ADVERTISEMENT

ದಿಬಾಬ ವರ್ಷದ ವಿಶ್ವ ಶ್ರೇಷ್ಠ ಅಥ್ಲೀಟ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 19:30 IST
Last Updated 27 ನವೆಂಬರ್ 2015, 19:30 IST

ಮೊನಾಕೊ (ಎಎಫ್‌ಪಿ):  ಇಂಟರ್‌ ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಅಥ್ಲೆಟಿಕ್ಸ್‌ ಫೆಡರೇಷನ್‌ (ಐಎಎಎಫ್‌) ಶುಕ್ರವಾರ ಇಥಿಯೋಪಿಯದ ಮಧ್ಯಮ ಅಂತರದ ಓಟಗಾರ್ತಿ ಜೆಂಜೆಬೆ ದಿಬಾಬ ಮತ್ತು ಅಮೆರಿಕದ ಡೆಕಥ್ಲಾನ್‌ ಸ್ಫರ್ಧಿ ಆಸ್ಟನ್‌ ಈಟನ್‌ ಅವರ ಹೆಸರುಗಳನ್ನು ವರ್ಷದ ವಿಶ್ವ ಶ್ರೇಷ್ಠ ಅಥ್ಲಿಟ್‌ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಈಟನ್‌ ಈ ವರ್ಷದ ಆಗಸ್ಟ್‌ನಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಡೆಕಥ್ಲಾನ್‌ ಸ್ಪರ್ಧೆ ಯಲ್ಲಿ ಅಮೋಘ ಸಾಮರ್ಥ್ಯ ತೋರಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆ ಯನ್ನು ಉತ್ತಮ ಪಡಿಸಿಕೊಂಡಿದ್ದರು. ಜತೆಗೆ 27 ವರ್ಷದ ಅಮೆರಿಕದ ಅಥ್ಲೀಟ್‌ ಲಂಡನ್‌ ಒಲಿಂಪಿಕ್ಸ್‌ ಹಾಗೂ 2013ರಲ್ಲಿ ಮಾಸ್ಕೊದಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳಲ್ಲೂ ಚಿನ್ನ ಗೆದ್ದು ಮಿಂಚಿದ್ದರು.

24 ವರ್ಷದ ದಿಬಾಬ 1500 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಪ್ರಸ್ತುತ ವಿಶ್ವ ದಾಖಲೆ ಹೊಂದಿದ್ದಾರೆ. ಜತೆಗೆ ಒಳಾಂಗಣ ಟ್ರ್ಯಾಕ್‌ ಸ್ಪರ್ಧೆ ಗಳಲ್ಲಿ ಅವರು ಮೂರು ವಿಶ್ವ ದಾಖಲೆ ಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. ಮೂರು ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್‌  ತಿರುನೇಶ್‌ ಅವರ ಸಹೋದರಿಯಾಗಿರುವ ದಿಬಾಬ ಬೀಜಿಂಗ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 1500 ಮೀ. ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ಇವರಿಬ್ಬರ ಈ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಇವರ ಹೆಸರು ಗಳನ್ನು ನಾಮನಿರ್ದೇಶನ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.