
ರಿಯೊ ಡಿ ಜನೈರೊ: ಜಮೈಕದ ಎಲೈನ್ ಥಾಮ್ಸನ್ ರಿಯೊ ಒಲಿಂಪಿಕ್ ಕೂಟದ ‘ಅತಿವೇಗದ ಓಟಗಾರ್ತಿ’ ಎಂಬ ಹಿರಿಮೆ ತಮ್ಮದಾಗಿಸಿಕೊಂಡರೆ, ಬ್ರಿಟನ್‌ನ ಮೊಹಮ್ಮದ್ ಫರಾ ದೂರ ಅಂತರದ ಓಟದಲ್ಲಿ ಮತ್ತೆ ಪಾರಮ್ಯ ಮೆರೆದಿದ್ದಾರೆ.
ಶನಿವಾರ ರಾತ್ರಿ ನಡೆದ ಮಹಿಳೆಯರ 100 ಮೀ. ಓಟದಲ್ಲಿ ಎಲೈನ್ ಥಾಮ್ಸನ್ 10.71 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿ ಹೊಸ ‘ಸ್ಪ್ರಿಂಟ್ ರಾಣಿ’ ಎನಿಸಿಕೊಂಡರು.
ಅಮೆರಿಕದ ಟೊರಿ ಬೊವೀ (10.83 ಸೆ.) ಎರಡನೇ ಸ್ಥಾನ ಪಡೆದರೆ, ಇಲ್ಲಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಜಮೈಕದ ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್ (10.86) ಕಂಚು ಪಡೆದರು.
ಮಹಿಳೆಯರ 100 ಮೀ. ಓಟದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಎಲ್ಲಾ ಎಂಟು ಅಥ್ಲೀಟ್‌ಗಳು ಹೀಟ್ಸ್/ ಸೆಮಿ ಫೈನಲ್‌ನಲ್ಲಿ 11 ಸೆಕೆಂಡುಗಳ ಒಳಗೆ ಸ್ಪರ್ಧೆ ಪೂರೈಸಿದ್ದರು. ಇದರಿಂದ ಫೈನಲ್‌ನಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿತ್ತು.
ಆದರೆ ಎಲೈನ್ ಇತರ ಸ್ಪರ್ಧಿಗಳನ್ನು ನಿರಾಯಾಸದಿಂದ ಹಿಂದಿಕ್ಕಿ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ನಿಧಾನ ಆರಂಭ ಪಡೆದರೂ 50 ಮೀ. ಕ್ರಮಿಸಿದ ಬಳಿಕ ಅವರು ವೇಗ ಹೆಚ್ಚಿಸಿಕೊಂಡರು.
ಅಥ್ಲೆಟಿಕ್ಸ್‌ನ ವೈಯಕ್ತಿಕ ವಿಭಾಗದ ಸ್ಪರ್ಧೆಯೊಂದರಲ್ಲಿ ಸತತ ಮೂರು ಒಲಿಂಪಿಕ್ ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿಕೊಳ್ಳುವ ಅವಕಾಶವನ್ನು ಫ್ರೇಸರ್ ಕಳೆದುಕೊಂಡರು.
‘ಚಿನ್ನ ಗೆಲ್ಲಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಅದು ನಡೆಯಲಿಲ್ಲ. ಏನೇ ಆಗಲಿ, 100 ಮೀ. ಓಟದ ಚಿನ್ನ ಜಮೈಕ ತನ್ಮಲ್ಲೇ ಉಳಿಸಿಕೊಂಡದ್ದು ಸಂತಸ ಉಂಟುಮಾಡಿದೆ’ ಎಂದು 29ರ ಹರೆಯದ ಫ್ರೇಸರ್ ಹೇಳಿದ್ದಾರೆ.
‘ಗೆಲುವಿನ ಗುರಿ ಮುಟ್ಟುತ್ತಿ ದ್ದಂತೆಯೇ ಅತ್ತಿತ್ತ ನೋಡಿದೆ. ಮೊದಲ ಸ್ಥಾನ ನನಗೆ ದೊರೆತಿದೆ ಎಂಬುದು ಖಚಿತವಾದಾಗ ಹೇಗೆ ಸಂಭ್ರಮಿಸಬೇಕು ಎಂದು ತಿಳಿಯಲಿಲ್ಲ. ನನ್ನನ್ನು ನಾನೇ ಮರೆತ್ತಿದ್ದೆ’ ಎಂದು ಎಲೈನ್ ಪ್ರತಿಕ್ರಿಯಿಸಿ ದ್ದಾರೆ. ಜಮೈಕದ 24ರ ಹರೆಯದ ಅಥ್ಲೀಟ್ ಹೋದ ವರ್ಷ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 200 ಮೀ. ಓಟದಲ್ಲಿ ಚಿನ್ನ ಜಯಿಸಿದ್ದರು.
ಫರಾ ಮಿಂಚು: ದೂರ ಅಂತರದ ಓಟದಲ್ಲಿ ಸದ್ಯ ತನಗೆ ಸವಾಲೊಡ್ಡಬಲ್ಲ ಯಾವುದೇ ಅಥ್ಲೀಟ್ ಈ ಜಗತ್ತಿನಲ್ಲಿಲ್ಲ ಎಂಬುದನ್ನು ಫರಾ ತೋರಿಸಿಕೊಟ್ಟರು.
ಅಂತಿಮ ಲ್ಯಾಪ್‌ನಲ್ಲಿ ಮಿಂಚಿನ ವೇಗದಲ್ಲಿ ಓಡಿದ ಫರಾ 27 ನಿಮಿಷ 5.17 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕೆನ್ಯಾದ ಪೌಲ್ ತನುಯ್ ಮತ್ತು ಇಥಿಯೋಪಿಯದ ತಮಿರತ್ ತೊಲಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.
ಲಂಡನ್ ಕೂಟದಲ್ಲಿ 10 ಸಾವಿರ ಮತ್ತು 5 ಸಾವಿರ ಮೀ. ಓಟದಲ್ಲಿ ಚಿನ್ನ ಜಯಿಸಿದ್ದ ಫರಾ ರಿಯೊದಲ್ಲಿ ಈ ಎರಡೂ ವಿಭಾಗಗಳಲ್ಲಿ ಚಿನ್ನ ತಮ್ಮಲ್ಲೇ ಉಳಿಸಿಕೊಳ್ಳುವ ಗುರಿ ಇಟ್ಟುಕೊಂಡಿದ್ದರು. ಇದೀಗ ಒಂದರಲ್ಲಿ ಯಶಸ್ವಿಯಾಗಿದ್ದು, 5 ಸಾವಿರ ಮೀ. ಓಟದತ್ತ ಗಮನ ಕೇಂದ್ರೀಕರಿಸಿದ್ದಾರೆ.
ಫರಾ ಅರ್ಧ ಹಾದಿ ಕ್ರಮಿಸುವವರೆಗೆ ಇಥಿಯೋಪಿಯ ಮತ್ತು ಕೆನ್ಯಾದ ಅಥ್ಲೀಟ್‌ಗಳ ಹಿಂದೆಯೇ ಓಡುತ್ತಿದ್ದರು. ಆದರೆ ಕೊನೆಯ ಕೆಲವು ಲ್ಯಾಪ್‌ಗಳು ಇರುವಾಗ ವೇಗ ಹೆಚ್ಚಿಸಿ ಕೊಂಡು ಮೊದಲಿಗರಾಗಿ ಗುರಿ ಮುಟ್ಟಿದರು.
ಜೆಸ್ಸಿಕಾ ಎನಿಸ್‌ಗೆ ನಿರಾಸೆ: ಬ್ರಿಟನ್‌ನ ಜೆಸ್ಸಿಕಾ ಎನಿಸ್ ಹಿಲ್ ಮಹಿಳೆಯರ ಹೆಪ್ಟಥ್ಲಾನ್‌ನಲ್ಲಿ ಸತತ ಎರಡನೇ ಒಲಿಂಪಿಕ್ಸ್ ಚಿನ್ನ ಗೆಲ್ಲುವಲ್ಲಿ ವಿಫಲರಾದರು.
ಶನಿವಾರ ನಡೆದ ಸ್ಪರ್ಧೆಯಲ್ಲಿ ಬೆಲ್ಜಿಯಂ 21ರ ಹರೆಯದ ನಫೀಸತು ತಿಯಾಮ್ ಅವರು ಬ್ರಿಟನ್‌ನ ಸ್ಪರ್ಧಿ ಯನ್ನು ಎರಡನೇ ಸ್ಥಾನಕ್ಕೆ ಹಿಂದಿಕ್ಕಿ ಚಿನ್ನ ಗೆದ್ದರು.
ಫಲಿತಾಂಶ: ಪುರುಷರ ವಿಭಾಗ: 10 ಸಾವಿರ ಮೀ. ಓಟ: ಮೊಹಮ್ಮದ್ ಫರಾ, ಬ್ರಿಟನ್ (27:05.17 ಸೆ.)–1, ಪೌಲ್ ತನುಯ್, ಕೆನ್ಯಾ (27:05.64 ಸೆ.)–2, ತಮಿರತ್ ತೊಲಾ, ಇಥಿಯೋಪಿಯ (27:06.26 ಸೆ.)–3
ಲಾಂಗ್ ಜಂಪ್: ಜೆಫ್ ಹೆಂಡರ್ಸನ್, ಅಮೆರಿಕ (8.38 ಮೀ.)–1, ಲುವೊ ಮನ್ಯೊಂಗ, ದಕ್ಷಿಣ ಆಫ್ರಿಕಾ (8.37)–2, ಗ್ರೆಗ್ ರುದರ್‌ಫರ್ಡ್, ಬ್ರಿಟನ್ (8.29)–3
ಮಹಿಳೆಯರ ವಿಭಾಗ: 100 ಮೀ. ಓಟ: ಎಲೈನ್ ಥಾಮ್ಸನ್, ಜಮೈಕ (10.71 ಸೆ.)–1, ಟೊರಿ ಬೊವೀ, ಅಮೆರಿಕ (10.83)–2, ಶೆಲ್ಲಿ ಆ್ಯನ್ ಫ್ರೇಸರ್ ಪ್ರೈಸ್, ಜಮೈಕ (10.86)–3
ಹೆಪ್ಟಥ್ಲಾನ್: ನಫೀಸತು ತಿಯಾಮ್, ಬೆಲ್ಜಿಯಂ (6810 ಪಾಯಿಂಟ್)–1, ಜೆಸ್ಸಿಕಾ ಎನಿಸ್ ಹಿಲ್, ಬ್ರಿಟನ್ (6775 ಪಾಯಿಂಟ್)–2, ಬ್ರಿಯಾನ್ ತೀಸೆನ್, ಕೆನಡಾ (6653 ಪಾಯಿಂಟ್)–3
ಕೆನ್ಯಾದ ಜೆಮಿಮಾಗೆ ಮ್ಯಾರಥಾನ್ ಚಿನ್ನ
ಕೆನ್ಯಾದ ಜೆಮಿಮಾ ಜೆಲೆಗಟ್ ಸುಮ್ಗಾಂಗ್ ಮಹಿಳೆಯರ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದರು. ಒಲಿಂಪಿಕ್ ಮ್ಯಾರಥಾನ್‌ನಲ್ಲಿ ಕೆನ್ಯಾದ ಮಹಿಳೆ ಗೆಲುವು ಪಡೆದದ್ದು ಇದೇ ಮೊದಲು.
ಭಾನುವಾರ ನಡೆದ ಸ್ಪರ್ಧೆಯಲ್ಲಿ ಜೆಮಿಮಾ 42.195 ಕಿ.ಮೀ. ದೂರವನ್ನು 2 ಗಂಟೆ 24 ನಿಮಿಷ 3 ಸೆಕೆಂಡುಗಳಲ್ಲಿ ಕ್ರಮಿಸಿದರು. ಬಹರೇನ್‌ನ ಯೂನಿಸ್ ಜೆಪ್‌ಕಿರುಯ್ ಕಿರ್ವಾ (2 ಗಂಟೆ 14.13 ಸೆ.) ಬೆಳ್ಳಿ ಗೆದ್ದರೆ, ಇಥಿಯೋಪಿಯದ ಮರೇ ದಿಬಾಬ (2 ಗಂಟೆ 24.30 ಸೆ.) ಕಂಚು ಜಯಿಸಿದರು.
ಕಣದಲ್ಲಿದ್ದ ಭಾರತದ ಒ.ಪಿ. ಜೈಶಾ ಮತ್ತು ಕವಿತಾ ರಾವತ್ ಕ್ರಮವಾಗಿ 89 ಹಾಗೂ 120ನೇ ಸ್ಥಾನ ಪಡೆದುಕೊಂಡರು.
ಮುಖ್ಯಾಂಶಗಳು
* ಲಂಡನ್ ಕೂಟದ ಚಿನ್ನದ ಪದಕ ವಿಜೇತ ಫ್ರೇಸರ್ ಪ್ರೈಸ್‌ಗೆ ನಿರಾಸೆ
* ಬೆಲ್ಜಿಯಂನ ನಫೀಸತು ತಿಯಾಮ್‌ಗೆ ಹೆಪ್ಟಥ್ಲಾನ್ ಚಿನ್ನ
* ಲಾಂಗ್‌ಜಂಪ್‌ನಲ್ಲಿ ಮಿಂಚಿದ ಹೆಂಡರ್ಸನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.