ನವದೆಹಲಿ (ಐಎಎನ್‌ಎಸ್): ಮಹೇಶ್ ಭೂಪತಿ ಮುಂದಿನ ತಿಂಗಳು ನಡೆಯುವ ಉಜ್ಬೆಕಿಸ್ತಾನ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಡಬಲ್ಸ್ ವಿಭಾಗದಲ್ಲಿ ಜೊತೆಯಾಗಿ ಆಡಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತಿಳಿಸಿದೆ.
ಏಷ್ಯಾ-ಓಸೀನಿಯ ಒಂದನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ತಾನವನ್ನು ಎದುರಿಸಲಿದೆ. ಡೇವಿಸ್ ಕಪ್ ತಂಡದ ನಾಯಕ ಎಸ್.ಪಿ. ಮಿಶ್ರಾ ತಂಡದಲ್ಲಿ ಇಬ್ಬರು `ಸ್ಪೆಶಲಿಸ್ಟ್~ ಸಿಂಗಲ್ಸ್ ಆಟಗಾರರನ್ನು ಬಯಸಿದ್ದರು. ಈ ಕಾರಣ ಡಬಲ್ಸ್ ಆಟಗಾರರಾದ ಪೇಸ್, ಭೂಪತಿ ಮತ್ತು ಬೋಪಣ್ಣ ಅವರಲ್ಲಿ ಇಬ್ಬರಿಗೆ ಮಾತ್ರ ತಂಡದಲ್ಲಿ ಅವಕಾಶ ಇತ್ತು.
ಪೇಸ್ ಹಾಗೂ ಬೋಪಣ್ಣ ಸೂಕ್ತ ಜೊತೆಗಾರರು ಎಂಬ ಕಾರಣ ಭೂಪತಿ ಹಿಂದೆ ಸರಿದರು ಎಂದು ಎಐಟಿಎ ಕಾರ್ಯದರ್ಶಿ ಅನಿಲ್ ಖನ್ನಾ ನುಡಿದರು. ಅಗತ್ಯಬಿದ್ದಲ್ಲಿ ಬೋಪಣ್ಣ ಸಿಂಗಲ್ಸ್ ಪಂದ್ಯದಲ್ಲೂ ಆಡಬಲ್ಲರು ಎಂಬುದು ಭೂಪತಿ ನಿರ್ಧಾರದ ಹಿಂದಿನ ಮತ್ತೊಂದು ಕಾರಣ.
ಅನಿಲ್ ಧೂಪರ್ ನೇತೃತ್ವದ ನಾಲ್ಕು ಸದಸ್ಯರ ಆಯ್ಕೆ ಸಮಿತಿ ಸೋಮದೇವ್ ದೇವವರ್ಮನ್ ಅವರನ್ನು ತಂಡಕ್ಕೆ ಪರಿಗಣಿಸಲಿಲ್ಲ. ಗಾಯದಿಂದ ಬಳಲುತ್ತಿರುವ ಸೋಮದೇವ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಯೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಅವಕಾಶ ಗಿಟ್ಟಿಸಿದ್ದಾರೆ. ವಿಷ್ಣುವರ್ಧನ್ `ರಿಸರ್ವ್ ಆಟಗಾರ~ನಾಗಿ ಸ್ಥಾನ ಪಡೆದಿದ್ದಾರೆ.
ಡೇವಿಸ್ ಕಪ್ ತಂಡ: ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ, ಸನಮ್ ಸಿಂಗ್ ಮತ್ತು ವಿಷ್ಣುವರ್ಧನ್ (ರಿಸರ್ವ್ ಆಟಗಾರ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.