ADVERTISEMENT

ಜಪಾನ್‌ ತಂಡಕ್ಕೆ ಪ್ರಶಸ್ತಿ ಸಂಭ್ರಮ

ಉಬರ್ ಕಪ್‌: ಮೂರು ದಶಕಗಳ ನಂತರ ಪ್ರಶಸ್ತಿ ಗೆದ್ದ ಮಹಿಳಾ ತಂಡ; ಥಾಯ್ಲೆಂಡ್‌ಗೆ ನಿರಾಸೆ

ಏಜೆನ್ಸೀಸ್
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಉಬರ್ ಕಪ್ ಪ್ರಶಸ್ತಿ ಗೆದ್ದ ಜಪಾನ್ ತಂಡದ ನಾಯಕಿ ಅಯಾಕ ತಕಹಶಿ (ಕಪ್‌ ಹಿಡಿದುಕೊಂಡವರು) ಇತರ ಆಟಗಾರರ ಜೊತೆ ಸಂಭ್ರಮಿಸಿದರು. -ಎಎಫ್‌ಪಿ ಚಿತ್ರ
ಉಬರ್ ಕಪ್ ಪ್ರಶಸ್ತಿ ಗೆದ್ದ ಜಪಾನ್ ತಂಡದ ನಾಯಕಿ ಅಯಾಕ ತಕಹಶಿ (ಕಪ್‌ ಹಿಡಿದುಕೊಂಡವರು) ಇತರ ಆಟಗಾರರ ಜೊತೆ ಸಂಭ್ರಮಿಸಿದರು. -ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ಥಾಯ್ಲೆಂಡ್ ತಂಡವನ್ನು ಮಣಿಸಿದ ಜಪಾನ್‌ ಮಹಿಳೆಯರು ಉಬರ್ ಕಪ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಗೆದ್ದರು. ಈ ಮೂಲಕ 37 ವರ್ಷಗಳ ನಂತರ ತಮ್ಮ ರಾಷ್ಟ್ರಕ್ಕೆ ಪ್ರಶಸ್ತಿಯ ಕಾಣಿಕೆ ನೀಡಿದರು.

ಚೀನಾವನ್ನು ಸೋಲಿಸಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ್ದ ಆತಿಥೇಯರನ್ನು ಶನಿವಾರ ನಡೆದ ಫೈನಲ್‌ನಲ್ಲಿ ಜಪಾನ್‌ 3–0ಯಿಂದ ಹಿಂದಿಕ್ಕಿತು. ಸಿಂಗಲ್ಸ್ ವಿಭಾಗದ ವಿಶ್ವಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಅಕಾನೆ ಯಮಗುಚಿ ಅವರು ಜಪಾನ್‌ಗೆ ಮುನ್ನಡೆ ಗಳಿಸಿಕೊಟ್ಟರು. ರಚನಾಕ್ ಇಂಟನಾನ್ ವಿರುದ್ಧ ಅವರು 21–15, 21–19ರಿಂದ ಗೆದ್ದರು.

ಎದುರಾಳಿ ಒತ್ತಡ ಹೇರಲು ಶ್ರಮಿಸಿದಾಗಲೆಲ್ಲ ತಾಳ್ಮೆಯಿಂದ ಆಡಿದ ಅಕಾನೆ, ನೆಟ್‌ ಬಳಿ ಅಮೋಘ ಡ್ರಾಪ್‌ಗಳ ಮೂಲಕ ಪ್ರೇಕ್ಷಕರಿಗೆ ಮುದ ನೀಡಿದರು. ಮೊದಲ ಗೇಮ್‌ನಲ್ಲಿ ಸೋತ ರಚನಾಕ್‌ ಎರಡನೇ ಗೇಮ್‌ನಲ್ಲಿ ತಾಳ್ಮೆ ಕಳೆದುಕೊಂಡರು.

ADVERTISEMENT

ಮರುಪರಿಶೀಲನೆಗೆ ಒಪ್ಪದ ಅಂಪೈರ್‌ ಜೊತೆ ವಾಗ್ವಾದ ನಡೆಸಿದರು. ಒತ್ತಡಲ್ಲಿ ಆಡಿದ ಅವರನ್ನು ಅಕಾನೆ ಸುಲಭವಾಗಿ ಮಣಿಸಿದರು.

ಡಬಲ್ಸ್ ವಿಭಾಗದಲ್ಲಿ ಯೂಕಿ ಫುಕುಶಿಮಾ ಮತ್ತು ಸಯಾಕ ಹಿರೋಟ ಅವರು 21–18, 21–12ರಿಂದ ಕಿಟಿತರಾಕುಲ್ ಮತ್ತು ಪುಟೀಟಾ ಸುಪಜರಾಕುಲ್‌ ಅವರನ್ನು ಸೋಲಿಸಿ ಎರಡನೇ ಪಾಯಿಂಟ್ ಗೆದ್ದುಕೊಟ್ಟರು. ಮೂರನೇ ಪಂದ್ಯದಲ್ಲಿ ನೊಜೊಮಿ ಒಕುಹರಾ 21–12, 21–9ರಿಂದ ನಿಚಾನ್ ಜಿಂದಾಪಾಲ್ ಅವರನ್ನು ಮಣಿಸಿ ಜಪಾನ್ ಪಾಳೆಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

‘ಇದು ನಾಲ್ಕು ವರ್ಷಗಳಿಂದ ನಾವು ಹಾಕಿದ ಶ್ರಮಕ್ಕೆ ಸಿಕ್ಕಿದ ಫಲವಾಗಿದೆ. ಈಗ ಅತ್ಯುತ್ತಮ ತಂಡವನ್ನು ಕಟ್ಟಲು ಸಾಧ್ಯವಾಗಿರುವುದು ಖುಷಿ ತಂದಿದೆ’ ಎಂದು ಕೋಚ್‌ ಪಾರ್ಕ್ ಜೂ ಬಾಂಗ್ ಅಭಿಪ್ರಾಯಪಟ್ಟರು.

‘ಫೈನಲ್‌ ಪಂದ್ಯಕ್ಕೂ ಮೊದಲು ಇಲ್ಲಿನ ವಾತಾವರಣ ಕಂಡು ಆತಂಕ ಮೂಡಿತ್ತು. ಆದರೆ ತಂಡ ಒಂದಿಷ್ಟೂ ಆತಂಕಪಡದೆ ಆಡಿತು. ಪ್ರತಿಯೊಬ್ಬ ಆಟಗಾರ್ತಿಯಲ್ಲಿಯೂ ಜಯದ ದಾಹ ಇತ್ತು. ಇದುವೇ ಪ್ರಶಸ್ತಿ ಗೆಲ್ಲಲು ಕಾರಣ’ ಎಂದು ಅವರು ಹೇಳಿದರು.

*
37 ವರ್ಷಗಳ ಹಿಂದೆ ಜಪಾನ್‌ ಬಲಿಷ್ಠವಾಗಿತ್ತು. ನಾವು ಮತ್ತೊಮ್ಮೆ ಆ ಮಟ್ಟಕ್ಕೆ ಬೆಳೆದಿರುವುದು ಸಂತಸ ಉಕ್ಕಿಸಿದೆ.
-ನೊಜೊಮಿ ಒಕುಹರ, ಜಪಾನ್ ತಂಡದ ಆಟಗಾರ್ತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.