ADVERTISEMENT

ತೇಜಿಂದರ್‌, ಅನಾಸ್‌ ಮಿಂಚು

ಅಥ್ಲೆಟಿಕ್ಸ್‌: ಶಾಟ್‌ಪಟ್‌, 400 ಮೀಟರ್ಸ್ ಓಟದಲ್ಲಿ ಭರವಸೆ ಮೂಡಿಸಿದ ಕ್ರೀಡಾಪಟುಗಳು

ಪಿಟಿಐ
Published 8 ಏಪ್ರಿಲ್ 2018, 20:13 IST
Last Updated 8 ಏಪ್ರಿಲ್ 2018, 20:13 IST

ಗೋಲ್ಡ್ ಕೋಸ್ಟ್‌: ತೇಜಿಂದರ್ ಸಿಂಗ್ ಮತ್ತು ಮುಹಮ್ಮದ್‌ ಅನಾಸ್‌ ಯಾಹಿಯಾ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಅಥ್ಲೆಟಿಕ್ಸ್‌ನ ಮೊದಲ ದಿನವಾದ ಭಾನುವಾರ ತೇಜಿಂದರ್‌ ಶಾಟ್‌ಪಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಮುಹಮ್ಮದ್ ಅನಾಸ್‌ 400 ಮೀಟರ್ಸ್‌ ಓಟದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.

ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ತೇಜಿಂದರ್ ಪಾಲ್‌ ಆರನೇ ಸ್ಥಾನ ಗಳಿಸಿದರು. ಮೊದಲ ಎರಡು ಪ್ರಯತ್ನಗಳಲ್ಲಿ ಕ್ರಮವಾಗಿ 18.49 ಮೀಟರ್ ಮತ್ತು 18.43 ಮೀಟರ್‌ ದೂರ ಎಸೆದ ಅವರು ಕೊನೆಯ ಪ್ರಯತ್ನದಲ್ಲಿ 19.10 ಮೀಟರ್ ಎಸೆದು ‘ಎ’ ಗುಂಪಿನಿಂದ ಅರ್ಹತೆ ಪಡೆದರು.

ನ್ಯೂಜಿಲೆಂಡ್‌ನ ಥಾಮಸ್ ವಾಲ್ಸ್‌ ನೂತನ ಕೂಟ ದಾಖಲೆಯೊಂದಿಗೆ (22.45 ಮೀಟರ್‌) ಮೊದಲ ಸ್ಥಾನ ಗಳಿಸಿದರು. ನೈಜೀರಿಯಾದ ಚುಕ್ವೆಬುಕಾ ಎನೆಕೆಚಿ ಎರಡನೇ ಸ್ಥಾನ ಗಳಿಸಿದರು.

ADVERTISEMENT

ಅನಾಸ್‌ಗೆ ಇಂದು ಸೆಮಿಫೈನಲ್‌

45.96 ನಿಮಿಷದಲ್ಲಿ ಗುರಿ ಮುಟ್ಟಿ ಮೊದಲಿಗರಾದ ಅನಾಸ್‌ ಸೋಮವಾರ ನಡೆಯುವ ಸೆಮಿಫೈನಲ್‌ನಲ್ಲಿ ಸೆಣಸುವರು.

ಬೆಳಿಗ್ಗೆ ನಡೆದ 20 ಕಿಮೀ ವೇಗ ನಡಿಗೆಯಲ್ಲಿ ಭಾರತದ ಖುಷ್ಬೀರ್‌ ಕೌರ್‌ ಮತ್ತು ಮನೀಷ್ ಸಿಂಗ್‌ ಕ್ರಮವಾಗಿ ನಾಲ್ಕು ಮತ್ತು ಆರನೇ ಸ್ಥಾನ ಗಳಿಸಿದರು. ಖುಷ್ಬೀರ್‌ 1:39.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಮನೀಷ್‌ 1:22.22 ಸೆಕೆಂಡುಗಳಲ್ಲಿ ಸ್ಪರ್ಧೆ ಮುಕ್ತಾಯಗೊಳಿಸಿದರು. ಆಸ್ಟ್ರೇಲಿಯಾದ ಡೇನ್‌ ಬರ್ಡ್ ಸ್ಮಿತ್‌ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.