ADVERTISEMENT

ಡಿ.26ರಿಂದ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಬೆಂಗಳೂರು: ಭಾರತ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಮತ್ತು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಗಳ ಸಹಯೋಗದೊಂದಿಗೆ ಪೀಣ್ಯಕ್ಕೆ ಸಮೀಪದ ಬಾಗಲಗುಂಟೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ 58ನೇ ರಾಷ್ಟ್ರೀಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಡಿಸೆಂಬರ್ 26ರಿಂದ 30ರವರೆಗೆ ನಡೆಯಲಿದೆ.

ಬಾಗಲಗುಂಟೆಯ `ಎಂ.ಇ.ಐ. ಬಡಾವಣೆಯ ಮುಖ್ಯ ಕ್ರೀಡಾಂಗಣ'ದಲ್ಲಿ ನಡೆಯಲಿರುವ ಈ ಕೂಟದ ಪುರುಷರ ವಿಭಾಗದಲ್ಲಿ 32 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 30 ತಂಡಗಳು ಪಾಲ್ಗೊಳ್ಳಲಿವೆ ಎಂದು ಟೂರ್ನಿಯ ಸಂಘಟನಾ ಕಾರ್ಯದರ್ಶಿ ಎಸ್.ಕೋಮಲೇಶ್ವರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಹೈದರಾಬಾದ್‌ನಲ್ಲಿ ನಡೆದ ಪುರುಷರ ವಿಭಾಗದ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪ್ರಶಸ್ತಿ ಗೆದ್ದಿದ್ದರೆ, ಮಹಿಳಾ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದತ್ತು ಎಂದ ಅವರು ಇದೀಗ ಬೆಂಗಳೂರಿನಲ್ಲಿ 16 ವರ್ಷಗಳ ನಂತರ ಈ ಕೂಟವನ್ನು ಸಂಘಟಿಸಲಾಗುತ್ತಿದೆ ಎಂದರು.

ದೇಶದ ಬಹುತೇಕ ಎಲ್ಲಾ ರಾಜ್ಯಗಳಿಂದ ಒಟ್ಟು 800 ಆಟಗಾರರು ಇಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದೂ ಅವರು ತಿಳಿಸಿದರು.
ಈ ಕೂಟದಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಗಳಿಸುವ ತಂಡಗಳು ಆಕರ್ಷಕ ಟ್ರೋಫಿಗಳೊಂದಿಗೆ ಕ್ರಮವಾಗಿ 25ಸಾವಿರ, 15 ಸಾವಿರ, 10ಸಾವಿರ ಮತ್ತು 5ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಪಡೆಯಲಿವೆ. ಇದು ಪುರುಷ ಮತ್ತು ಮಹಿಳಾ ವಿಭಾಗಗಳೆರಡಕ್ಕೂ ಅನ್ವಯಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.