ADVERTISEMENT

ದೋನಿ ಬಳಗದ ಗರ್ವಭಂಗಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಕೋಲ್ಕತ್ತ: `ಇಡೀ ತಂಡವನ್ನೇ ಕಿತ್ತೊಗೆದು ಹೊಸ ತಂಡ ಕಟ್ಟಿ ಆಯ್ಕೆದಾರರೇ' ಎಂದು ಬರೆದ ಬ್ಯಾನರ್‌ವೊಂದನ್ನು ಈಡನ್ ಅಂಗಳದ ಗ್ಯಾಲರಿಯಲ್ಲಿ ಬೇಸರದಿಂದಲೇ ಪ್ರದರ್ಶಿಸುತ್ತಿದ್ದ ಆ ಕ್ರೀಡಾ ಪ್ರೇಮಿಗಳು ಖಂಡಿತ ಭಾರತ ತಂಡದ ಆಟದ ವೈಖರಿಯನ್ನು ಕ್ಷಮಿಸಲಾರರು.

ಅಷ್ಟೊಂದು ಕೆಟ್ಟದಾದ ಆಟವದು. ಕ್ರೀಡೆಯಲ್ಲಿ ಸೋಲು ಗೆಲುವು ಇದ್ದದ್ದೇ. ಆದರೆ ಸೋಲನ್ನೇ ಮೈಯಲ್ಲಿ ತುಂಬಿಕೊಂಡು ಕಣಕ್ಕಿಳಿದವರಂತಿದ್ದ ಈ ತಂಡದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ತನ್ನನ್ನು ಯಾರಾದರು ಬೇಟೆಯಾಡಬಹುದು ಎಂಬ ಭಯದಿಂದ ಅತ್ತಿತ್ತ ಕತ್ತು ಅಲುಗಾಡಿಸುತ್ತಿರುವ ಜಿಂಕೆಯಂತಾಗಿದೆ ಆತಿಥೇಯ ತಂಡದವರ ಪರಿಸ್ಥಿತಿ!

ಪರಿಣಾಮ ಹಲವು ಸುಂದರ ನೆನಪುಗಳನ್ನು ಕಟ್ಟಿಕೊಟ್ಟ ಕ್ರೀಡಾಂಗಣದಲ್ಲಿಯೇ ಭಾರತ ತಂಡದ ಅಧಃಪತನಕ್ಕೆ ಕ್ಷಣಗಣನೆ ಶುರುವಾಗಿದೆ. ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದ್ದು ಸರಣಿ ಮುನ್ನಡೆಯ ರೋಮಾಂಚನಕ್ಕಾಗಿ ಕಾದು ನಿಂತಿದೆ.

ದೋನಿ ಬಳಗ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದ ಅಂತ್ಯಕ್ಕೆ 83 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದೆ. ಈ ಮೂಲಕ 207 ರನ್‌ಗಳ ಇನಿಂಗ್ಸ್ ಹಿನ್ನಡೆಯನ್ನು ಚುಕ್ತಾ ಮಾಡಿ ಕೇವಲ 32 ರನ್‌ಗಳ ಮುನ್ನಡೆ ಸಾಧಿಸಿದೆ. ಪ್ರವಾಸಿ ತಂಡ ತನ್ನ ಮೊದಲ ಇನಿಂಗ್ಸ್ ನಲ್ಲಿ 523 ರನ್ ಕಲೆಹಾಕಿತ್ತು.

ಕೊನೆಯ ಆಸರೆ: ಆರ್.ಅಶ್ವಿನ್ (ಬ್ಯಾಟಿಂಗ್ 83; 151 ಎ., 13 ಬೌಂ.) ಆಸರೆಯಾಗದಿದ್ದರೆ ಶನಿವಾರವೇ ಭಾರತದ ಕಥೆ ಮುಗಿದು ಹೋಗುತಿತ್ತು. ಆದರೆ 159 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಅವರಾಟ ಸಾಂತ್ವನ ಹೇಳಿದೆ.

ಇಶಾಂತ್ ಜೊತೆಗೂಡಿ 38 ರನ್ ಹಾಗೂ ಓಜಾ ಜೊತೆಗೂಡಿ 42 ರನ್ ಸೇರಿಸಿರುವ ಅಶ್ವಿನ್ ಇನಿಂಗ್ಸ್ ಸೋಲು ತಪ್ಪಿಸಿದರು. ಅದೊಂದೇ ಭಾರತಕ್ಕೆ ಲಭಿಸಿದ ಸಮಾಧಾನ. ಅವರಷ್ಟು ತಾಳ್ಮೆಯನ್ನು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪ್ರದರ್ಶಿಸಿದ್ದರೆ ಈ ಪಂದ್ಯ ಉಳಿಸಿಕೊಳ್ಳಲು ಪ್ರಯತ್ನಿಸಬಹುದಿತ್ತೇನೊ?

ಅಶ್ವಿನ್ ಹೋರಾಟದ ಫಲವಾಗಿ ಪಂದ್ಯ ಕೊನೆಯ ದಿನಕ್ಕೆ ವಿಸ್ತರಿಸಿದೆ. ಆದರೆ ಇರುವುದೊಂದೇ ವಿಕೆಟ್. ಈ ಕಾರಣ ಇಂಗ್ಲೆಂಡ್ ತಂಡದವರು ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ಭರವಸೆ ಇಟ್ಟುಕೊಳ್ಳಬಹುದು. 1999-2000ರ ಬಳಿಕ ಸ್ವದೇಶದಲ್ಲಿ ಭಾರತ ತಂಡ ಸತತ ಎರಡು ಟೆಸ್ಟ್ ಸೋತಿಲ್ಲ. ಈಗ ಇತಿಹಾಸ ಮರುಕಳಿಸುವುದು ಬಹುತೇಕ ಖಚಿತವಾಗಿದೆ.

ಪೆರೇಡ್ ನಡೆಸಿದ ಆತಿಥೇಯರು: ಭಾರತ ತಂಡ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 86 ರನ್ ಗಳಿಸಿತ್ತು. ತಿರುಗೇಟು ನೀಡಬಹುದು ಎಂಬ ಭರವಸೆಯನ್ನು ಅದು ಮೂಡಿಸಿತ್ತು. ಆದರೆ ಅದು ನೀರಿನ ಮೇಲಿನ ಗುಳ್ಳೆಯಂತೆ ಕೆಲವೇ ನಿಮಿಷಗಳಲ್ಲಿ ಒಡೆದು ಹೋಯಿತು. ಏಕೆಂದರೆ ಆ ಮೊತ್ತಕ್ಕೆ 36 ಸೇರಿಸುವಷ್ಟರಲ್ಲಿ 6 ವಿಕೆಟ್‌ಗಳು ಪತನಗೊಂಡವು. ನಂದಿ ಹೋಗುತ್ತಿದ್ದ ದೀಪಕ್ಕೆ ಎಣ್ಣೆ ಬಿಡುವವರೇ ಇರಲಿಲ್ಲ.

ದ್ರಾವಿಡ್ ಹಾಗೂ ಲಕ್ಷ್ಮಣ್ ವಿದಾಯ ಹೇಳಿರುವುದು ಮಧ್ಯಮ ಕ್ರಮಾಂಕದ ಶೋಚನೀಯ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಿದೆ. ದುರ್ಬಲ ತಂಡಗಳ ಎದುರು ಅದು ಗೊತ್ತಾಗಿರಲಿಲ್ಲ. ಆದರೆ ಈಗ ಹಣೆಬರಹ ಬೆತ್ತಲಾಗುತ್ತಿದೆ. ಆಯ್ಕೆದಾರರು ಏನು ಮಾಡುತ್ತಾರೋ ಗೊತ್ತಿಲ್ಲ.

ನಾಯಕ ದೋನಿ ಸೊನ್ನೆ ಸುತ್ತಿದರು. ಟೆಸ್ಟ್‌ನಲ್ಲಿ ಇದು ಅವರು ಸುತ್ತಿದ ಎಂಟನೇ ಸೊನ್ನೆ. ಕೆಲ ಪ್ರೇಕ್ಷಕರು ಅವರತ್ತ ನಿರಾಶೆಯ ಮಾತುಗಳನ್ನು ಹರಿಬಿಟ್ಟರು. ಕ್ರೀಡಾ ಪ್ರೇಮಕ್ಕೆ ಹೆಸರುವಾಸಿಯಾಗಿರುವ ಈ ನಗರದ ಜನರ ಸಹನೆಯ ಕಟ್ಟೆಯೊಡೆದಿರುವುದಕ್ಕೆ ಅದೊಂದು ಉದಾಹರಣೆ. ಸುಮಾರು 35 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಬೇಸರದಿಂದಲೇ ಮನೆಯತ್ತ ಹೆಜ್ಜೆ ಇಡಬೇಕಾಯಿತು.
ಸ್ಪಿನ್ನರ್‌ಗಳು ಬದಿಗಿರಲಿ, ವೇಗಿಗಳಾದ ಆ್ಯಂಡರ್ಸನ್ ಹಾಗೂ ಫಿನ್ ದಾಳಿಯನ್ನು ಎದುರಿಸಲೂ ಈ ಪಿಚ್‌ನಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಡಬಡಾಯಿಸಿದರು. ಆದರೆ ಇದೇ ಪಿಚ್‌ನಲ್ಲಿ ಭಾರತದ ಜಹೀರ್ ಹಾಗೂ ಇಶಾಂತ್ ವಿಕೆಟ್ ಪಡೆಯಲು ಪರದಾಡಿದ್ದು ವಿಪರ್ಯಾಸ.

ಮತ್ತೆ ಗಂಭೀರ್ ಎಡವಟ್ಟು: ಎರಡನೇ ಇನಿಂಗ್ಸ್ ಆರಂಭಿಸಿದ ಗಂಭೀರ್ ಹಾಗೂ ಸೆಹ್ವಾಗ್ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆ್ಯಂಡರ್ಸನ್ ಎಸೆತದಲ್ಲಿ ಅವರು ಒಮ್ಮೆ ಜೀವದಾನ ಪಡೆದಿದ್ದರು. ಆದರೆ ಊಟ ಹೆಚ್ಚಾಯಿತು ಎಂದು ಕಾಣಿಸುತ್ತದೆ. ಭೋಜನ ವಿರಾಮದ ಬಳಿಕದ ಮೊದಲ ಎಸೆತದಲ್ಲಿಯೇ ಸೆಹ್ವಾಗ್ (49; 57 ಎ., 7 ಬೌಂ.) ಬೌಲ್ಡ್ ಆದರು. ಆ ವಿಕೆಟ್ ಪಡೆದ ಆಫ್ ಸ್ಪಿನ್ನರ್ ಸ್ವಾನ್ ಸಂತೋಷ ಹೇಳತೀರದು.

ಆದರೆ ಗಂಭೀರ್ ಮಾಡಿದ ಎಡವಟ್ಟು ಒಂದೊಂದಲ್ಲ. ಮೊದಲ ಇನಿಂಗ್ಸ್‌ನಲ್ಲಿ ಸೆಹ್ವಾಗ್ ರನ್‌ಔಟ್‌ಗೆ ಕಾರಣವಾಗಿದ್ದ ಅವರು ಈ ಬಾರಿ ಪೂಜಾರ ರನ್‌ಔಟ್‌ಗೆ ಕಾರಣರಾದರು. ಕಷ್ಟವಿದ್ದ ರನ್‌ಗೆ ಓಡಲು ಪೂಜಾರ ಅವರನ್ನು ಪ್ರಚೋದಿಸಿದರು. ಅದು ಭಾರತದ ಸೋಲಿಗೆ ಮುನ್ನುಡಿ ಬರೆದಂತಿತ್ತು.

ಗೊಂದಲಕ್ಕೆ ಕಾರಣವಾದ ಕ್ಯಾಚ್: ಸ್ವಾನ್ ಎಸೆತದಲ್ಲಿ ಗಂಭೀರ್‌ಗೆ ತಾಗಿ ಹೋದ ಚೆಂಡನ್ನು ಸ್ಲಿಪ್‌ನಲ್ಲಿ ಟ್ರಾಟ್ ಹಿಡಿತಕ್ಕೆ ಪಡೆದಿದ್ದರು. ಟ್ರಾಟ್ ಆ ಕ್ಯಾಚ್ ಪಡೆಯುವ ಮುನ್ನ ಚೆಂಡು ನೆಲಕ್ಕೆ ತಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲು ಮೂರನೇ ಅಂಪೈರ್ ಮೊರೆಹೋಗಲಾಯಿತು.

ನಾಯಕ ಕುಕ್ ಹಾಗೂ ಬ್ಯಾಟ್ಸ್‌ಮನ್ ಗಂಭೀರ್ ಜೊತೆಗೂ ಅಂಪೈರ್‌ಗಳಾದ ಧರ್ಮಸೇನಾ ಹಾಗೂ ಟಕ್ಕರ್ ಸಮಾಲೋಚನೆ ನಡೆಸಿದರು. `ಆ ಕ್ಯಾಚ್ ಬ್ಯಾಟ್‌ಗೆ ತಾಗಿಲ್ಲ' ಎಂದು ಮೂರನೇ ಅಂಪೈರ್ ವಿನೀತ್ ಕುಲಕರ್ಣಿ ಫೀಲ್ಡ್ ಅಂಪೈರ್‌ಗಳಿಗೆ ಮಾಹಿತಿ ರವಾನಿಸಿದರು. ಆ ಆತಂಕದಿಂದ ಪಾರಾದ ಗಂಭೀರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ದೋನಿ 200ನೇ ಕ್ಯಾಚ್: ಬೆಳಿಗ್ಗೆ ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ಗೆ ಅಂತ್ಯ ಹೇಳಲು ಭಾರತದ ಬೌಲರ್‌ಗಳು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರವಾಸಿ ತಂಡದವರು ಕೇವಲ 20 ನಿಮಿಷದಲ್ಲಿ ಆಲೌಟಾದರು. ಜಹೀರ್ ಬೌಲಿಂಗ್‌ನಲ್ಲಿ ಪ್ರಯೋರ್ ನೀಡಿದ ಕ್ಯಾಚ್ ಪಡೆದ ದೋನಿ 200ನೇ ಕ್ಯಾಚ್ ಶ್ರೇಯಕ್ಕೆ ಪಾತ್ರರಾದರು. ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್ ಕೀಪರ್.

ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನಿಂಗ್ಸ್ 105 ಓವರ್‌ಗಳಲ್ಲಿ 316

ಇಂಗ್ಲೆಂಡ್ ಮೊದಲ ಇನಿಂಗ್ಸ್ 167.3

ADVERTISEMENT

ಓವರ್‌ಗಳಲ್ಲಿ 523
(ಶುಕ್ರವಾರ 163 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 509)
ಮಟ್ ಪ್ರಯೋರ್ ಸಿ ದೋನಿ ಬಿ ಜಹೀರ್ ಖಾನ್  41
ಗ್ರೇಮ್ ಸ್ವಾನ್ ಸಿ ಸೆಹ್ವಾಗ್ ಬಿ ಪ್ರಗ್ಯಾನ್ ಓಜಾ  21
ಸ್ಟೀವನ್ ಫಿನ್ ಔಟಾಗದೆ  04
ಜೇಮ್ಸ ಆ್ಯಂಡರ್ಸನ್ ಸಿ ಸೆಹ್ವಾಗ್ ಬಿ ಆರ್.ಅಶ್ವಿನ್ 09
ಮಾಂಟಿ ಪನೇಸರ್ ಎಲ್‌ಬಿಡಬ್ಲ್ಯು ಬಿ ಆರ್.ಅಶ್ವಿನ್  00
ಇತರೆ (ನೋಬಾಲ್-5, ಬೈ-13, ಲೆಗ್‌ಬೈ-4)  22
ವಿಕೆಟ್ ಪತನ: 7-510 (ಸ್ವಾನ್; 163.2); 8-510 (ಪ್ರಯೋರ್; 164.2); 9-523 (ಆ್ಯಂಡರ್ಸನ್; 167.2); 10-523 (ಪನೇಸರ್; 167.3).
ಬೌಲಿಂಗ್: ಜಹೀರ್ ಖಾನ್ 31-6-94-1, ಇಶಾಂತ್ ಶರ್ಮ 29-8-78-1 (ನೋಬಾಲ್-5), ಆರ್.ಅಶ್ವಿನ್ 52.3-9-183-3, ಪ್ರಗ್ಯಾನ್ ಓಜಾ 52-10-142-4, ಯುವರಾಜ್ ಸಿಂಗ್ 3-1-9-0

ಭಾರತ ದ್ವಿತೀಯ ಇನಿಂಗ್ಸ್ 83 ಓವರ್‌ಗಳಲ್ಲಿ
9 ವಿಕೆಟ್ ನಷ್ಟಕ್ಕೆ 239

ಗೌತಮ್ ಗಂಭೀರ್ ಸಿ ಪ್ರಯೋರ್ ಬಿ ಸ್ಟೀವನ್ ಫಿನ್ 40
ವೀರೇಂದ್ರ ಸೆಹ್ವಾಗ್ ಬಿ ಗ್ರೇಮ್ ಸ್ವಾನ್  49
ಚೇತೇಶ್ವರ ಪೂಜಾರ ರನ್‌ಔಟ್ (ಬೆಲ್)  08
ಸಚಿನ್ ತೆಂಡೂಲ್ಕರ್ ಸಿ ಟ್ರಾಟ್ ಬಿ ಗ್ರೇಮ್ ಸ್ವಾನ್  05
ವಿರಾಟ್ ಕೊಹ್ಲಿ ಸಿ ಪ್ರಯೋರ್ ಬಿ ಸ್ಟೀವನ್ ಫಿನ್  20
ಯುವರಾಜ್ ಸಿಂಗ್ ಬಿ ಜೇಮ್ಸ ಆ್ಯಂಡರ್ಸನ್  11
ಮಹೇಂದ್ರ ಸಿಂಗ್ ದೋನಿ ಸಿ ಕುಕ್ ಬಿ ಆ್ಯಂಡರ್ಸನ್  00
ಆರ್.ಅಶ್ವಿನ್ ಬ್ಯಾಟಿಂಗ್  83
ಜಹೀರ್ ಖಾನ್ ಎಲ್‌ಬಿಡಬ್ಲ್ಯು ಬಿ ಸ್ಟೀವನ್ ಫಿನ್  00
ಇಶಾಂತ್ ಶರ್ಮ ಬಿ ಮಾಂಟಿ ಪನೇಸರ್  10
ಪ್ರಗ್ಯಾನ್ ಓಜಾ ಬ್ಯಾಟಿಂಗ್  03
ಇತರೆ (ಬೈ-8, ಲೆಗ್‌ಬೈ-2)  10
ವಿಕೆಟ್ ಪತನ:  1-86 (ಸೆಹ್ವಾಗ್; 21.1); 2-98 (ಪೂಜಾರ; 28.6); 3-103 (ಗಂಭೀರ್; 30.4); 4-107 (ಸಚಿನ್; 31.5); 5-122 (ಯುವರಾಜ್; 36.4); 6-122 (ದೋನಿ; 38.1); 7-155 (ಕೊಹ್ಲಿ; 52.5); 8-159 (ಜಹೀರ್; 54.3); 9-197 (ಇಶಾಂತ್; 72.3).
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 15-4-38-2, ಸ್ಟೀವನ್ ಫಿನ್ 17-6-37-3, ಮಾಂಟಿ ಪನೇಸರ್ 22-1-75-1, ಗ್ರೇಮ್ ಸ್ವಾನ್ 28-9-70-2, ಸಮಿತ್ ಪಟೇಲ್ 1-0-9-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.