ADVERTISEMENT

ದೋನಿ ಪಡೆ ಟ್ರೋಫಿ ಗೆಲ್ಲಲಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 19:00 IST
Last Updated 31 ಮಾರ್ಚ್ 2011, 19:00 IST
ದೋನಿ ಪಡೆ ಟ್ರೋಫಿ ಗೆಲ್ಲಲಿ
ದೋನಿ ಪಡೆ ಟ್ರೋಫಿ ಗೆಲ್ಲಲಿ   

 ನವದೆಹಲಿ (ಪಿಟಿಐ): ದೋನಿ ಪಡೆಯ ಸಾಧನೆಗೆ ಭಾರತದೆಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಮಣಿಸಿದ ‘ಮಹೀ’ ಪಡೆಯ ‘ಹೀರೊ’ಗಳಿಗೆ ಈಗ ಎಲ್ಲೆಡೆಯೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೆ ಸಾಮಾಜಿಕ ತಾಣ ಟ್ವಿಟರ್ ಕೂಡಾ ಹೊರತಾಗಿಲ್ಲ.

ಬಾಲಿವುಡ್ ನಟ, ನಟಿಯರು, ಹಿರಿಯ ಆಡಳಿತಾಧಿಕಾರಿಗಳು, ಆಟಗಾರರು ತಮ್ಮ ಶುಭಾಶಯ ಸಂದೇಶವನ್ನು ಟ್ವಿಟರ್ ಮೂಲಕ ಹರಿ ಬಿಡುತ್ತಿದ್ದಾರೆ. ಬಾಲಿವುಡ್ ನಟಿಯರಾದ ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಪ್ರಿಯಾಂಕ ಚೋಪ್ರಾ, ಆರ್. ಮಾಧವನ್, ಸ್ಪಿನ್ ಮಾಂತ್ರಿಕ ಶೇನ್ ವಾರ್ನ್, ಟೆನಿಸ್ ಆಟಗಾರರಾದ ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ, ಐಸಾಮ್-ಉಲ್-ಹಕ್-ಖರೇಷಿ, ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ರಾಮನ್ ಸೇರಿದಂತೆ ಹಲವಾರು ಗಣ್ಯರು ಪಾಕ್ ವಿರುದ್ಧದ ಪಂದ್ಯದಲ್ಲಿ ಗೆಲುವು ಪಡೆದದ್ದಕ್ಕೆ ಅಭಿನಂದನೆ ಸಲ್ಲಿಸಿ, ಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.

‘ವಾಹ್! ಅಭೂತಪೂರ್ವವಾದ ಪಂದ್ಯ, ಮೊಹಾಲಿಯ ಪಂಜಾಬ್ ಸಂಸ್ಥೆ  ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಮಧ್ಯೆ, ಸಾಕಷ್ಟು  ಒತ್ತಡದ ನಡುವೆಯೂ ಭಾರತ ಗೆದ್ದು ಬಿಟ್ಟಿತು’ ಎಂದು ನಟಿ ಶಿಲ್ಪಾ ಶೆಟ್ಟಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ‘ಓ ಮೈ ಗಾಡ್!. ಎಂಥ ಅದ್ಭುತ ಪಂದ್ಯವಿದು. ತಂಡದ ಪ್ರದರ್ಶನ ಉತ್ತಮವಾಗಿತ್ತು. ಮುಂಬೈಯಲ್ಲಿ ವಿಶ್ವಕಪ್ ಭಾರತ ತಂಡಕ್ಕಾಗಿ ಕಾದಿದೆ’ ಎಂದು ಇನ್ನೊಬ್ಬ ನಟಿ ಪ್ರಿಯಾಂಕ ಚೋಪ್ರಾ ಬರೆದಿದ್ದಾರೆ. 

‘ಮೊಹಾಲಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತು. ಟ್ರೋಫಿಯನ್ನು ಕೈಗೆತ್ತಿಕೊಳ್ಳಲು ಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದಷ್ಟೇ ಬಾಕಿ’ ಎಂದು ನಿರ್ಮಾಪಕ ಮಧುರ್ ಭಂಡಾರಕರ್ ಹೇಳಿದರೆ, ಅಭಿಷೇಕ್ ಬಚ್ಚನ್, ರಿತೇಷ್ ದೇಶಮುಖ್ ಹಾಗೂ ಶಬಾನಾ ಅಜ್ಮಿ ಫೈನಲ್ ಪಂದ್ಯಕ್ಕಾಗಿ ಭಾರತ ತಂಡಕ್ಕೆ ‘ಅಲ್ ದ ಬೆಸ್ಟ್’ ಎಂದಿದ್ದಾರೆ.

‘ಯಾ ಹೂ...! ಬ್ಯಾಡ್ ಲಕ್ ಪಾಕಿಸ್ತಾನ್. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅಭೂತಪೂರ್ವ ಗೆಲುವನ್ನು ಪಡೆಯಿತು. ದೋನಿ ಬಳಗಕ್ಕೆ ಟ್ರೋಫಿ ಎತ್ತಿ ಹಿಡಿಯಲು ಇನ್ನೂ ಒಂದು ಹೆಜ್ಜೆಯಷ್ಟೇ ಬಾಕಿಯಿದೆ. ಆ ಕೆಲಸವನ್ನು ಯಶಸ್ವಿಯಾಗಿ ಮುಗಿಸಲಿ. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸಲಿ’ ಎಂದು ಪಾಕಿಸ್ತಾನದ ಸೊಸೆ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ತಾಣದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.