ADVERTISEMENT

ದೋನಿ ಆರ್ಭಟದಲ್ಲಿ ತೇಲಿದ ಕಿವೀಸ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:35 IST
Last Updated 16 ಫೆಬ್ರುವರಿ 2011, 18:35 IST

ಚೆನ್ನೈ: ಪಕ್ಕದಲ್ಲೇ ಭೋರ್ಗರೆಯು ತ್ತಿದ್ದ ಸಮುದ್ರದಲ್ಲಿ ಸೂರ್ಯ ಆಗ ತಾನೆ ಕೆಂಪಾಗಿ ಕರಗುತ್ತಿದ್ದ. ‘ಆ’ ಗೋದೂಳಿ ಮುಹೂರ್ತದಲ್ಲೇ ಸೊಗ ಸಾದ ಶತಕ ಪೂರೈಸಿದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಫ್ಲಡ್‌ಲೈಟ್ ಬೆಳಕಿನ ಮಳೆಯ ನಡುವೆಯೂ ಫಳ-ಫಳ ಹೊಳೆದರು.

ತಮ್ಮ ಅತ್ಯದ್ಭುತ ಬ್ಯಾಟಿಂಗ್ ಬಲದ ಮೂಲಕ ವಿಶ್ವಕಪ್ ಕ್ರಿಕೆಟ್ ಟೂರ್ನಿ ಮುಂಚಿನ ಕೊನೆಯ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದ ‘ಮಹಿ’, ತಂಡವು ‘ಹಾಟ್ ಫೇವರಿಟ್’ ಪಟ್ಟಿ ಯನ್ನು ಅಂಟಿಸಿಕೊಂಡೇ ‘ಕ್ರಿಕೆಟ್ ಸಾಮ್ರಾಜ್ಯ’ದ ಸಿಂಹಾಸನದತ್ತ ದಂಡ ಯಾತ್ರೆ ಆರಂಭಿಸುವಂತೆ ಮಾಡಿದರು.
ಬ್ಯಾಟಿಂಗ್ ಆರಂಭಿಸುವ ಮುನ್ನವೇ 360 ರನ್‌ಗಳ ಬೃಹತ್ ರನ್ ಬೆಟ್ಟವನ್ನು ನೋಡಿ ಕಂಗೆಟ್ಟಿದ್ದ ನ್ಯೂಜಿಲೆಂಡ್ ತಂಡ 43.1 ಓವರ್‌ಗಳಲ್ಲಿ 243 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಜೊತೆಗೆ 117 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು.

ಬ್ರೆಂಡನ್ ಮೆಕ್ಲಮ್ (58) ಮತ್ತು ಮಾರ್ಟಿನ್ ಗುಪ್ಟಿಲ್ (38) ಮೊದಲ ವಿಕೆಟ್‌ಗೆ 94 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿದ್ದರು. ಆದರೆ, ದೋನಿ ಬಹುಬೇಗನೆ ಸ್ಪಿನ್ನರ್ ಗಳನ್ನು ದಾಳಿಗೆ ಇಳಿಸಿದರು. ಆಶಿಶ್ ನೆಹ್ರಾ, ಹರ್ಭಜನ್ ಸಿಂಗ್, ಯುವ ರಾಜ್ ಸಿಂಗ್ ಮತ್ತು ಪಿಯೂಶ್ ಚಾವ್ಲಾ ತಲಾ ಎರಡು ವಿಕೆಟ್ ಪಡೆದರು. ಭಾರತದ ಅಗ್ರಮಾನ್ಯ ಆರಂಭಿಕ ಜೋಡಿ ಎನಿಸಿದ ಸಚಿನ್ ತೆಂಡೂ ಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ವಿಫಲರಾದಾಗ ನ್ಯೂಜಿ ಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ತುಟಿಯಂಚಿನ ನಗೆ ಮೂಡಿತ್ತು. ಆದರೆ, ಆ ನಗೆ ಕೆಲವೇ ಕ್ಷಣಗಳಲ್ಲಿ ಮಾಯವಾಗಿ ಮೊಗದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಕಾರಣ ದೆಹಲಿಯ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಆಡಿದ ರೀತಿ. ಮೂರನೇ ವಿಕೆಟ್‌ಗೆ 106 ರನ್‌ಗಳ ಜೊತೆ ಯಾಟವಾಡಿದ ಈ ಜೋಡಿ ತಂಡದ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆಯಿತು.

ಕೊನೆಯ 16 ಓವರ್‌ಗಳಲ್ಲಿ ಭಾರತ ತಂಡ ಟ್ವೆಂಟಿ-20 ಶೈಲಿಯಲ್ಲಿ ಬ್ಯಾಟ್ ಬೀಸಿತು. ಈ ಅವಧಿಯಲ್ಲಿ ಒಟ್ಟಾರೆ 193 ರನ್‌ಗಳು ಹರಿದು ಬಂದವು. ಇನಿಂಗ್ಸ್ 35ನೇ ಓವರ್ ನಲ್ಲಿ ಕಡ್ಡಾಯದ ಚೆಂಡು ಬದಲಾವಣೆ ಯಾದ ಮೇಲೆ ಬ್ಯಾಟಿಂಗ್ ಪವರ್ ಪ್ಲೇ ಪಡೆಯಲಾಯಿತು. ಆಗ ಕೇವಲ 12 ಎಸೆತಗಳಲ್ಲಿ ಗಂಭೀರ್ 31 ರನ್‌ಗಳನ್ನು ಕೊಳ್ಳೆ ಹೊಡೆದರು.

ಕಿವೀಸ್ ತಂಡದ ಬೌಲರ್‌ಗಳನ್ನು ಚೆನ್ನಾಗಿ ಗೋಳು ಹೊಯ್ದುಕೊಂಡ ಗಂಭೀರ್ ಶತಕದತ್ತ ಮುನ್ನುಗ್ಗಿದ್ದರು. ಟಿಮ್ ಸೌಥಿ ಎಸೆತವನ್ನು ನಿರ್ಧರಿಸು ವಲ್ಲಿ ಎಡವಿ ಜೇಮಿ ಹೌ ಕೈಗೆ ಚೆಂಡು ಕಳುಹಿಸಿದರು. ಅಷ್ಟರಲ್ಲಿ ಅವರು ನ್ಯೂಜಿಲೆಂಡ್ ತಂಡವನ್ನು ಮೂರು ತಿಂಗಳ ಹಿಂದೆ ಕಾಡಿದಂತೆ ಮತ್ತೆ ದುಃಸ್ವಪ್ನವಾಗಿ ಕಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.