ADVERTISEMENT

ದೋನಿ ನಿದ್ದೆಗೆಡಿಸಿರುವ ಬೌಲಿಂಗ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 18:45 IST
Last Updated 21 ಫೆಬ್ರುವರಿ 2011, 18:45 IST

ನವದೆಹಲಿ: ಹತ್ತನೇ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯ ಮೊದಲ ಬಹುಮಾನದ ಮೊತ್ತ 3.25 ದಶಲಕ್ಷ ಡಾಲರ್. ಅಂದರೆ ಸುಮಾರು 14 ಕೋಟಿ 80 ಲಕ್ಷ ರೂಪಾಯಿಗಳು. ಇದನ್ನು ಜೇಬಿಗಿಳಿಸಲು ನೆಚ್ಚಿನ ತಂಡವೆನಿಸಿದ ಭಾರತ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವುದರೊಂದಿಗೆ ಶುಭಾರಂಭ ಮಾಡಿದೆಯಾದರೂ ನಾಯಕ ಮಹೇಂದ್ರಸಿಂಗ್ ದೋನಿ ಅವರ ಮುಖದಲ್ಲಿ ಚಿಂತೆಯ ಗೆರೆಗಳೂ ಮೂಡಿವೆ.

ಬಾಂಗ್ಲಾದೇಶ ವಿರುದ್ಧ ಭಾರತ ಗೆಲ್ಲುವುದರಲ್ಲಿ ಅನುಮಾನವೇ ಇರಲಿಲ್ಲ. ದೋನಿಗೆ ಗೆಲುವಿನ ವಿಶ್ವಾಸ ಮೊದಲಿನಿಂದಲೇ ಇತ್ತು. ಅದೇ ರೀತಿ ಭಾರತದ ಬ್ಯಾಟ್ಸಮನ್ನರು ಬಾಂಗ್ಲಾದ ಬೌಲರುಗಳನ್ನು ಚೆಂಡಾಡಿದರು. ಬ್ಯಾಟ್ಸಮನ್ನರು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿಯೇ ನಿಭಾಯಿಸಿದ ಮೇಲೆ, ಬಾಂಗ್ಲಾದೇಶದ ಗಾಯದ ಮೇಲೆ ಉಪ್ಪು ಸವರಬೇಕಾಗಿದ್ದವರು ಬೌಲರುಗಳು. ಆದರೆ ಭಾರತ ಬೌಲಿಂಗ್‌ನಲ್ಲಿ ಸ್ವಲ್ಪ ದುರ್ಬಲವಾಗಿದೆಯೆಂಬ ಅಂಶ ನಿಜವಾಯಿತು. ಬಾಂಗ್ಲಾದೇಶ 283 ರನ್ನುಗಳನ್ನು ಗಳಿಸಲು ಬಿಟ್ಟದ್ದು ಇದಕ್ಕೆ ಸಾಕ್ಷಿ. ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಚುರುಕುತನ ಇರದಿದ್ದುದು ದೋನಿಗೆ ಸಮಾಧಾನ ತರಲಿಲ್ಲ.

ಭಾರತದ ಬೌಲರುಗಳಿಗೆ ಎಲ್ಲ ಹತ್ತು ವಿಕೆಟ್‌ಗಳನ್ನು ಉರುಳಿಸಲೂ ಸಾಧ್ಯವಾಗಲಿಲ್ಲ. ಬಾಂಗ್ಲಾ ವಿರುದ್ಧವೇ ಹೀಗಾದರೆ ಇಂಗ್ಲೆಂಡ್, ದಕ್ಷಿಣ ಆಫ್ರಿಕ ವಿರುದ್ಧ ಇನ್ನೂ ಕಷ್ಟವಾಗುವುದು ಖಂಡಿತ. ಭಾರತದ ಅಗ್ರಮಾನ್ಯ ಬೌಲರುಗಳೆಂದರೆ ಜಹೀರ್ ಖಾನ್ ಮತ್ತು ಹರಭಜನ್‌ಸಿಂಗ್. ಉಳಿದವರಿಂದ ಇವರಿಬ್ಬರಿಗೆ ಸರಿಯಾದ ಬೆಂಬಲ ಸಿಗಬೇಕು. ಢಾಕಾದಲ್ಲಿ ಎಸ್. ಶ್ರೀಶಾಂತ್ ಯದ್ವಾತದ್ವಾ ಬೌಲಿಂಗ್ ಮಾಡಿದರು. ಅವರಲ್ಲಿ ಛಲದ ಜೊತೆ ಸಿಟ್ಟು, ಸಿಡುಕುತನ ತುಂಬಿದೆ. ಅವರ ಸಿಟ್ಟೇ ಛಲಕ್ಕೆ ಪೆಟ್ಟು ಕೊಡುತ್ತಿದೆ. ಅವರು ಪಾಠ ಕಲಿಯುತ್ತಿಲ್ಲ. ಪ್ರವೀಣಕುಮಾರ್ ಗಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ಬಂದ (ಇದಕ್ಕೇ ಅದೃಷ್ಟ ಎನ್ನುವುದು) ಶ್ರೀಶಾಂತ್ ಅವರನ್ನು ಮಹತ್ವದ ಪಂದ್ಯಗಳಲ್ಲಿ ಆಡಿಸುವ ಬಗ್ಗೆ ದೋನಿ ಎರಡೆರಡು ಸಲ ಯೋಚನೆ ಮಾಡಬಹುದು.

ಢಾಕಾದಲ್ಲಿ ಜಹೀರ್ ಖಾನ್ ಕೂಡ ಮೊದಮೊದಲು ಚೆನ್ನಾಗಿ ಬೌಲ್ ಮಾಡಲಿಲ್ಲ. ಮುನಾಫ್ ಪಟೇಲ್ ಒಬ್ಬರೇ ಗಮನ ಸೆಳೆದವರು. ಭಾರತ ದೊಡ್ಡ ಮೊತ್ತ ಗಳಿಸಿದ್ದು ಬೌಲರುಗಳ ಮೇಲಿನ ಒತ್ತಡ ಕಡಿಮೆ ಮಾಡಿತ್ತಾದರೂ ಜಹೀರ್ ಮತ್ತು ಹರಭಜನ್ ಬ್ಯಾಟ್ಸಮನ್ನರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಕಂಡುಬರಲಿಲ್ಲ. ಯೂಸುಫ್ ಪಠಾಣ್ ಮತ್ತು ಯುವರಾಜ್ ಸಿಂಗ್ ದಂಡನೆಗೊಳಗಾಗದಿದ್ದುದು ಅವರ ಪುಣ್ಯ. ಯಾಕೆಂದರೆ ಬಾಂಗ್ಲಾದೇಶ ತಂಡದಲ್ಲಿ ಮೂರ್ನಾಲು ಜನ ಉತ್ತಮ ಎನ್ನಬಹುದಾದ ಬ್ಯಾಟ್ಸಮನ್ನರನ್ನು ಬಿಟ್ಟರೆ ಉಳಿದವರು ಅಂತರರಾಷ್ಟ್ರೀಯ ದರ್ಜೆಯಲ್ಲಿ ಇಲ್ಲ. ಬಾಂಗ್ಲಾದೇಶ ತನ್ನ ಯಶಸ್ಸಿಗೆ ಸ್ಪಿನ್ ಬೌಲರುಗಳನ್ನೇ ಹೆಚ್ಚು ನೆಚ್ಚಿಕೊಂಡಿರುವುದರಿಂದ, ಟಾಸ್ ಗೆದ್ದ ಮೇಲೆ ಮೊದಲು ಬ್ಯಾಟ್ ಮಾಡುವುದೇ ಸೂಕ್ತವಾಗುತ್ತಿತ್ತು.

200 ರಿಂದ 250 ವರೆಗೆ ರನ್ನುಗಳು ಬಂದರೆ ನಂತರ ಎದುರಾಳಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇರುತ್ತಿತ್ತು. ಆದರೆ ನಾಯಕ ಶಕೀಬ್ ಅಲ್ ಹಸನ್ ಭಾರತವನ್ನು ಆಡಲು ಇಳಿಸಿ ಸೋಲನ್ನು ಬರಮಾಡಿಕೊಂಡರು.

ಹಗಲು-ರಾತ್ರಿ ಪಂದ್ಯಗಳಲ್ಲಿ ಇಬ್ಬನಿಯ ಸಮಸ್ಯೆ ಸ್ವಲ್ಪಾದರೂ ಎದುರಾಗಬಹುದು. ಅಂದರೆ ರಾತ್ರಿ ಮೈದಾನ ತೇವಗೊಂಡು ಬೌಲರುಗಳು, ಅದರಲ್ಲೂ ಸ್ಪಿನ್ನರುಗಳಿಗೆ ಚೆಂಡಿನ ಹಿಡಿತ ಸಾಧ್ಯವಾಗಲಿಕ್ಕಿಲ್ಲ. ಚೆಂಡು ಜಾರುವುದರಿಂದ ಬೌಲಿಂಗ್ ಗತಿ ತಪ್ಪಬಹುದು. ಈ ಯೋಚನೆಯಿಂದಲೇ ಶಕೀಬ್ ಮೊದಲು ಫೀಲ್ಡ್ ಮಾಡಿದ್ದು. ದೋನಿಗೆ ಕೂಡ ಇದೇ ಯೋಚನೆ ಇತ್ತಾದರೂ ಟಾಸ್ ಸೋತಿದ್ದರಿಂದ ಯಾವುದೇ ರೀತಿಯ ಟೀಕೆಯಿಂದ ಅವರು ಪಾರಾದರು. ಆದರೆ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿರುವುದರಿಂದ ಯಾವುದೇ ಮೊತ್ತವನ್ನು  ಬೆನ್ನಟ್ಟುವ ವಿಶ್ವಾಸ ದೋನಿಪಡೆಗಿದೆ. ಇದರಿಂದಾಗಿಯೇ ದೋನಿ ಕೂಡ ಟಾಸ್ ಗೆದ್ದಿದ್ದರೆ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಇತ್ತು.

ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಭಾರತ ಇಬ್ಬರು ಸ್ಪಿನ್ನರುಗಳನ್ನು (ಹರಭಜನ್ ಮತ್ತು ಪಿಯುಶ್ ಚಾವ್ಲ) ಆಡಿಸುವ ಯೋಚನೆ ಮಾಡಬಹುದು. ವೆಸ್ಟ್‌ಇಂಡೀಸ್, ಐರ್ಲೆಂಡ್ ಮತ್ತು ನೆದರ್‌ಲೆಂಡ್ ವಿರುದ್ಧ ಸುಲಭವಾಗಿ ಗೆಲ್ಲುವ ಸಾಧ್ಯತೆಗಳಿರುವುದರಿಂದ, ಭಾರತಕ್ಕೆ ಕ್ವಾರ್ಟರ್ ಫೈನಲ್ ವರೆಗೆ ಮುನ್ನಡೆಯುವುದು ಕಷ್ಟವಾಗುವುದಿಲ್ಲ. ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್ ವಿರುದ್ಧ ಸೋತರೂ ಕ್ವಾರ್ಟರ್ ಫೈನಲ್ ಸ್ಥಾನ ಗಟ್ಟಿ. ಭಾರತದ ಬೌಲರುಗಳ ಸತ್ವಪರೀಕ್ಷೆ ಆಗುವುದು ಕ್ವಾರ್ಟರ್ ಫೈನಲ್ ಹಂತದಿಂದಲೇ. ಹಾಗೆಯೇ ಫೀಲ್ಡಿಂಗ್ ಬಗ್ಗೆಯೂ ದೋನಿ ಗಂಭೀರವಾಗಿ ಯೋಚಿಸಬೇಕಿದೆ. 1983 ರ ವಿಶ್ವಕಪ್‌ನಲ್ಲಿ ಭಾರತದ ಜಯಭೇರಿಗೆ ಫೀಲ್ಡಿಂಗ್ ಮುಖ್ಯ ಕಾರಣವಾಗಿತ್ತು. ಇಪ್ಪತ್ತು ಮೂವತ್ತು ರನ್ನುಗಳನ್ನು ಉಳಿಸಿದರೆ ಅದೇ ನಿರ್ಣಾಯಕವಾಗುವ ಸಾಧ್ಯತೆ ಇರುತ್ತದೆ. ಆ ಒಂದು ಕಾರಣಕ್ಕಾಗಿಯೇ ಸುರೇಶ್ ರೈನಾ ತಂಡದೊಳಗೆ ಸ್ಥಾನ ಪಡೆಯಬೇಕು.

ಬರುವ ಭಾನುವಾರದ ವರೆಗೆ ದೋನಿಪಡೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತದೆ. ದೊನಿ ತಮ್ಮ ಬೌಲರುಗಳಷ್ಟೇ ಅಲ್ಲದೇ ಎಲ್ಲರೂ ಫೀಲ್ಡಿಂಗ್‌ನಲ್ಲಿ ಹೆಚ್ಚು ಬೆವರು ಸುರಿಸುವಂತೆ ಮಾಡಬೇಕು. ಇಲ್ಲದಿದ್ದರೆ ಹದಿನೈದು ಕೋಟಿ ರೂಪಾಯಿಗಳ ಗಂಟು ಕನಸಿನ ಗಂಟಾಗಿಬಿಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.