ADVERTISEMENT

ಜಯದ ಹುಡುಕಾಟದಲ್ಲಿ ಹಾಲಿ ಚಾಂಪಿಯನ್ನರು

ಇಂದು ಮುಂಬೈ ಇಂಡಿಯನ್ಸ್‌, ಸನ್‌ರೈಸರ್ಸ್‌ ಹಣಾಹಣಿ

ಪಿಟಿಐ
Published 23 ಏಪ್ರಿಲ್ 2018, 20:08 IST
Last Updated 23 ಏಪ್ರಿಲ್ 2018, 20:08 IST
ಜಯದ ಹುಡುಕಾಟದಲ್ಲಿ ಹಾಲಿ ಚಾಂಪಿಯನ್ನರು
ಜಯದ ಹುಡುಕಾಟದಲ್ಲಿ ಹಾಲಿ ಚಾಂಪಿಯನ್ನರು   

ಮುಂಬೈ: ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತು ನಿರಾಸೆಗೆ ಒಳಗಾಗಿರುವ ಮುಂಬೈ ಇಂಡಿಯನ್ಸ್‌ ತಂಡ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೆಣಸಲಿದೆ.

ತವರಿನಲ್ಲಿ ನಡೆದ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಸೋತಿದ್ದ ಮುಂಬೈ ಇಂಡಿಯನ್ಸ್ ನಂತರವೂ ಎರಡು ಪಂದ್ಯಗಳಲ್ಲಿ ಜಯ ಗಳಿಸ ಲಾಗದೆ ‘ಹ್ಯಾಟ್ರಿಕ್‌’ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ನಾಲ್ಕನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಭರವಸೆ ಮೂಡಿ ಸಿತ್ತು. ಆದರೆ ಭಾನುವಾರ ರಾತ್ರಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲು ತಂಡಕ್ಕೆ ತೀವ್ರ ನಿರಾಸೆ ತಂದಿದೆ.

ಪ್ಲೇ ಆಫ್‌ ಹಂತಕ್ಕೂ ಮೊದಲು ತಂಡದ ಮುಂದೆ ಒಂಬತ್ತು ಪಂದ್ಯಗಳು ಉಳಿದಿವೆ. ಈ ಪೈಕಿ ಕನಿಷ್ಠ ಏಳು ಪಂದ್ಯಗಳನ್ನಾದರೂ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿ ತಂಡಕ್ಕೆ ಒದಗಿದೆ. ಈ ಹಾದಿಯಲ್ಲಿ ಮಂಗಳವಾರದ ಪಂದ್ಯ ಮಹತ್ವದ್ದಾಗಲಿದೆ.

ADVERTISEMENT

ಅತ್ತ, ಸನ್‌ರೈಸರ್ಸ್ ಕೂಡ ಈಗ ನಿರಾಸೆಯಲ್ಲಿದೆ. ಆರಂಭದಲ್ಲಿ ನಿರಂತರ ಜಯ ಗಳಿಸುತ್ತ ಸಾಗಿದ ತಂಡ ನಂತರ ದಿಢೀರನೆ ಸೋಲಿನ ದವಡೆಗೆ ಸಿಲುಕಿದೆ. ಕಳೆದ ಎರಡು ಪಂದ್ಯಗಳನ್ನು ಸೋತಿರುವ ಈ ತಂಡ ಮಂಗಳವಾರ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಶ್ರಮಿಸಲಿದೆ. ಹೀಗಾಗಿ ಪಂದ್ಯ ರೋಚಕವಾಗುವ ನಿರೀಕ್ಷೆ ಇದೆ.

ಸೂರ್ಯಕುಮಾರ್ ಯಾದವ್ ಮೇಲೆ ಭರವಸೆ: ಸ್ಥಳೀಯ ಆಟಗಾರ, ಸೂರ್ಯ ಕುಮಾರ್ ಯಾದವ್‌ ಮೇಲೆ ಮುಂಬೈ ಇಂಡಿಯನ್ಸ್ ತಂಡ ಭರ ವಸೆ ಇರಿಸಿಕೊಂಡಿದೆ. ಈ ವರೆಗೆ ಉತ್ತಮ ಬ್ಯಾಟಿಂಗ್ ಮಾಡಿರುವ ಅವರು ಈಗಾಗಲೇ 200 ರನ್‌ ಗಳಿಸಿ ದ್ದಾರೆ. ಆದರೆ ನಾಯಕ, ಸ್ಫೋಟಕ ಬ್ಯಾಟ್ಸ್‌ ಮನ್ ರೋಹಿತ್ ಶರ್ಮಾ ಅವರಿಗೆ ಇನ್ನೂ ಮಿಂಚಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 94 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅವರು ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ಮಾಡಲಿಲ್ಲ. ಕೀರನ್ ಪೊಲಾರ್ಡ್ ಅವರಿಗೂ ಮಿಂಚಲು ಆಗಲಿಲ್ಲ. ಅವರು ಈ ವರೆಗೆ ಗಳಿಸಿದ ಒಟ್ಟು ರನ್‌ ಕೇವಲ 54! ಹೀಗಾಗಿ ಅವರು ಮುಂಚಿನ ಪಂದ್ಯಗಳಲ್ಲಿ ಬೆಂಚು ಕಾಯಬೇಕಾಗಿ ಬಂದರೂ ಅಚ್ಚರಿ ಇಲ್ಲ. ಪಾಂಡ್ಯ ಸಹೋದರರು ಮತ್ತು ಜಸ್‌ ಪ್ರೀತ್ ಬೂಮ್ರಾ ಕೂಡ ತಮ್ಮ ಸಾಮರ್ಥ್ಯ ಮೆರೆಯಲು ವಿಫಲರಾಗಿದ್ದಾರೆ.

ನಾಯಕನ ಮೇಲೆ ಹೆಚ್ಚಿನ ಹೊರೆ: ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ವಿಭಾಗ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ನೆಚ್ಚಿಕೊಂಡಿದೆ. ಅವರು ಎಲ್ಲ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದು ಈ ವರೆಗೆ ಒಟ್ಟು 230 ರನ್‌ ಕಲೆ ಹಾಕಿದ್ದಾರೆ. ಆದರೆ ಶಿಖರ್ ಧವನ್‌, ವೃದ್ಧಿಮಾನ್ ಸಹಾ ಮತ್ತು ಯೂಸುಫ್ ಪಠಾಣ್‌ ಅವರಂಥ ಅನುಭವಿ ಆಟಗಾರರ ಬ್ಯಾಟಿನಿಂದ ನಿರೀಕ್ಷೆಗೆ ತಕ್ಕ ರನ್ ಹರಿದು ಬರಲಿಲ್ಲ. ‌ಬೌಲಿಂಗ್‌ನಲ್ಲಿ ಭುನವೇಶ್ವರ್ ಕುಮಾರ್‌ ವಿಶ್ವಾಸ ಉಳಿಸಿಕೊಂಡಿದ್ದು ಭರವಸೆ ಮೂಡಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.