ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಟ್ವೆಂಟಿ–20 ಕ್ರಿಕೆಟ್ ಸರಣಿ ಎರಡನೆಯ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ 27 ರನ್‌ಗಳ ಗೆಲುವು ಲಭಿಸಿದೆ. ಈ ಮೂಲಕ ಭಾರತ ಈ ಸರಣಿ ಗೆದ್ದುಕೊಂಡಿದೆ.
ಭಾರತ ನೀಡಿದ್ದ 184 ರನ್‌ಗಳ ಸವಾಲು ಬೆನ್ನೆಟ್ಟಿದ ಕಾಂಗರು ಪಡೆಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಾಯಕ ಆ್ಯರನ್ ಫಿಂಚ್ 74 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ. ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ತಲಾ 2 ವಿಕೆಟ್ ಉರುಳಿಸಿದರು.
ಟಾಸ್ ಗೆದ್ದರೂ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ತಂಡ ರೋಹಿತ್ ಶರ್ಮಾ (60) ಮತ್ತು ಶಿಖರ್ ಧವನ್ (42) ಅವರ ಉತ್ತಮ ಜತೆಯಾಟದ ಮೂಲಕ ಮೊದಲ ವಿಕೆಟ್‌ಗೆ 97 ರನ್ ಗಳಿಸಿತು. ರೋಹಿತ್ ಶರ್ಮಾ ರನ್‌ಔಟ್ ಆದರೆ, ಧವನ್ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ನಾಯಕ ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ 59 ರನ್‌ಗಳಿಸಿ ಔಟಾಗದೆ ಉಳಿದರು.
ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪ್ರವಾಸಿ ತಂಡ ಕಾಂಗರೂಗಳ ನಾಡಿನ ಎದುರು ಆಡಿದ್ದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಸೋಲು ಕಂಡಿತ್ತು. ಈ ಸರಣಿ ಗೆಲ್ಲುವ ಮೂಲಕ ಆ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ.
ಈ ಸರಣಿಯ ಬಳಿಕ ಭಾರತ ತಂಡ ಲಂಕಾ ಎದುರು ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ಆಡಲಿದೆ. ಬಳಿಕ ಐಸಿಸಿ ವಿಶ್ವ ಟೂರ್ನಿ ಚಾಂಪಿಯನ್‌ಷಿಪ್ ಮತ್ತು ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ಜರುಗಲಿದೆ. ಈ ಎಲ್ಲಾ ಸರಣಿಗಳಿಗೆ ಸಿದ್ಧಗೊಳ್ಳಲು ಆಸ್ಟ್ರೇಲಿಯಾ ಎದುರಿನ ಸರಣಿ ಭಾರತದ ಪಾಲಿಗೆ ಮಹತ್ವವೆನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.