್ದು ಸಮಾಧಾನ ತಂದಿದೆ’ ಎಂದರು.

ಮೈ ಚಳಿ ಬಿಟ್ಟು ಎದುರಾಳಿ ಬೌಲರ್‌ ಗಳನ್ನು ಸಮರ್ಥವಾಗಿ ದಂಡಿಸುವ ಸಮರ್ಥ್‌ ಮೊದಲ ರಣಜಿಯಲ್ಲಿ ತಮ್ಮ ಶಕ್ತಿಯನ್ನು ಸಾಬೀತು ಮಾಡಿದ್ದಾರೆ. ‘ಆರಂಭಿಕ ಬ್ಯಾಟ್ಸ್‌ಮನ್‌ಗಳ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇದೆ. ಆದ್ದರಿಂದ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬೇಕಾದ ಸವಾಲಿದೆ. ಅದಕ್ಕೆ ಸಜ್ಜಾಗಿದ್ದೇನೆ’ ಎಂದು ಜೈನ್‌ ಮಹಾವೀರ ಜೈನ್‌ ಕಾಲೇಜಿನಲ್ಲಿ ಓದುತ್ತಿರುವ ಸಮರ್ಥ್‌ ನುಡಿದರು.

ಮೊದಲ ಗುರಿ ಈಡೇರಿದೆ: ‘ಇನಿಂಗ್ಸ್‌ ಮುನ್ನಡೆ ಸಾಧಿಸುವುದು ಮೊದಲ ಗುರಿಯಾಗಿತ್ತು. ಆ ಗುರಿಯನ್ನು ಮುಟ್ಟಿದ್ದೇವೆ’ ಎಂದು ಮುಂಬೈ ತಂಡದ ಸಿದ್ದೇಶ್‌ ಲಾಡ್‌ ಹೇಳಿದರು. ‘ಬುಧವಾರ 300 ರನ್‌ ಒಳಗೆ ಕರ್ನಾಟಕ ತಂಡವನ್ನು ಕಟ್ಟಿ ಹಾಕಿ ಗೆಲುವು ಪಡೆಯುತ್ತೇವೆ. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ನಮ್ಮ ಆಸೆ’ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.