ADVERTISEMENT

ತವರಿಗೆ ಬಂದಿಳಿದ ಶ್ರೀಲಂಕಾ ತಂಡ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST
ತವರಿಗೆ ಬಂದಿಳಿದ ಶ್ರೀಲಂಕಾ ತಂಡ
ತವರಿಗೆ ಬಂದಿಳಿದ ಶ್ರೀಲಂಕಾ ತಂಡ   

ಕೊಲಂಬೊ (ಪಿಟಿಐ): ಹತ್ತನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಎದುರು ಸೋಲು ಅನುಭವಿಸಿದ ಶ್ರೀಲಂಕಾ ತಂಡದ ಆಟಗಾರರು ಭಾನುವಾರ ತವರಿಗೆ ಮರಳಿದರು. ಇಲ್ಲಿನ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಟಗಾರರನ್ನು ಸ್ವಾಗತಿಸಲು ಅಷ್ಟೇನು ಕ್ರಿಕೆಟ್ ಅಭಿಮಾನಿಗಳು ಜಮಾಯಿಸಿರಲಿಲ್ಲ.

‘ಫೈನಲ್ ಪಂದ್ಯದಲ್ಲಿ ನಮ್ಮ ದೇಶದ ಆಟಗಾರರು ಟ್ರೋಫಿ ಗೆದ್ದು ಬಂದರೆ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದೆವು. ಆದರೆ ಫಲಿತಾಂಶವೇ ಬೇರೆಯಾಯಿತು’ ಎಂದು ಅಲ್ಲಿನ ವ್ಯಕ್ತಿಯೊಬ್ಬರು ಹೇಳಿದರು. 1996ರಲ್ಲಿ ಅರ್ಜುನ್ ರಣತುಂಗ ನೇತೃತ್ವದಲ್ಲಿ ಶ್ರೀಲಂಕಾ ವಿಶ್ವಕಪ್ ಗೆದ್ದಾಗ ತೆರೆದ ವಾಹನದಲ್ಲಿ ಆಟಗಾರರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು. ಆಗ ಟ್ರೋಫಿ  ಗೆದ್ದು ತಂದಿದ್ದ ತಂಡವನ್ನು ಅಭಿನಂದಿಸಲು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಅಭಿಮಾನಿಗಳು ನೆರದಿದ್ದರು.
 
ವಿಮಾನ ನಿಲ್ದಾಣದಿಂದ ನಗರವನ್ನು ತಲುಪಲು ಐದು ಗಂಟೆ ಕಾಲ ಹಿಡಿದಿತ್ತು. ಆಟಗಾರರನ್ನು ತುಂಬಾ ವಿಜೃಂಭಣೆಯಿಂದ ಸತ್ಕರಿಸಲಾಗಿತ್ತುಎಂದು ಸಾರ್ವಜನಿಕರೊಬ್ಬರು ಅಂದಿನ ದಿನವನ್ನು ನೆನಪಿಸಿಕೊಂಡರು. ಆದರೆ ಈ ಸಲದ ಲಂಕಾ ತಂಡವನ್ನು ಬರಮಾಡಿಕೊಳ್ಳಲು ಹೆಚ್ಚಿನ ಅಭಿಮಾನಿಗಳೇನು ಜಮಾಯಿಸಿರಲಿಲ್ಲ.  ‘ಆಟದಲ್ಲಿ ಸೋಲು ಗೆಲುವು ಸಹಜ. ಸೋಲಿರಲಿ ಅಥವಾ ಗೆಲುವಿರಲಿ ತಂಡಕ್ಕೆ ಯಾವಾಗಲೂ ಬೆಂಬಲ ನೀಡುವುದು ಅಗತ್ಯವಿದೆ’ ಎಂದು ವೆಸ್ಟರ್ನ್ ಪ್ರಾಂತ್ಯದ ಮುಖ್ಯಮಂತ್ರಿ ಪ್ರಸನ್ನ ರಣತುಂಗ ಹಾಗೂ 1996ರಲ್ಲಿ ವಿಶ್ವಕಪ್ ಗೆದ್ದಾಗ ಲಂಕಾ ತಂಡದ ನಾಯಕರಾಗಿದ್ದ ಅರ್ಜುಣ್ ರಣತುಂಗ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಇಳಿದ ಆಟಗಾರರನ್ನು ಆನೆಗಳು ಹಾಗೂ ಅಲ್ಲಿನ ಸಾಂಪ್ರಾದಾಯಿಕ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಫೈನಲ್‌ನಲ್ಲಿ ಸೋಲಿನ ನಿರಾಸೆ ಅನುಭವಿಸಿದ್ದ ಲಂಕಾ ಕ್ರಿಕೆಟ್ ಅಭಿಮಾನಿಗಳು ಕೆಲವೇ ಸಾವಿರದಷ್ಟು ಜನ ಮಾತ್ರ ಆಟಗಾರರನ್ನು ಸ್ವಾಗತಿಸಲು ಆಗಮಿಸಿದ್ದರು.

ಸಮಾಧಾನ ಹೇಳಿದ ಅಧ್ಯಕ್ಷರು; ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ ತವರಿಗೆ ಮರಳಿದ ಆಟಗಾರರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ‘ಸಮಾಧಾನ’ ಸಂದೇಶ ನೀಡಿದ್ದಾರೆ. ವಿಶ್ವಕಪ್‌ನಲ್ಲಿ ತಂಡ ಫೈನಲ್‌ವರೆಗೆ ಮುನ್ನಡೆದದ್ದು ಸಂತೋಷದ ವಿಷಯ ಎಂದರು. ‘ನಮ್ಮ ದೇಶದ ಆಟಗಾರರ ಬಗ್ಗೆ ತುಂಬಾ ಹೆಮ್ಮೆಯಿದೆ. ವಿಶ್ವಕಪ್‌ನಂಥಹ ದೊಡ್ಡ ಟೂರ್ನಿಯಲ್ಲಿ ಫೈನಲ್ ತಲುಪಿದ್ದು ಮೆಚ್ಚುವಂತದ್ದು, ಶೀಘ್ರದಲ್ಲಿಯೇ ತಂಡದ ಆಟಗಾರರನ್ನು ಭೇಟಿಯಾಗುವೆ’ ಎಂದು ಅವರು ತಿಳಿಸಿದರು. ಫೈನಲ್ ಪಂದ್ಯವನ್ನು ವೀಕ್ಷಿಸಲು ಮುಂಬೈಗೆ ಆಗಮಿಸಿದ್ದ ರಾಜಪಕ್ಸೆ ಶನಿವಾರ ರಾತ್ರಿಯೇ ತವರಿಗೆ ಮರಳಿದ್ದರು.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಕುಮಾರ ಸಂಗಕ್ಕಾರ ನೇತೃತ್ವದ ಲಂಕಾ ತಂಡ ಭಾರತದ ಕೈಯಲ್ಲಿ ಆರು ವಿಕೆಟ್‌ಗಳ ಸೋಲು ಅನುಭವಿಸಿತ್ತು. ಕಳೆದ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲೂ ಲಂಕಾ ನಿರಾಸೆ ಎದುರಿಸಿತ್ತು. ಅಂದು ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.