ADVERTISEMENT

ದ.ಆಫ್ರಿಕಾ ವಿರುದ್ಧ ಪರಿಪೂರ್ಣ ಗೆಲುವು: ವಿರಾಟ್

ಪಿಟಿಐ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ದ.ಆಫ್ರಿಕಾ ವಿರುದ್ಧ ಪರಿಪೂರ್ಣ ಗೆಲುವು: ವಿರಾಟ್
ದ.ಆಫ್ರಿಕಾ ವಿರುದ್ಧ ಪರಿಪೂರ್ಣ ಗೆಲುವು: ವಿರಾಟ್   

ಲಂಡನ್‌ : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗಳಿಸಿದ ಜಯವನ್ನು ‘ಪರಿಪೂರ್ಣ ಗೆಲುವು’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ.

ಭಾನುವಾರ ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿದ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ‘ಭಾರತ ಶ್ರೇಷ್ಠ ಆಟ ಆಡಿದೆ. ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ತಂಡವೊಂದರ ವಿರುದ್ಧ ಈ ರೀತಿ ಬೌಲಿಂಗ್ ಮಾಡುವುದು ಸುಲಭವಲ್ಲ’ ಎಂದು ಹೇಳಿದರು.

‘ಪಂದ್ಯದ ಬೌಲಿಂಗ್ ವಿವರಗಳನ್ನು ಮುಂದಿಡಲು ನಾನು ಬಯಸುವುದಿಲ್ಲ. ಆದರೆ ಯಾವ ರೀತಿಯ ಯೋಜನೆ ಹಾಕಿಕೊಂಡು ಅಂಗಳಕ್ಕೆ ಇಳಿದೆವೋ ಅದನ್ನು ಬೌಲರ್‌ಗಳು ಮಾಡಿತೋರಿಸಿದ್ದಾರೆ. ಹೀಗಾಗಿ ಎಲ್ಲ ಬೌಲರ್‌ಗಳು ಕೂಡ ಅಭಿನಂದನೆಗೆ ಅರ್ಹರು. ಗುರುವಾರ ಬಾಂಗ್ಲಾದೇಶ ವಿರುದ್ಧ ನಡೆಯುವ ಸೆಮಿಫೈನಲ್‌ನಲ್ಲೂ ನಾವು ಇದೇ ರೀತಿಯಲ್ಲಿ ಆಡುತ್ತೇವೆ’ ಎಂದು ಕೊಹ್ಲಿ ಭರವಸೆ ವ್ಯಕ್ತಪಡಿಸಿದರು.

ADVERTISEMENT

‘ಶ್ರೀಲಂಕಾ ವಿರುದ್ಧ ಉತ್ತಮ ಮೊತ್ತ ಗಳಿಸಿಯೂ ಜಯ ಗಳಿಸಲು ಸಾಧ್ಯವಾಗದೇ ಇದ್ದದ್ದು ಬೇಸರ ತಂದಿತ್ತು. ಇದಕ್ಕೆ  ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದೆ. ತಂಡ ಮಾಡಿದ ತಪ್ಪುಗಳನ್ನು ಬೆಟ್ಟು ಮಾಡಿ ತೋರಿಸಿದ್ದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪರಿಣಾಮ ಬೀರಿತ್ತು. ಸೋಲನ್ನು ಸವಾಲಾಗಿ ಸ್ವೀಕರಿಸಿ ಪುಟಿದೇಳಲು ಸಾಧ್ಯವಾಗಿರುವುದಕ್ಕೇ ನಾವೆಲ್ಲರೂ ಭಾರತ ತಂಡದಲ್ಲಿದ್ದೇವೆ’ ಎಂದು ಅವರು ಅಭಿಪ್ರಾಯಪಟ್ಟರು.

ಪೂರ್ಣ ಸ್ವಾತಂತ್ರ್ಯ ನೀಡಿದ ಕೊಹ್ಲಿ
‘ನಾಯಕ ವಿರಾಟ್ ಕೊಹ್ಲಿ ನನ್ನ ಮೇಲೆ ಭರವಸೆ ಇರಿಸಿ ಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಬಾಲಿಂಗ್ ಮಾಡಲು ಸಾಧ್ಯವಾಯಿತು’ ಎಂದು ವೇಗಿ ಜಸ್‌ಪ್ರೀತ್ ಬೂಮ್ರಾ ಹೇಳಿದರು. ‘ನನ್ನಂಥ ಯುವ ಬೌಲರ್‌ ಮೇಲೆ ನಾಯಕ ವಿಶ್ವಾಸ ಇರಿಸಿ ಬೌಲಿಂಗ್ ಮಾಡಲು ಸ್ವಾತಂತ್ರ್ಯ ನೀಡಿದರೆ ಪೂರ್ಣ ಸಾಮರ್ಥ್ಯ ಹೊರಗೆಡವಲು ಸಾಧ್ಯ. ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ನಡೆದದ್ದು ಅದುವೇ’ ಎಂದು ಬೂಮ್ರಾ ಹೇಳಿದರು. ಈ ಪಂದ್ಯದಲ್ಲಿ ಬೂಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.