ADVERTISEMENT

ಜಯದ ನಿರೀಕ್ಷೆಯಲ್ಲಿ ಬಿಎಫ್‌ಸಿ

ಎಎಫ್‌ಸಿ ಕಪ್‌ ಫುಟ್‌ಬಾಲ್: ಅಬಹಾನಿ ವಿರುದ್ಧ ಇಂದು ಪಂದ್ಯ

ವಿಕ್ರಂ ಕಾಂತಿಕೆರೆ
Published 13 ಮಾರ್ಚ್ 2018, 19:38 IST
Last Updated 13 ಮಾರ್ಚ್ 2018, 19:38 IST
ಬುಧವಾರ ನಡೆಯಲಿರುವ ಎಎಫ್‌ಸಿ ಕಪ್‌ ಗುಂಪು ಹಂತದ ಪಂದ್ಯಕ್ಕಾಗಿ ಬಿಎಫ್‌ಸಿ ಆಟಗಾರರು ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ
ಬುಧವಾರ ನಡೆಯಲಿರುವ ಎಎಫ್‌ಸಿ ಕಪ್‌ ಗುಂಪು ಹಂತದ ಪಂದ್ಯಕ್ಕಾಗಿ ಬಿಎಫ್‌ಸಿ ಆಟಗಾರರು ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು ಪ್ರಜಾವಾಣಿ ಚಿತ್ರ/ಆರ್‌.ಶ್ರೀಕಂಠ ಶರ್ಮಾ   

ಬೆಂಗಳೂರು: ಐಎಸ್‌ಎಲ್‌ನಲ್ಲಿ ಅಮೋಘ ಆಟವಾಡಿ ಫುಟ್‌ಬಾಲ್‌ ಪ್ರೇಮಿಗಳ ಮನ ಗೆದ್ದಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವು ಬುಧವಾರ ಎಎಫ್‌ಸಿ ಕಪ್‌ ಟೂರ್ನಿಯ ‘ಇ’ ಗುಂಪಿನ ಪಂದ್ಯದಲ್ಲಿ ಜಯಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ದೇಶಿ ಫುಟ್‌ಬಾಲ್‌ನಲ್ಲಿ ನಿರಂತರ ಉತ್ತಮ ಸಾಧನೆ ಮಾಡುತ್ತಿರುವ ಬಿಎಫ್‌ಸಿಗೆ ಎಎಫ್‌ಸಿ(ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್) ಕಪ್‌ ಗುಂಪು ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಢಾಕಾ ಅಬಹಾನಿ ತಂಡ ಎದುರಾಳಿ.

ಮಾಲ್ಡಿವ್ಸ್‌ನ ಟಿ.ಸಿ.ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ 5–0 ಅಂತರದ ಗೆಲುವು ಸಾಧಿಸಿ ಬಿಎಫ್‌ಸಿ ಗುಂಪು ಹಂತಕ್ಕೆ ಲಗ್ಗೆ ಇಟ್ಟಿದೆ. ಆ ಪಂದ್ಯದಲ್ಲಿ ಟೋನಿ ಡೊವ್ಯಾಲ್‌ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ಎರಿಕ್ ಪಾರ್ಟಲು ಮತ್ತು ರಾಹುಲ್‌ ಭೆಕೆ ಕೂಡ ಮಿಂಚಿದ್ದರು. ಇನ್ನೊಂದೆಡೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ ಚಾಂಪಿಯನ್‌ ಅಬಹಾನಿ ತಂಡ ಮಾಲ್ಡಿವ್ಸ್‌ನ ನ್ಯೂ ರೇಡಿಯಂಟ್‌ ಕ್ಲಬ್‌ ವಿರುದ್ಧ ಗೆದ್ದು ಇಲ್ಲಿಗೆ ಬಂದಿಳಿದಿದೆ.

ADVERTISEMENT

ಕಳೆದ ವರ್ಷದ ಏಪ್ರಿಲ್‌ನಲ್ಲಿ ಅಬಹಾನಿ ತಂಡವನ್ನು ಎದುರಿಸಿದ್ದಾಗ ಬಿಎಫ್‌ಸಿ 2–0 ಅಂತರದ ಗೆಲುವು ಸಾಧಿಸಿತ್ತು. ನಿಶು ಕುಮಾರ್‌ ಮತ್ತು ಮರ್ಜಾನ್ ಜುಗೊವಿಚ್‌ ಆ ಪಂದ್ಯದಲ್ಲಿ ಮಿಂಚಿದ್ದರು.

ಪ್ರಮುಖರಿಗೆ ವಿಶ್ರಾಂತಿ
ಐಎಸ್‌ಎಲ್ ಫೈನಲ್‌ಗೆ ಸಜ್ಜಾಗುತ್ತಿರುವ ಬಿಎಫ್‌ಸಿ ಬುಧವಾರದ ಪಂದ್ಯದಲ್ಲಿ ಪ್ರಮುಖರಿಗೆ ವಿಶ್ರಾಂತಿ ನೀಡಲಿದೆ. ಇದನ್ನು ಕೋಚ್‌ ಆಲ್ಬರ್ಟ್ ರೋಕಾ ಖಚಿತಪಡಿಸಿದ್ದಾರೆ.

‘ಸದ್ಯ ತಂಡದ ಆದ್ಯತೆ ಐಎಸ್ಎಲ್‌ ಫೈನಲ್‌. ನಮ್ಮ ಪಾಲಿಗೆ ಆ ಹಣಾಹಣಿ ಮಹತ್ವದ್ದು. ಆದ್ದರಿಂದ ಪ್ರಮುಖ ಆಟಗಾರರಿಗೆ ಎಎಫ್‌ಸಿ ಕಪ್‌ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗುವುದು’ ಎಂದು ರೋಕಾ ತಿಳಿಸಿದರು.

ಎಎಫ್‌ಸಿ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲೂ ಯುವ ಆಟಗಾರರನ್ನು ರೋಕಾ ಕಣಕ್ಕೆ ಇಳಿಸಿದ್ದರು. ಆ ಪಂದ್ಯದಲ್ಲಿ ಮಿಂಚಿದ್ದ ಥಾಂಗ್‌ಕೊಸ್ಯೆಮ್ ಹಾಕಿಪ್‌ ಬುಧವಾರ ಸುನಿಲ್ ಚೆಟ್ರಿ ಬದಲಿಗೆ ಕಣಕ್ಕೆ ಇಳಿಯಲಿದ್ದಾರೆ.

ಎಮೆಕಾ ಡಾರ್ಲಿಂಗ್ಟನ್ ಮೇಲೆ ಕಣ್ಣು: ಅಬಹಾನಿ ತಂಡವೂ ಬಲಿಷ್ಠವಾಗಿದೆ. ಸ್ಟ್ರೈಕರ್‌ಗಳಾದ ಎಮೆಕಾ ಡಾರ್ಲಿಂಗ್ಟನ್‌ ಮತ್ತು ಸಂಡೇ ಚಿಜೋಬಾ ಬಿಎಫ್‌ಸಿಯ ರಕ್ಷಣಾ ಬಳಗಕ್ಕೆ ಸವಾಲಾಗಬಲ್ಲರು. ಜಪಾನ್‌ನ ಮಿಡ್‌ಫೀಲ್ಡರ್‌ ಸೇಯಾ ಕೊಜಿಮಾ ಮತ್ತು ನೈಜೀರಿಯಾದ ಡಿಫೆಂಡರ್‌ ಅಲಿಸಾನ್ ಉಡೋಕ ಅವರ ಬಲವೂ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.