ADVERTISEMENT

ತಪ್ಪು ಮರುಕಳಿಸದಂತೆ ಎಚ್ಚರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಹೈದರಾಬಾದ್ (ಐಎಎನ್‌ಎಸ್): ಜಯಿಸಬಹುದಾಗಿದ್ದ ಪಂದ್ಯದಲ್ಲಿ ಸೋಲು ಅನುಭವಿಸಿದೆವು. ಈ ರೀತಿಯ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಹೇಳಿದರು.

ಭಾನುವಾರ ರಾತ್ರಿ ನಡೆದ ಚಾಂಪಿಯನ್ಸ್ ಲೀಗ್‌ನ ಪಂದ್ಯದಲ್ಲಿ  ಸಾಮರ್ಸೆಟ್ ಐದು ವಿಕೆಟ್‌ಗಳಿಂದ ನೈಟ್ ರೈಡರ್ಸ್ ತಂಡವನ್ನು ಮಣಿಸಿತ್ತು. `ಆರಂಭದಿಂದಲೇ ಸಾಮರ್ಸೆಟ್ ಉತ್ತಮ ಮೊತ್ತ ಕಲೆ ಹಾಕುತ್ತಿತ್ತು. ಮೊದಲ ಆರು ಓವರ್‌ಗಳಲ್ಲಿ ನಮ್ಮ ತಂಡದ ಬೌಲಿಂಗ್ ಕಳಪೆಯಾಗಿತ್ತು. ಆದರೆ ಕೊನೆಯಲ್ಲಿ ಉತ್ತಮ ಬೌಲಿಂಗ್ ಮೂಡಿ ಬಂದಿತು.

ಆದರೆ ಆರಂಭದಲ್ಲಿಯೇ ಬಿಗುವಾದ ದಾಳಿ ಮಾಡಿದ್ದರೆ, ಎದುರಾಳಿ ತಂಡವನ್ನು ನಿಯಂತ್ರಿಸಲು  ಸಾಧ್ಯವಿತ್ತು~ ಎಂದು ಗಂಭೀರ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಫಿಟ್‌ನೆಸ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನೂರಕ್ಕೆ ನೂರರಷ್ಟು ಫಿಟ್ ಆಗಿದ್ದೇನೆ ಎಂದು ಹೇಳಿದರು. ಇಂಗ್ಲೆಂಡ್ ಪ್ರವಾಸದ ವೇಳೆ ಗಂಭೀರ್ ಗಾಯಗೊಂಡಿದ್ದರು. ಒಂದು ವೇಳೆ ನಾನು ಪೂರ್ಣವಾಗಿ ಫಿಟ್ ಆಗಿರದೇ ಇದ್ದರೆ, ಖಂಡಿತವಾಗಿಯೂ ಈ ಟೂರ್ನಿಯಲ್ಲಿ ಆಡುತ್ತಿರಲಿಲ್ಲ ಎಂದರು.

ಆದರೆ ಸಾಮರ್ಸೆಟ್ ಎದುರಿನ ಪಂದ್ಯದಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. `ಸೊನ್ನೆ~ ಸುತ್ತಿರುವುದೇ ಅದಕ್ಕೆ ಸಾಕ್ಷಿ. ಈ ಕುರಿತು ಪ್ರತಿಕ್ರಿಯಿಸಿದ ಅವರು ಒಂದುವರೆ ತಿಂಗಳ ನಂತರ ಆಡುತ್ತಿರುವ ಮೊದಲ ಪಂದ್ಯ ಇದು. ಆದ್ದರಿಂದ ಫಾರ್ಮ್‌ಗೆ ಮರಳಲು ಅಲ್ಪ ಕಾಲಾವಕಾಶ ಬೇಕು ಎಂದು ಸಮರ್ಥಿಸಿಕೊಂಡರು.

ಟೂರ್ನಿ ಗೆಲ್ಲುತ್ತೇವೆ: ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಗೆಲುವು ಪಡೆದು ವಿಶ್ವಾಸದಿಂದ ಬೀಗುತ್ತಿರುವ ಸಾಮರ್ಸೆಟ್ ತಂಡ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸ ಹೊಂದಿದೆ.
ನೈಟ್ ರೈಡರ್ಸ್ ಎದುರು ಐದು ವಿಕೆಟ್ ಜಯ ಸಾಧಿಸಿದ ನಂತರ ಇಂಗ್ಲೆಂಡ್‌ನ ಸಾಮರ್ಸೆಟ್ ತಂಡದ ನಾಯಕ ಅಲ್ಫಾನ್ಸೊ ಥಾಮಸ್ ಮಾತನಾಡಿದರು.

ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಈ ತಂಡಕ್ಕೆ ಲಭಿಸುತ್ತಿರುವ ಸತತ ಮೂರನೇ ಜಯವಿದು. ಅರ್ಹತಾ ಸುತ್ತಿನಲ್ಲಿ ಆಕ್ಲೆಂಡ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಎರಡೂ ಪಂದ್ಯಗಳಲ್ಲಿ ಸಾಮರ್ಸೆಟ್ ಗೆಲುವು ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.