ADVERTISEMENT

ಟೆನಿಸ್: ಕ್ವಾರ್ಟರ್‌ಗೆ ಬೋಪಣ್ಣ-ಖುರೇಶಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ): ಭಾರತದ ರೋಹನ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಶಿ ಅವರು ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಬೋಪಣ್ಣ ಹಾಗೂ ಖುರೇಶಿ ಮೂರನೇ ಸುತ್ತಿನ ಪಂದ್ಯದಲ್ಲಿ 6-2, 6-3ರಲ್ಲಿ ಆಸ್ಟ್ರೇಲಿಯಾದ ಪಾಲ್ ಹನ್ಲಿ ಹಾಗೂ ಬೆಲ್ಜಿಯಂನ ಡಿಕ್ ನಾರ್ಮನ್ ಅವರನ್ನು ಸೋಲಿಸಿದರು.

ಈ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಭಾರತ-ಪಾಕ್ ಜೋಡಿ ಎರಡೂ ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆಯಿತು. ಎರಡನೇ ಸೆಟ್‌ನಲ್ಲಿ ಹೆನ್ಲಿ ಹಾಗೂ ನಾರ್ಮನ್ ತಿರುಗೇಟು ನೀಡಲು ಯತ್ನಿಸಿದರಾದರೂ ಅದರಲ್ಲಿ ಸಫಲರಾಗಲಿಲ್ಲ.

ಬೋಪಣ್ಣ ಹಾಗೂ ಖುರೇಶಿ ಎಂಟು ಏಸ್‌ಗಳನ್ನು ಸಿಡಿಸಿ ಎದುರಾಳಿ ಜೋಡಿಯನ್ನು ಕಾಡಿದರು. 24 ವಿನ್ನರ್ ಪಾಯಿಂಟ್ಸ್ ಗಳಿಸಿದರು. ಅವರು ಎಂಟರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೊಲಿನ್ ಫ್ಲೆಮಿಂಗ್ ಹಾಗೂ ರಾಸ್ ಹಚಿನ್ಸ್ ಜೋಡಿಯನ್ನು ಎದುರಿಸಲಿದ್ದಾರೆ.

ಡಬಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಲಿಯಾಂಡರ್ ಪೇಸ್-ಮಹೇಶ್ ಭೂಪತಿ ಭಾರತದ ಸೋಮದೇವ್ ದೇವ್‌ವರ್ಮನ್ ಹಾಗೂ ಫಿಲಿಪ್ಪೀನ್ಸ್‌ನ ಟ್ರೀಟ್ ಕೊನ್ರಾಡ್ ಹ್ಯೂ ಜೋಡಿಯೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಪರಾಭವಗೊಂಡರು.

ಸಾನಿಯಾ-ವೆಸ್ನಿನಾ 6-7, 6-7ರಲ್ಲಿ ಜೆಕ್ ಗಣರಾಜ್ಯದ ಇವೆಟಾ ಬೆನೆಸೊವಾ ಹಾಗೂ ಬಾರ್ಬೊರಾ ಸ್ಟ್ರಿಕೊವಾ ಎದುರು ಸೋಲು ಕಂಡರು.

ಈ ಪಂದ್ಯದ ಎರಡೂ ಸೆಟ್‌ಗಳು ಟೈಬ್ರೇಕರ್ ಹಂತ ತಲುಪಿದ್ದವು. ಆದರೆ ಆರನೇ ಶ್ರೇಯಾಂಕ ಪಡೆದಿದ್ದ ಭಾರತ-ರಷ್ಯಾ ಜೋಡಿ 31 ಬಾರಿ ಸ್ವಯಂಕೃತ ತಪ್ಪುಗಳನ್ನು ಎಸಗಿತು. ಈ ಕಾರಣ ಸಾನಿಯಾ-ಎಲೆನಾ ಸೋಲು ಕಾಣಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.