ಭಾರತ ಹಾಗೂ ಇಂಗ್ಲೆಂಡ್ ಈ ವಿಶ್ವಕಪ್‌ನಲ್ಲಿ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂಗ್ಲೆಂಡ್ ತಂಡದ ಬಗ್ಗೆ ಹೇಳಬೇಕೆಂದರೆ ಮೊದಲ ಮೂರೂ ಪಂದ್ಯಗಳಲ್ಲಿ ಬೌಲಿಂಗ್ ಕಳಪೆಯಾಗಿತ್ತು. ಟಿಮ್ ಬ್ರೆಸ್ನನ್ ಹಾಗೂ ಗ್ರೇಮ್ ಸ್ವಾನ್ ಅವರ ಬೌಲಿಂಗ್ ಹೊರತುಪಡಿಸಿದರೆ ಇನ್ನುಳಿದ 30 ಓವರ್ ಹೇಳಿಕೊಳ್ಳುವಂತಿರಲಿಲ್ಲ. ಕೇವಲ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ಒಂದಿಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು.
ಹಾಗೇ. ಭಾರತ ಜಹೀರ್ ಖಾನ್ ಹಾಗೂ ಹರಭಜನ್ ಸಿಂಗ್ ಮೇಲೆ ಅವಲಂಬಿತವಾಗಿದೆ. ನಾಲ್ಕು ಮಂದಿ ಬೌಲರ್‌ಗಳೊಂದಿಗೆ ದಾಳಿ ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಆದರೆ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಕ್ರಮಾಂಕ ಹೊಂದಿರುವುದರಿಂದ ಈ ಸಮಸ್ಯೆ ದೊಡ್ಡದಾಗಿ ಕಾಣುತ್ತಿಲ್ಲ. ಮಧ್ಯಮ ಕ್ರಮಾಂಕ ಕೂಡ ಅತ್ಯುತ್ತಮವಾಗಿದೆ.
ಬೌಲರ್‌ಗಳಿಗೆ ಪಿಚ್ ನೆರವು ನೀಡುವ ಸಂದರ್ಭದಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ತೋರಿವೆ. ಅದೊಂದು ಮಹತ್ವದ ಅಂಶ. ಇಂಗ್ಲೆಂಡ್ ಟೆಸ್ಟ್‌ನಲ್ಲಿ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಲೈನ್ ಹಾಗೂ ಲೆಂಗ್ತ್‌ನಲ್ಲಿ ಚೆಂಡನ್ನು ಹಾಕುತ್ತಾರೆ. ಏಕದಿನ ಕ್ರಿಕೆಟ್‌ನಲ್ಲೂ ಹಾಗೇ ಮಾಡುತ್ತಿದ್ದಾರೆ. ಈ ಕಾರಣ ದುಬಾರಿಯಾಗುತ್ತಿದ್ದಾರೆ. ಅದಕ್ಕೆ ಐರ್ಲೆಂಡ್ ವಿರುದ್ಧದ ಪಂದ್ಯವೇ ಉದಾಹರಣೆ. ಕೆವಿನ್ ಒಬ್ರಿಯನ್‌ಗೆ ಒಂದೇ ರೀತಿಯಲ್ಲಿ ಬೌಲ್ ಮಾಡಿದರು.
ಫ್ಲಾಟ್ ಪಿಚ್‌ನಲ್ಲಿ ಅವರು ಆಡಿದ ಮೂರು ಪಂದ್ಯಗಳಲ್ಲಿ ಸಾವಿರಕ್ಕೂ ಹೆಚ್ಚು ರನ್ ನೀಡಿದ್ದಾರೆ. ಅದರಲ್ಲಿ ಐರ್ಲೆಂಡ್ ಎದುರು ಸೋಲು ಕಂಡಿದ್ದಾರೆ. ಭಾರತ ಎದುರು ಟೈ ಮಾಡಿಕೊಂಡಿದ್ದಾರೆ. ಹಾಲೆಂಡ್ ಎದುರು ಸೋಲುವ ಹಂತದಿಂದ ಪಾರಾಗಿದ್ದರು.
ಇಂಗ್ಲೆಂಡ್ ತಂಡದಲ್ಲಿ ಸಮರ್ಥ ವೇಗಿಗಳಿದ್ದಾರೆ. ಅಕಸ್ಮಾತ್ ಉತ್ತಮ ಪಿಚ್ ಸಿಕ್ಕಿದರೆ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾಯಕತ್ವದಲ್ಲಿ ಕೂಡ ಭಾರತ-ಇಂಗ್ಲೆಂಡ್ ಒಂದೇ ಲಕ್ಷಣ ಹೊಂದಿವೆ. ಸ್ಟ್ರಾಸ್ ಹಾಗೂ ದೋನಿ ಶಾಂತ ಮನಸ್ಸಿನ ನಾಯಕರು. ಉತ್ತಮ ಮನುಷ್ಯರು. ದೋನಿ ಸಾಮರ್ಥ್ಯದ ಬಗ್ಗೆ ಖಂಡಿತ ನಾನು ಅಚ್ಚರಿಗೊಂಡಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.