ADVERTISEMENT

ದಾಲ್ಮಿಯ ಬಿಸಿಸಿಐ ಪ್ರತಿನಿಧಿ

ಜೂನ್ 23ರಂದು ಐಸಿಸಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ನವದೆಹಲಿ (ಪಿಟಿಐ): ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಜೂನ್ 23ರಂದು ಲಂಡನ್‌ನಲ್ಲಿ ಆರಂಭವಾಗಲಿರುವ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಮಂಡಳಿಯನ್ನು ಪ್ರತಿನಿಧಿಸುವ ಸಾಧ್ಯತೆ ಇದೆ.

`ಹೌದು, ದಾಲ್ಮಿಯ ಲಂಡನ್‌ಗೆ ತೆರಳಲಿದ್ದಾರೆ. ಅವರು ಸಮ್ಮೇಳನದಲ್ಲಿ ಮಂಡಳಿಯನ್ನು ಪ್ರತಿನಿಧಿಸಲಿದ್ದಾರೆ. ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಆಯಾಯ ಮಂಡಳಿಯ ಅಧ್ಯಕ್ಷರು ಪ್ರತಿನಿಧಿಸುತ್ತಾರೆ. ಆದರೆ ಬಿಸಿಸಿಐ ಸಾಂವಿಧಾನಿಕ ಮುಖ್ಯಸ್ಥ ಎನ್.ಶ್ರೀನಿವಾಸನ್ ಈಗ ಅಧಿಕಾರದಿಂದ ಬದಿಗೆ ಸರಿದಿದ್ದಾರೆ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಆರೋಪಿಯಾಗಿರುವ ಅವರ ಅಳಿಯ ಗುರುನಾಥ್ ಮೇಯಪ್ಪನ್ ತನಿಖೆ ಮುಗಿಯುವವರೆಗೆ ಅವರು ಅಧಿಕಾರದಿಂದ ದೂರ ಇರಲಿದ್ದಾರೆ.

ಈ ಸಮ್ಮೇಳನದಲ್ಲಿ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿಯನ್ನು (ಯುಡಿಆರ್‌ಎಸ್) ಎಲ್ಲಾ ತಂಡಗಳು ಅಳವಡಿಸಬೇಕು ಎಂಬ ನಿರ್ಧಾರವನ್ನು ಐಸಿಸಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಇದಕ್ಕೆ ಬಿಸಿಸಿಐ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಹಾಗಾಗಿ ದಾಲ್ಮಿಯ ಮುಂದೆ ಈಗ ದೊಡ್ಡ ಸವಾಲಿದೆ. ಅಕಸ್ಮಾತ್ ಅದಕ್ಕೆ ಒಪ್ಪಿಗೆ ನೀಡಿದರೆ ಶ್ರೀನಿವಾಸನ್ ಅವರನ್ನು ಎದುರು ಹಾಕಿಕೊಂಡಂತಾಗುತ್ತದೆ.

ಯುಡಿಆರ್‌ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಟೆಸ್ಟ್ ಆಡುವ 10 ರಾಷ್ಟ್ರಗಳಲ್ಲಿ ಕನಿಷ್ಠ ಏಳು ರಾಷ್ಟ್ರಗಳು ಒಪ್ಪಿಗೆ ಸೂಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.