ADVERTISEMENT

ಟೆನಿಸ್: ಸಿಂಗಲ್ಸ್ ಫೈನಲ್‌ಗೆ ಭಾರತದ ಸೋಮ್‌ದೇವ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ಜೋಹಾನ್ಸ್‌ಬರ್ಗ್ (ಪಿಟಿಐ):  ಭಾರತದ ಸೋಮ್‌ದೇವ್ ದೇವವರ್ಮನ್ ಅವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ಎಟಿಪಿ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿರುವ ಸೋಮ್ ಭಾನುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ 6-2, 6-4ರಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಆತಿಥೇಯ ದಕ್ಷಿಣ ಆಫ್ರಿಕದ ಇಜಾಕ್ ವಾನ್ ದೇರ್ ಮಾರ್ವೆ ಅವರನ್ನು ಮಣಿಸಿದರು.

ಕಳೆದ ವರ್ಷದ ಇದೇ ಟೂರ್ನಿಯಲ್ಲಿ ಸೋಮ್‌ದೇವ್ ಕ್ವಾರ್ಟರ್‌ಫೈನಲ್ ಹಂತದಲ್ಲಿ ನಿರ್ಗಮಿಸಿದ್ದರು. ಆದರೆ ಈ ಸಲ ಫೈನಲ್ ಹಂತಕ್ಕೆ ಪ್ರವೇಶಿಸಿರುವುದರಿಂದ ಪ್ರಶಸ್ತಿ ಗೆಲುವಿನ ಆಸೆ ಚಿಗುರಿಸಿದ್ದಾರೆ. ‘ಈ ಗೆಲುವು ನನ್ನ ಸಂತಸವನ್ನು ಇಮ್ಮಡಿಸಿದೆ. ಕಳೆದ ಸಲ ಎಂಟರ ಘಟ್ಟದಲ್ಲಿ ಸೋಲು ಅನುಭವಿಸಿದ್ದೆ.

ಈ ಸಲ ಪ್ರಶಸ್ತಿ ಗೆಲ್ಲಬೇಕು ಎನ್ನುವ ಕನಸು ನನಸಾಗುವ ಹಾದಿಯಲ್ಲಿದೆ  ಎಂದು ಸೋಮ್ ಹೇಳಿದರು. ಕೇವಲ 39 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಸೋಮ್ ಎರಡನೇ ಸೆಟ್‌ನಲ್ಲಿ ಮಾತ್ರ ಎದುರಾಳಿ ಆಟಗಾರನಿಂದ ಕೊಂಚ ಪ್ರತಿರೋಧ ಎದುರಿಸಬೇಕಾಯಿತು. ಮೊದಲ ಸೆಟ್‌ನಲ್ಲಿ ಸುಲಭ ಗೆಲುವನ್ನು ತಮ್ಮದಾಗಿ ಸಿಕೊಂಡರು.                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.