ADVERTISEMENT

ಡ್ರಾ ಆದರೂ ಭಾರತದ ಎರಡನೇ ಸ್ಥಾನಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ದುಬೈ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-2 ರಲ್ಲಿ ಸಮಬಲ ಸಾಧಿಸಲು ಯಶಸ್ವಿಯಾದರೂ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ರ‌್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿತ ಕಾಣಲಿದೆ.

ಮಹೇಂದ್ರ ಸಿಂಗ್ ದೋನಿ ಬಳಗ ಇದೀಗ 0-2 ರಲ್ಲಿ ಹಿನ್ನಡೆಯಲ್ಲಿದೆ. ಸರಣಿ ಸಮಬಲದಲ್ಲಿ ಕೊನೆಗೊಂಡರೆ ಭಾರತದ ರೇಟಿಂಗ್ ಪಾಯಿಂಟ್ 117 ಆಗಲಿದೆ. ದಕ್ಷಿಣ ಆಫ್ರಿಕ ಕೂಡಾ ಇಷ್ಟೇ ಪಾಯಿಂಟ್ ಹೊಂದಿದೆ. ಆದರೆ ಉತ್ತಮ ಸರಾಸರಿಯ ಆಧಾರದಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನ ಪಡೆಯಲಿದ್ದು, ಭಾರತ ಮೂರನೇ ಸ್ಥಾನಕ್ಕೆ ಕುಸಿತ ಕಾಣಲಿದೆ. ರ‌್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ.

ಮೈಕಲ್ ಕ್ಲಾರ್ಕ್ ಬಳಗ ಸರಣಿಯನ್ನು 3-0 ರಲ್ಲಿ ಗೆದ್ದುಕೊಂಡರೆ ಆ ತಂಡದ ರೇಟಿಂಗ್ ಪಾಯಿಂಟ್ 110ಕ್ಕೆ ಹೆಚ್ಚಲಿದೆ. ಆದರೂ ಭಾರತಕ್ಕಿಂತ ಎರಡು ಪಾಯಿಂಟ್‌ಗಳಿಂದ ಹಿಂದೆ ಉಳಿಯಲಿದೆ. ಸರಣಿ 3-1 ರಲ್ಲಿ ಕೊನೆಗೊಂಡರೆ ಭಾರತ 113 ಹಾಗೂ ಆಸೀಸ್ 108 ಪಾಯಿಂಟ್‌ಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯಲಿವೆ.

ಆಸೀಸ್ ಸರಣಿಯನ್ನು `ಕ್ಲೀನ್‌ಸ್ವೀಪ್~ ಮಾಡಿದರೆ ಉಭಯ ತಂಡಗಳು ತಲಾ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಸಮಬಲ ಸಾಧಿಸಲಿವೆ. ಆದರೆ ಉತ್ತಮ ಸರಾಸರಿಯ ಆಧಾರದಲ್ಲಿ ಮೂರನೇ ಸ್ಥಾನ `ಮಹಿ~ ಬಳಗಕ್ಕೆ ಲಭಿಸಲಿದೆ.

ಸಚಿನ್ ರ‌್ಯಾಂಕಿಂಗ್‌ನಲ್ಲಿ ಕುಸಿತ: ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಟೆಸ್ಟ್ ರ‌್ಯಾಂಕಿಂಗ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕುಸಿತ ಕಂಡಿದ್ದಾರೆ. ಎರಡು ಕ್ರಮಾಂಕ ಕೆಳಕ್ಕಿಳಿದಿರುವ ಸಚಿನ್ ಆರನೇ ಸ್ಥಾನದಲ್ಲಿದ್ದಾರೆ. ದ್ರಾವಿಡ್ ನಾಲ್ಕು ಸ್ಥಾನಗಳಷ್ಟು ಕುಸಿತ ಕಂಡಿದ್ದು 15ನೇ ರ‌್ಯಾಂಕ್ ಪಡೆದಿದ್ದಾರೆ.

ವೀರೇಂದ್ರ ಸೆಹ್ವಾಗ್ ಅಗ್ರ 20ರೊಳಗಿನ ಸ್ಥಾನ ಕಳೆದುಕೊಂಡಿದ್ದು, 22ನೇ ಸ್ಥಾನದಲ್ಲಿದ್ದಾರೆ. ಆದರೆ ಆಸೀಸ್ ತಂಡದ ನಾಯಕ ಮೈಕಲ್ ಕ್ಲಾರ್ಕ್ 15 ತಿಂಗಳ ಬಿಡುವಿನ ಬಳಿಕ ಇದೇ ಮೊದಲ ಬಾರಿಗೆ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದು, 8ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.