ADVERTISEMENT

ತಿಲಕರತ್ನೆ ದಿಲ್ಶಾನ್, ಶ್ರೀಲಂಕಾ ತಂಡದ ಕ್ರಿಕೆಟಿಗ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಪ್ರೇಕ್ಷಕರೂ ಮೆಚ್ಚಿಕೊಂಡ ದಿಲ್ ‘ಸ್ಕೂಪ್’

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪೆಡಲ್ ಸ್ವೀಪ್ ಹೊಡೆತವನ್ನು ಪ್ರಯೋಗಿಸುವುದು ಇಷ್ಟ. ವಿಕೆಟ್ ಕೀಪರ್ ಹಿಡಿತಕ್ಕೆ ಚೆಂಡು ಸಿಗದಂತೆ ಬೌಂಡರಿಗೆ ಕಳುಹಿಸುವುದಕ್ಕೆ ಲಭ್ಯವಾಗಿರುವ ಸೃಜನಾತ್ಮಕವಾದ ಶಾಟ್ ಇದಾಗಿದೆ. ಆದರೆ ನಾನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಲ್ಲಿ ಆಡುವಾಗ ಅನೇಕ ಬಾರಿ ಚೆಂಡನ್ನು ‘ಸ್ಕೂಪ್’ ಮಾಡುವಲ್ಲಿ ಯಶಸ್ವಿಯಾದೆ. ಚಮಚದಲ್ಲಿ ಜಾಮೂನ್ ಹಿಡಿದು ಚಿಮ್ಮುವಂಥ ರೀತಿಯ ಹೊಡೆತವನ್ನು ಪ್ರೇಕ್ಷಕರೂ ‘ದಿಲ್‌ಸ್ಕೂಪ್’ ಎಂದು ಮೆಚ್ಚಿಕೊಂಡಿದ್ದರು.

ಡರ್ಬನ್‌ನಲ್ಲಿ ನಡೆದಿದ್ದ ಐಪಿಎಲ್ ಪಂದ್ಯವೊಂದರಲ್ಲಿ ಪೆಡಲ್ ಸ್ವೀಪ್ ಮಾಡುವುದಕ್ಕೆ ಅಗತ್ಯವಿರುವಷ್ಟು ತಿರುವು ಪಡೆದಿದ್ದ ಚೆಂಡನ್ನು ಸ್ಕೂಪ್ ಮಾಡಿದ್ದೆ. ಅದೊಂದು ವಿಶಿಷ್ಟವಾದ ನೆನಪು. ಆದರೆ ಆ ಹೊಡೆತವನ್ನು ಪ್ರಯೋಗಿಸಿದ್ದಾಗ ನನಗೇ ಅದು ಅರ್ಥವಾಗಿರಲಿಲ್ಲ. ಪಂದ್ಯದ ನಂತರ ದೆಹಲಿ ಡೇರ್‌ಡೆವಿಲ್ಸ್ ತಂಡದ ಕ್ರಿಕೆಟ್ ವಿಶ್ಲೇಷಕ ಆ ಬಗ್ಗೆ ನನ್ನ ಗಮನ ಸೆಳೆದು, ಇದೊಂದು ಆಸಕ್ತಿಕರವಾದ ಹೊಡೆತವೆಂದು ವಿವರಿಸಿದ್ದರು.

ವಿಚಿತ್ರವೆಂದರೆ ಆ ಶಾಟ್‌ನ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ಯಾಟ್ ಜೊತೆಗೆ ಚೆಂಡು ಕೂಡ ಸಮಾನಾಂತರದಲ್ಲಿ ಸಾಗಿತ್ತು. ಅಷ್ಟೇ ಅಲ್ಲ ವಿಕೆಟ್ ಕೀಪರ್ ಹಿಮ್ಮುಖವಾಗಿ ಓಡಿಯೂ ತಡೆಯಲು ಸಾಧ್ಯವಾಗದಷ್ಟು ದೂರದಲ್ಲಿ ಚೆಂಡು ಹೋಗಿತ್ತು. ಸ್ಕ್ವೇರ್‌ನಲ್ಲಿದ್ದ ಕ್ಷೇತ್ರರಕ್ಷಕರೂ ತಡೆಯಲಾಗದಷ್ಟು ಚುರುಕಾಗಿ ನುಗ್ಗಿತ್ತು. ಇಂಥ ಹೊಡೆತವು ಯಾವುದೇ ಅಪಾಯಕ್ಕೆ ಅವಕಾಶ ನೀಡದಂತೆ ಚೆಂಡನ್ನು ಬೌಂಡರಿಗೆ ಕಳುಹಿಸಲು ಪ್ರಯೋಜನಕಾರಿ.

ಟ್ವೆಂಟಿ-20 ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಅದರಲ್ಲಿ ಪಾಲ್ಗೊಳ್ಳಲು ಹೋಗಿದ್ದಾಗ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಪ್ರಯೋಗಿಸಿದ್ದ ವಿಶಿಷ್ಟವಾದ ಸ್ಕೂಪ್ ಅನ್ನು ಪರಿಣತಿಯೊಂದಿಗೆ ಬಳಸಲು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದೆ. ಆಕಸ್ಮಿಕವಾಗಿ ಕೈಗೆಟುಕಿದ ಶಾಟ್ ನಿರಂತರವಾಗಿ ನನ್ನ ತಂತ್ರಗಳ ಪುಸ್ತಕ ಸೇರಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಸಮಯ ಅಷ್ಟೇ ಕರಾರುವಕ್ಕಾಗಿ ಚೆಂಡಿನ ಜೊತೆಗೆ ಬ್ಯಾಟ್ ದೂರದವರೆಗೆ ಸಾಗುವಂತಾಗಲು ಶ್ರಮವಹಿಸಿದೆ. ಶ್ರೀಲಂಕಾ ತಂಡದ ಆಟಗಾರರು ಕ್ರಿಕೆಟ್‌ಗೆ ತಮ್ಮದೇ ಆದ ವಿಶಿಷ್ಟವಾದ ತಂತ್ರಗಳ ಕೊಡುಗೆಯನ್ನು ನೀಡಿದ್ದಾರೆ. ನಾನು ನೀಡಿದ ಕೊಡುಗೆ ಈ ಸ್ಕೂಪ್ ಶಾಟ್ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಪೆಡಲ್ ಸ್ವೀಪ್‌ಗಿಂತ ಭಿನ್ನವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಚೆಂಡನ್ನು ಬೌಂಡರಿಗೆ ಕಳುಹಿಸುವುದು ಈ ಹೊಡೆತದಿಂದ ಸಾಧ್ಯ.

‘ದಿಲ್‌ಸ್ಕೂಪ್’ ಎಂದು ಕರೆಯುವ ಹೊಡೆತವು ಸಾಂಪ್ರದಾಯಿಕ ಕ್ರಿಕೆಟ್ ಚೌಕಟ್ಟಿನಿಂದ ಹೊರಗೆ ನಿಲ್ಲುತ್ತದೆ. ಇಂಥ ಹೊಡೆತವು ಅಪಾಯಕಾರಿಯೂ ಹೌದು. ಆದರೆ ಎದುರಾಳಿ ಕ್ಷೇತ್ರ ರಕ್ಷಣೆಯಲ್ಲಿ ಗಲಿಬಿಲಿ ಮೂಡಿಸಲು ಖಂಡಿತವಾಗಿಯೂ ಪ್ರಯೋಜನಕಾರಿ.-ಗೇಮ್‌ಪ್ಲಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.