ADVERTISEMENT

ಜೆಸ್ಸಿ ಓವನ್ಸ್‌ ಪದಕಕ್ಕೆ ರೂ. 9 ಕೋಟಿ !

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST
ಜೆಸ್ಸಿ ಓವನ್ಸ್‌ ಪದಕಕ್ಕೆ ರೂ. 9 ಕೋಟಿ !
ಜೆಸ್ಸಿ ಓವನ್ಸ್‌ ಪದಕಕ್ಕೆ ರೂ. 9 ಕೋಟಿ !   

ಲಾಸ್‌ ಏಂಜಲೀಸ್‌ (ಎಎಫ್‌ಪಿ): ಅಮೆರಿಕದ ಅಥ್ಲೀಟ್‌ ಜೆಸ್ಸಿ ಓವನ್ಸ್‌ 1936ರ ಬರ್ಲಿನ್‌ ಒಲಿಂಪಿಕ್ಸ್‌ನಲ್ಲಿ ಪಡೆದಿದ್ದ ಚಿನ್ನದ ಪದಕವೊಂದು ಹರಾಜಿನಲ್ಲಿ ₨ 9 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

ಕ್ಯಾಲಿಫೋರ್ನಿಯದ ಎಸ್‌ಸಿಪಿ ಹರಾಜು ಸಂಸ್ಥೆ ನಡೆಸಿದ ಕ್ರೀಡಾ ಸ್ಮರಣಿಕೆಗಳ ಹರಾಜಿನಲ್ಲಿ ಓವನ್ಸ್‌  ಪದಕಕ್ಕೆ ಭಾರಿ ಬೆಲೆ ಲಭಿಸಿದೆ.
ಒಲಿಂಪಿಕ್‌ ಕ್ರೀಡೆಯ ಸ್ಮರಣಿಕೆಯೊಂ ದಕ್ಕೆ ಹರಾಜಿನಲ್ಲಿ ಇಷ್ಟು ದೊಡ್ಡ ಬೆಲೆ ದೊರೆತಿರುವುದು ಇದೇ ಮೊದಲು. 1896 ರಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್‌ನ ಮ್ಯಾರಥಾನ್‌ನಲ್ಲಿ ಅಥ್ಲೀಟ್‌ ಒಬ್ಬ ಜಯಿಸಿದ್ದ ಬೆಳ್ಳಿಯ ಕಪ್‌ 2012ರ ಏಪ್ರಿಲ್‌ನಲ್ಲಿ ನಡೆದ ಹರಾಜಿನಲ್ಲಿ ₨ 5.3 ಕೋಟಿಗೆ ಮಾರಾಟವಾಗಿತ್ತು. ಒಲಿಂಪಿಕ್ಸ್‌ ಸ್ಮರಣಿಕೆಗೆ ಇದುವರೆಗೆ ದೊರೆತ ಭಾರಿ ಬೆಲೆ ಇದಾಗಿತ್ತು. ಓವನ್ಸ್‌ ಪದಕ ಇದೀಗ ಆ ದಾಖಲೆಯನ್ನು ಮುರಿದಿದೆ.

ಅಮೆರಿಕ ಕಂಡಂತಹ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರಾಗಿರುವ ಜೆಸ್ಸಿ ಓವನ್ಸ್‌ 1936ರ ಒಲಿಂಪಿಕ್ಸ್‌ನ 100 ಮೀ. ಓಟ, 200 ಮೀ. ಓಟ, ಲಾಂಗ್‌ಜಂಪ್‌ ಮತ್ತು 4X100 ಮೀ. ರಿಲೇನಲ್ಲಿ ಸ್ವರ್ಣ ಜಯಿಸಿದ್ದರು. ಆದರೆ ಹರಾಜಿನಲ್ಲಿ ಭಾರಿ ಬೆಲೆ ಪಡೆದ ಪದಕ ಓವನ್ಸ್‌ಗೆ ಯಾವ ಸ್ಪರ್ಧೆಯಲ್ಲಿ ದೊರೆತದ್ದು ಎಂಬುದು ತಿಳಿದಿಲ್ಲ.

ಹರಾಜಿನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕ್ರೀಡಾ ಸ್ಮರಣಿಕೆಗಳು ಮಾರಾಟವಾಗಿದ್ದು, ಒಟ್ಟು ರೂ.  27 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ಎಸ್‌ಸಿಪಿ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.