ADVERTISEMENT

ತೆಂಡೂಲ್ಕರ್ ಮತ್ತೊಮ್ಮೆ ಬೌಲ್ಡ್

ವೈಫಲ್ಯದ ಸರಮಾಲೆಗೆ ಮತ್ತೊಂದು ಕೊಂಡಿ, ಸರಣಿಯಲ್ಲಿ ನೀರಸ ಆಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ನಾಗಪುರ: `ಸಚಿನ್ ತೆಂಡೂಲ್ಕರ್ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ. ಆದರೆ ಈ ಸರಣಿ ಮುಗಿದ ಮೇಲೆ ಅವರನ್ನು ಮತ್ತೆ ಅಂಗಳದಲ್ಲಿ ಕಾಣಲು ಸಾಧ್ಯವೇ ಎಂಬ ಬಹುದೊಡ್ಡ ಪ್ರಶ್ನೆ ಹಾಗೂ ಅನುಮಾನ ಶುರುವಾಗಿದೆ' -ಜಾಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸಚಿನ್ ಶುಕ್ರವಾರ ಕೇವಲ 2 ರನ್ ಗಳಿಸಿ ಬೌಲ್ಡ್ ಆಗುತ್ತಿದ್ದಂತೆ ಟ್ವಿಟರ್‌ನಲ್ಲಿ ಬಿಬಿಸಿ ರೇಡಿಯೊ ಕ್ರಿಕೆಟ್ ವಿಶೇಷ ಕಾರ್ಯಕ್ರಮದ ವಿಶ್ಲೇಷಕರು ಹರಿಬಿಟ್ಟ ಅಕ್ಷರಗಳು ನಾನಾ ಅರ್ಥ ನೀಡುತ್ತಿದ್ದವು.

ತೆಂಡೂಲ್ಕರ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಮ್ಮ 23 ವರ್ಷಗಳ ಜೀವನದಲ್ಲಿ ಇಷ್ಟೊಂದು ಕೆಟ್ಟದಾಗಿ ಆಡಿರಲಿಲ್ಲ. ಆದರೆ ಈ ಸರಣಿಯಲ್ಲಿ ಅವರು ಗಳಿಸಿರುವುದು 18.66 ಸರಾಸರಿಯಲ್ಲಿ ಕೇವಲ 112 ರನ್. ರನ್‌ಗಳ ಶಿಖರ ನಿರ್ಮಿಸಿರುವ ಸಚಿನ್ ಕೊನೆಯ 17 ಇನಿಂಗ್ಸ್‌ಗಳಲ್ಲಿ ಏಳನೇ ಬಾರಿ ಬೌಲ್ಡ್ ಆಗಿದ್ದು ಕ್ರಿಕೆಟ್ ಪ್ರೇಮಿಗಳ ಆಘಾತಕ್ಕೆ ಕಾರಣವಾಗಿದೆ. ಒಳ ನುಗ್ಗುವ ಎಸೆತಗಳನ್ನು ಅವರಿಗೆ ಎದುರಿಸಲು ಸಾಧ್ಯವಾಗುತ್ತಿಲ್ಲ. ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಮತ್ತೆ ಅದೇ ರೀತಿ ಆಯಿತು. ಆಫ್ ಸ್ಟಂಪ್ ನೇರಕ್ಕೆ ಬಿದ್ದ ಚೆಂಡು ಸಚಿನ್ ಬ್ಯಾಟ್ ಹಾಗೂ ಪ್ಯಾಡ್ ನಡುವೆ ಕೆಳಮಟ್ಟದಲ್ಲಿ ಒಳನುಗ್ಗಿ ಮಧ್ಯದ ಸ್ಟಂಪ್‌ಗೆ ಅಪ್ಪಳಿಸಿತು.

ಸಚಿನ್ ಒಟ್ಟಾರೆ ವೇಗಿ ಆ್ಯಂಡರ್ಸನ್‌ಗೆ 9ನೇ ಬಾರಿ ವಿಕೆಟ್ ಒಪ್ಪಿಸಿದರು. ಅವರು ಈ ಮೊದಲು ಮುರಳೀಧರನ್ (8), ಮೆಕ್‌ಗ್ರಾ, ಗಿಲ್ಲೆಸ್ಪಿ (ತಲಾ 6), ಡೊನಾಲ್ಡ್, ಕ್ರೋನಿಯೆ, ಬ್ರೆಟ್ ಲೀ ಹಾಗೂ ವೆಟೋರಿ (ತಲಾ 5) ಅವರಿಗೆ ಹೆಚ್ಚಿನ ಬಾರಿ ವಿಕೆಟ್ ಒಪ್ಪಿಸಿದ್ದರು.
ಅವರು ಕೋಲ್ಕತ್ತದಲ್ಲಿ 76 ರನ್ ಗಳಿಸಿದ್ದಾಗ ಮತ್ತೆ ಫಾರ್ಮ್ ಕಂಡುಕೊಂಡರು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಸಚಿನ್ ಹಾಗೇ ಕಾಣುತ್ತಿಲ್ಲ. ಈ ಪಂದ್ಯದಲ್ಲಿ ಅವರು  ಕ್ರೀಸ್‌ಗೆ ಬರುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಕುಕ್ ಫೀಲ್ಡಿಂಗ್ ಯೋಜನೆ ಬದಲಾಯಿಸಿದರು. ಅವರು ಪ್ರತಿ ಎಸೆತಗಳನ್ನು ಆತಂಕದಿಂದಲೇ ಎದುರಿಸಿದಂತಿತ್ತು.

ಮುಂಬೈಕರ್ 2011ರಿಂದ ಇದುವರೆಗೆ ಆಡಿದ 30 ಇನಿಂಗ್ಸ್‌ಗಳಲ್ಲಿ 15 ಬಾರಿ ಬೌಲ್ಡ್ ಹಾಗೂ ಎಲ್‌ಬಿಡಬ್ಲ್ಯು ರೂಪದಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ ಕೊನೆಯ ಬಾರಿ ಶತಕ ಗಳಿಸ್ದ್ದಿದು 2011ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ. ಈಗ ಆಯ್ಕೆದಾರರ ಮೇಲೆ ಮತ್ತಷ್ಟು ಒತ್ತಡ ಹೆಚ್ಚಿದೆ. ತಮ್ಮ ಭವಿಷ್ಯದ ಬಗ್ಗೆ ಸಚಿನ್ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಅಥವಾ ಆಯ್ಕೆ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬುದು ಈಗ ಎಲ್ಲರ ಕುತೂಹಲ. ಆದರೆ ಈ ಪಂದ್ಯದಲ್ಲಿ ಇನ್ನೂ ಒಂದು ಇನಿಂಗ್ಸ್ ಇದೆ ಎಂಬುದನ್ನು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.