ADVERTISEMENT

ದೋನಿ ಸ್ಥಿರವಾದ ನಾಯಕ: ಶಾಹಿದ್ ಅಫ್ರಿದಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2011, 19:30 IST
Last Updated 7 ಏಪ್ರಿಲ್ 2011, 19:30 IST

ಲಾಹೋರ್ (ಪಿಟಿಐ): ‘ಭಾರತ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಅದ್ಭುತವಾಗಿ ಆಡಿತು. ತಕ್ಕ ಪ್ರತಿಫಲವನ್ನೇ ಪಡೆಯಿತು. ಮಹೇಂದ್ರ ಸಿಂಗ್ ದೋನಿ ಅವರ ರೂಪದಲ್ಲಿ ‘ಸ್ಥಿರ’ವಾದ ನಾಯಕ ಸಿಕ್ಕಿದ್ದು ಆ ತಂಡದ ಅದೃಷ್ಟವಾಗಿದೆ’ ಎಂದು ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ಅವರು, ಭಾರತದ ವಿರುದ್ಧ ತಾವು ಮಾಡಿದ್ದ ಟೀಕೆಗಳನ್ನು ಮತ್ತೆ ಅಲ್ಲಗಳೆಯಲು ಯತ್ನಿಸಿದ್ದಾರೆ.

‘ಭಾರತದ ಗೆಲುವಿನಲ್ಲಿ ದೋನಿ ದೊಡ್ಡ ಪಾತ್ರವನ್ನೇ ನಿರ್ವಹಿಸಿದ್ದಾರೆ. ಈ ವಿಶ್ವಕಪ್ ಜಯ ಭಾರತ ಕ್ರಿಕೆಟ್‌ಗೆ ಮತ್ತು ಭಾರತೀಯರಿಗೆ ಸಿಕ್ಕ ದೊಡ್ಡ ಕಾಣಿಕೆ ಎಂಬ ನಂಬಿಕೆ ನನ್ನದಾಗಿದೆ. ಏಷ್ಯಾ ಖಂಡಕ್ಕೆ ವಿಶ್ವಕಪ್ ಮರಳಿ ಬಂದಿರುವುದು ಈ ಭಾಗದಲ್ಲಿ ಕ್ರೀಡೆ ಇನ್ನಷ್ಟು ಪ್ರಗತಿ ಹೊಂದಲು ಸಹಾಯವಾಗಲಿದೆ. ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ ಸುಧಾರಣೆಗೂ ಈ ವಿಕ್ರಮ ನೆರವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಅಫ್ರಿದಿ ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಸಚಿನ್ ಅವರ ರನ್‌ಗಳ ಹಸಿವು ಭಾರತೀಯ ಕ್ರಿಕೆಟ್‌ಗೆ ಇನ್ನಷ್ಟು ದೊಡ್ಡ ಕಾಣಿಕೆಗಳನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ. ‘ತಮ್ಮ ಭವಿಷ್ಯದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಸಚಿನ್ ಅವರೇ ಅರ್ಹ ವ್ಯಕ್ತಿ. ಆದರೆ, ಅವರ ಆಟದ ಉತ್ಸಾಹಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಮಾತ್ರ ಹೇಳಬಲ್ಲೆ’ ಎಂದು ಅವರು ತಿಳಿಸಿದ್ದಾರೆ.

‘ತೆಂಡೂಲ್ಕರ್ ಅವರ ಹಸ್ತಾಕ್ಷರ ಇರುವ ಜರ್ಸಿಗೆ ಫ್ರೇಮ್ ಹಾಕಿಸಿ ನನ್ನ ಮನೆಯಲ್ಲಿ ಹಾಕಿದ್ದೇನೆ. ಅವರ ಮೇಲಿನ ನಾನು ಹೊಂದಿರುವ ಗೌರವದ ದ್ಯೋತಕವದು’ ಎಂದು ಅಫ್ರಿದಿ ಹೇಳಿದ್ದಾರೆ. ‘ಭಾರತೀಯರ ವಿರುದ್ಧ ಪಾಕಿಸ್ತಾನ ಟಿವಿ ವಾಹಿನಿಯಲ್ಲಿ ತಾವು ಯಾವುದೇ ನಕರಾತ್ಮಕ ಹೇಳಿಕೆ ನೀಡಿಲ್ಲ’ ಎಂದು ಅವರು ಪುನರುಚ್ಚರಿಸಿದ್ದಾರೆ.‘ನಾನು ಎಂದಿಗೂ ಭಾರತೀಯರ ವಿರುದ್ಧ ಇಲ್ಲ. ಭಾರತದಲ್ಲಿ ಆಟ ಆಡುವುದನ್ನು ಆನಂದಿಸಿದ್ದೇನೆ. ಅಲ್ಲಿಯ ಜನ ಯಾವಾಗಲೂ ಚೆನ್ನಾಗಿ ಆಡುವವರನ್ನು ಬೆಂಬಲಿಸಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.