ADVERTISEMENT

ಟೆನಿಸ್‌: ಸೆಮಿಫೈನಲ್‌ಗೆ ಪೇಸ್‌– ಸ್ಟೆಪನೆಕ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಪಿಟಿಐ): ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿರುವ ಲಿಯಾಂಡರ್‌ ಪೇಸ್‌ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೇಸ್‌ ಹಾಗೂ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಜೋಡಿ 6–1, 6–7, 6–4 ರಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಮತ್ತು ಹಾಲೆಂಡ್‌ನ ಜೀನ್‌ ಜೂಲಿಯನ್ ರೋಜರ್‌ ಅವರನ್ನು ಮಣಿಸಿತು.

ಭಾರತ– ಜೆಕ್‌ ಜೋಡಿಗೆ ನಾಲ್ಕರಘಟ್ಟದ ಪಂದ್ಯದಲ್ಲಿ ಪ್ರಬಲ ಸವಾಲು ಎದುರಾಗಿದ್ದು, ಅಗ್ರಶ್ರೇಯಾಂಕದ ಜೋಡಿ ಅಮೆರಿಕದ ಬಾಬ್‌ ಮತ್ತು ಮೈಕ್ ಬ್ರಯಾನ್‌ ಸಹೋದರರ ವಿರುದ್ಧ ಪೈಪೋಟಿ ನಡೆಸಲಿದೆ.

ದಿನದ ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಬ್ರಯಾನ್‌ ಸಹೋದರರು 7–6, 6–4 ರಲ್ಲಿ ಬ್ರಿಟನ್‌ನ ಕಾಲಿಂಗ್‌ ಫ್ಲೆಮಿಂಗ್‌ ಮತ್ತು ಜೊನಾಥನ್‌ ಮರ್ರೆ ಅವರನ್ನು ಸೋಲಿಸಿದರು.

ಪೇಸ್‌ ಮತ್ತು ಸ್ಟೆಪನೆಕ್‌ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು. ಮೊದಲ ಸೆಟ್‌ನಲ್ಲಿ ತಮ್ಮ ಎಲ್ಲ ಸರ್ವ್‌ಗಳನ್ನು ಕಾಪಾಡಿಕೊಂಡರಲ್ಲದೆ, ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 33 ನಿಮಿಷಗಳಲ್ಲಿ ಜಯ ಪಡೆದರು.

ಟೈ ಬ್ರೇಕರ್‌ನಲ್ಲಿ ಕೊನೆಗೊಂಡ ಎರಡನೇ ಸೆಟ್‌ಅನ್ನು ಐಸಾಮ್‌– ರೋಜರ್‌ ತಮ್ಮದಾಗಿಸಿಕೊಂಡರು. ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಮೂರನೇ ಸೆಟ್‌ ಗೆಲ್ಲುವ ಮೂಲಕ ಪೇಸ್‌– ಸ್ಟೆಪನೆಕ್‌ ಸೆಮಿಫೈನಲ್‌ಗೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.