ADVERTISEMENT

ದೂರ ಜಿಗಿತದ ಅರ್ಷಾದ್

ಪಿರಿಯಾಪಟ್ಟಣದಿಂದ ಪುಣೆಯವರೆಗೆ...

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:59 IST
Last Updated 4 ಜುಲೈ 2013, 19:59 IST

ಪುಣೆ: `ಅರ್ಷಾದ್ ಮುಂದಿನ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿರುವುದು ಬಹುತೇಕ ಖಚಿತ. ಆತನ ಎತ್ತರ, ಲಾಂಗ್‌ಜಂಪ್‌ಗಾಗಿಯೇ ರೂಪುಗೊಂಡಂತಿರುವ ಮೈಕಟ್ಟು ಆತನ ಸಾಧನೆಗೆ ಪೂರಕವಾಗಲಿದೆ' ಎಂದು ರಾಷ್ಟ್ರೀಯ ಕೋಚ್ ಶ್ಯಾಮ್‌ಕುಮಾರ್ `ಪ್ರಜಾವಾಣಿ'ಗೆ ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ಅರ್ಷಾದ್ ಇದೀಗ ಇಲ್ಲಿ ನಡೆಯುತ್ತಿರುವ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್‌ನ ಅರ್ಹತಾ ಸುತ್ತಿನ ಜಿಗಿತದಲ್ಲಿ ಗುರುವಾರ ಪಾಲ್ಗೊಂಡಿದ್ದರು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಅರ್ಷಾದ್ ಲಾಂಗ್‌ಜಂಪ್‌ಗೆ ಬಂದಿದ್ದೇ ಆಕಸ್ಮಿಕ. ಆದರೆ ಇವರು ಇದೀಗ ಭಾರತದ ಪ್ರಮುಖ ಲಾಂಗ್‌ಜಂಪ್ ಜಿಗಿತಗಾರನಾಗಿ ರೂಪುಗೊಂಡಿರುವುದಂತು ಅಚ್ಚರಿಯೇ.

`ನಮ್ಮೂರ ಶಾಲೆಯಲ್ಲಿ ನಾನು ಓದುತ್ತಿದ್ದಾಗ ಪಾಠಕ್ಕಿಂತ ಮೈದಾನದಲ್ಲಿ ಆಡುವುದರ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿದ್ದೆ. ಆಗ ಇಂತಹದ್ದೇ ಆಡಬೇಕೆಂದು ಮಾರ್ಗದರ್ಶನ ಮಾಡುವವರು ಕಡಿಮೆ. ಅದೊಂದು ದಿನ ತಾಲ್ಲೂಕು ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಹೈಜಂಪ್‌ನಲ್ಲಿ ಮೊದಲಿಗನಾಗಿ ಜಿಗಿದಿದ್ದೆ. ನಂತರ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಎತ್ತರದಿಂದ ಎತ್ತರಕ್ಕೆ ಜಿಗಿದಿದ್ದೆ. ಹೀಗಾಗಿ 2005ರ ರಾಷ್ಟ್ರೀಯ ಶಾಲಾಕ್ರೀಡಾ ಕೂಟ ಇದೇ ಊರಲ್ಲಿ ನಡೆದಿತ್ತಲ್ಲಾ, ಆಗ ಇಲ್ಲಿಗೆ ಬಂದಿದ್ದೆ' ಎಂದು ಅರ್ಷಾದ್ `ಪ್ರಜಾವಾಣಿ' ಜತೆಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.
`ಅದರ ಮರುವರ್ಷವೇ ನಾನು ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲ್‌ಗೆ ಆಯ್ಕೆಯಾದೆ. ಅಲ್ಲಿ ನಾನು ಲಾಂಗ್‌ಜಂಪ್ ಅಭ್ಯಾಸದಲ್ಲಿ ತೊಡಗಿದೆ. ಅಲ್ಲಿನ ತರಬೇತಿ ನನಗೆ ಆತ್ಮವಿಶ್ವಾಸ ತುಂಬುತ್ತಾ ಬಂದಿತು' ಎಂದರು.

ಅಲ್‌ಅಮೀನ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಇದೀಗ ಬಿಎ ಅಂತಿಮ ವರ್ಷದಲ್ಲಿರುವ ಅರ್ಷಾದ್ ತಮ್ಮ ತಂದೆ ರಿಜ್ವಾನ್ ಅವರನ್ನು ಅಪಾರವಾಗಿ ನೆನಪಿಸಿಕೊಳ್ಳುತ್ತಾರೆ. `ಕ್ರೀಡೆ ಎಂದರೆ ದೊಡ್ಡೋರ ವಿಷಯ ನಮಗ್ಯಾಕೆ ಅದೆಲ್ಲಾ... ಅಲ್ಲಿ ಹಣವಿದ್ದವರಷ್ಟೇ ಏನಾದರೂ ಮಾಡಲು ಸಾಧ್ಯ ಎಂದು ನಮ್ಮ ಸಮೀಪದ ಬಂಧು ಮಿತ್ರರೆಲ್ಲಾ ಹೇಳಿದಾಗ ಕ್ರೀಡಾ ಚಟುವಟಿಕೆ ಬಗ್ಗೆ ಅತೀವ ಆಸಕ್ತಿ ಇದ್ದ ನನ್ನ ತಂದೆ ನನಗೆ ಪ್ರೋತ್ಸಾಹ ನೀಡಿದರು' ಎನ್ನುತ್ತಾರೆ.

22ರ ಹರೆಯದ ಅರ್ಷಾದ್ ಈಗಾಗಲೇ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಕಂಚು, ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಸೇರಿದಂತೆ ರಾಷ್ಟ್ರೀಯ ಮಟ್ಟದ ಹಲವು ಕೂಟಗಳಲ್ಲಿ ಎತ್ತರದ ಸಾಧನೆ ತೋರಿದ್ದಾರೆ. ಇವರ ಕ್ರೀಡಾ ಸಾಧನೆಗಳಿಂದಾಗಿಯೇ ಇವರಿಗೆ ಭಾರತ ವಾಯುಪಡೆಯಲ್ಲಿ ಉದ್ಯೋಗ ದೊರೆತಿದ್ದು, ಹಿರಿಯ ನಾನ್‌ಕಮಿಷನ್ಡ್ ಅಧಿಕಾರಿಯಾಗಿದ್ದಾರೆ.  ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಅಂತರ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಇವರು 7.85ಮೀಟರ್ಸ್ ಎತ್ತರ ಜಿಗಿದಿದ್ದಾರೆ.

ಇಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಕಜಕಸ್ತಾನದ ಕಾನ್‌ಸ್ಟಾಂಟಿನ್ ಸಫ್ರೊನೊವ್ (ಏಪ್ರಿಲ್‌ನಲ್ಲಿ 8.10ಮೀ. ಜಿಗಿತ), ಭಾರತದ ಪ್ರೇಮಕುಮಾರ್ (8.00ಮೀ.), ಇರಾನ್‌ನ ಮಹಮ್ಮದ್ ಅರ್ಜಾದೆ (8.00ಮೀ.), ಚೀನಾದ ಟ್ಯಾಂಗ್ ಗೊಂಗೊಚೆವ್ (7.99ಮೀ.) ಅಂತಹವರ ಸವಾಲನ್ನು ಪಿರಿಯಾಪಟ್ಟಣದ ಅರ್ಷಾದ್ ಮೀರಿ ನಿಲ್ಲುವುದು ಅಸಾಧ್ಯ. ಇವರಿಗೆ ಪದಕ ಬರದಿದ್ದರೂ ಮುಂದಿನ ದಿನಗಳಲ್ಲಿ ಎತ್ತರದ ಸಾಮರ್ಥ್ಯ ತೋರಲು ಇದೊಂದು ಅತ್ಯಂತ ಉತ್ತಮ ಅನುಭವದ ಮೆಟ್ಟಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.