ADVERTISEMENT

ಜಿಮ್ನಾಸ್ಟಿಕ್ಸ್‌: ವಿಲ್ಸನ್‌ಗೆ ಚಿನ್ನ

ಪಿಟಿಐ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST
ಜಿಮ್ನಾಸ್ಟಿಕ್ಸ್‌: ವಿಲ್ಸನ್‌ಗೆ ಚಿನ್ನ
ಜಿಮ್ನಾಸ್ಟಿಕ್ಸ್‌: ವಿಲ್ಸನ್‌ಗೆ ಚಿನ್ನ   

ಗೋಲ್ಡ್‌ ಕೋಸ್ಟ್‌: ಅಮೋಘ ಸಾಮರ್ಥ್ಯ ತೋರಿದ ಇಂಗ್ಲೆಂಡ್‌ನ ನೀಲ್‌ ವಿಲ್ಸನ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಕೂಮೆರಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಪುರುಷರ ವೈಯಕ್ತಿಕ ಆಲ್‌ರೌಂಡ್‌ ವಿಭಾಗದ ಫೈನಲ್‌ನಲ್ಲಿ ವಿಲ್ಸನ್‌ 84.950 ಪಾಯಿಂಟ್ಸ್‌ ಕಲೆಹಾಕಿ ಮೊದಲ ಸ್ಥಾನ ಗಳಿಸಿದರು.

ಇಂಗ್ಲೆಂಡ್‌ನ ಮತ್ತೊಬ್ಬ ಜಿಮ್ನಾಸ್ಟ್‌ ಜೇಮ್ಸ್‌ ಹಾಲ್‌ ಈ ವಿಭಾಗದ ಬೆಳ್ಳಿ ತಮ್ಮದಾಗಿಸಿಕೊಂಡರು. ಅವರು 83.975 ಪಾಯಿಂಟ್ಸ್‌ ಸಂಗ್ರಹಿಸಿದರು.

ADVERTISEMENT

ಸೈಪ್ರಸ್‌ನ ಮಾರಿಯಸ್‌ ಜಾರ್ಜಿಯು (83.750 ಪಾ.) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಯೋಗೇಶ್ವರ್‌ಗೆ 14ನೇ ಸ್ಥಾನ: ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಜಿಮ್ನಾಸ್ಟ್‌ ಯೋಗೇಶ್ವರ್‌ ಸಿಂಗ್‌ 14ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನ ಗಳಿಸಿ ಫೈನಲ್‌ಗೆ ಅರ್ಹತೆ ಗಳಿಸಿದ್ದ ಯೋಗೇಶ್ವರ್‌, ಒಟ್ಟಾರೆ 75.60 ಪಾಯಿಂಟ್ಸ್‌ ಕಲೆ ಹಾಕಿದರು.

ಫ್ಲೋರ್‌ ಎಕ್ಸರ್‌ಸೈಸ್‌ನಲ್ಲಿ 11.40 ಪಾಯಿಂಟ್ಸ್‌ ಸಂಗ್ರಹಿಸಿದ ಅವರು, ಪೊಮ್ಮೆಲ್‌ ಹಾರ್ಸ್‌ (12.25ಪಾ.), ರಿಂಗ್ಸ್‌ (12.60ಪಾ.), ವಾಲ್ಟ್‌ (14.10 ಪಾ.), ಪ್ಯಾರಲಲ್‌ ಬಾರ್ಸ್‌ (13.00 ಪಾ.) ಮತ್ತು ಹೈ ಬಾರ್ಸ್‌ (12.25 ಪಾ.) ಸ್ಪರ್ಧೆಗಳಲ್ಲೂ ಉತ್ತಮ ಕೌಶಲ ತೋರಲು ವಿಫಲರಾದರು.

ಎಲಿಜಬೆತ್‌ಗೆ ಚಿನ್ನ: ಮಹಿಳೆಯರ ವೈಯಕ್ತಿಕ ಆಲ್‌ ರೌಂಡ್‌ ವಿಭಾಗದಲ್ಲಿ ಕೆನಡಾದ ಎಲಿಜಬೆತ್‌ ಬ್ಲ್ಯಾಕ್‌, ಚಿನ್ನ ಜಯಿಸಿದರು.

ಎಲಿಜಬೆತ್‌ ಒಟ್ಟಾರೆ 54.200 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದರು. ಆಸ್ಟ್ರೇಲಿಯಾದ ಜಾರ್ಜಿಯಾ ಗಾಡ್ವಿನ್‌ (53.800 ಪಾ.) ಮತ್ತು ಇಂಗ್ಲೆಂಡ್‌ನ ಅಲೈಸ್‌ ಕಿನ್‌ಸೆಲ್ಲಾ (53.150 ಪಾ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಭಾರತದ ಅರುಣಾ ಬುದ್ಧಾ ರೆಡ್ಡಿ 14ನೆಯವರಾಗಿ ಸ್ಪರ್ಧೆ ಮುಗಿಸಿದರು. ಅವರು 44.400 ಪಾಯಿಂಟ್ಸ್‌ ಸಂಗ್ರಹಿಸಿದರು.

ಪ್ರಣತಿ ದಾಸ್‌ 16ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಅವರು 43.900 ಪಾಯಿಂಟ್ಸ್‌ ಕಲೆಹಾಕಿದರು. ಒಟ್ಟು 18 ಮಂದಿ ಜಿಮ್ನಾಸ್ಟ್‌ಗಳು ಫೈನಲ್‌ನಲ್ಲಿ ಪೈಪೋಟಿ ನಡೆಸಿದರು.

**

ಪದಕದ ಕನಸಲ್ಲಿ ಪ್ರಣತಿ

ಭಾರತದ ಪ್ರಣತಿ ನಾಯಕ್‌ ಅವರು ಮಹಿಳೆಯರ ವಾಲ್ಟ್‌ ವಿಭಾಗದಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ.

ಭಾನುವಾರ ನಡೆಯುವ ಫೈನಲ್‌ನಲ್ಲಿ ಪ್ರಣತಿ ಪೈಪೋಟಿ ನಡೆಸಲಿದ್ದಾರೆ. ಒಟ್ಟು ಎಂಟು ಮಂದಿ ಕಣದಲ್ಲಿದ್ದಾರೆ.

ಶುಕ್ರವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಪ್ರಣತಿ ಎಂಟನೆ ಸ್ಥಾನ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.