ADVERTISEMENT

ದೌರ್ಬಲ್ಯ ಬಹಿರಂಗಗೊಂಡಿದೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ದೌರ್ಬಲ್ಯ ಬಹಿರಂಗಗೊಂಡಿದೆ
ದೌರ್ಬಲ್ಯ ಬಹಿರಂಗಗೊಂಡಿದೆ   

ಕರಾಚಿ (ಪಿಟಿಐ): ಬೌಲಿಂಗ್ ದೌರ್ಬಲ್ಯ ಭಾರತ ಕ್ರಿಕೆಟ್ ತಂಡದ ವಿಶ್ವಕಪ್ ಕನಸಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ತಿಳಿಸಿದ್ದಾರೆ. ಭಾರತದ ಬಳಿ ಈಗ ಬೌಲಿಂಗ್‌ನಲ್ಲಿ ಸೂಕ್ತ ಆಯ್ಕೆಗಳಿಲ್ಲ. ಜೊತೆಗೆ ತುಂಬಾ ಸಮಸ್ಯೆ ಇದೆ. ಈ ದೌರ್ಬಲ್ಯ ಮೊದಲ ಎರಡು ಪಂದ್ಯಗಳಲ್ಲಿ ಬಹಿರಂಗಗೊಂಡಿದೆ ಎಂದಿದ್ದಾರೆ.‘ಬಾಂಗ್ಲಾದೇಶ ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲಿಯೇ ಭಾರತದ ಬೌಲಿಂಗ್ ದೌರ್ಬಲ್ಯ ಎಲ್ಲರಿಗೂ ಗೊತ್ತಾಗಿದೆ. ಬೌಲಿಂಗ್ ಹೊಂದಾಣಿಕೆಯಲ್ಲಿ ಈ ತಂಡ ಎಡವುತ್ತಿದೆ.ಇದು ಅವರ ಕನಸಿಗೆ ಅಡ್ಡಿಯಾಗುವ ಸಾಧ್ಯತೆ ಇದೆ’ ಎಂದು 1992ರಲ್ಲಿ ಪಾಕ್‌ಗೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಇಮ್ರಾನ್ ವಿವರಿಸಿದ್ದಾರೆ.

‘ಐದು ಪರಿಣತ ಬೌಲರ್‌ಗಳು ಇರಲೇಬೇಕು ಎಂಬುದಕ್ಕೆ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪಂದ್ಯವೇ ಸಾಕ್ಷಿ. ಆದರೆ ಭಾರತದ ಬಳಿ ಈಗ ಸಮರ್ಥ ಬೌಲರ್‌ಗಳೇ ಇಲ್ಲ. ಅವರ ದಾಳಿ ಸಮತೋಲನದಿಂದ ಕೂಡಿಲ್ಲ’ ಎಂದಿದ್ದಾರೆ. ‘ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಪಿಚ್‌ಗಳಲ್ಲಿ ಬೌಲರ್‌ಗಳು ತುಂಬಾ ಬೆವರು ಹರಿಸಬೇಕಾಗುತ್ತದೆ. ಅದರಲ್ಲೂ ಬೌಲಿಂಗ್‌ನಲ್ಲಿ ವೇಗ ಇಲ್ಲವೆಂದರೆ ತುಂಬಾ ಕಷ್ಟ. ಆದರೆ ಭಾರತ ತಂಡದ ಪ್ರಮುಖ ಶಕ್ತಿ ಎಂದರೆ ನಾಯಕ ಮಹೇಂದ್ರ ಸಿಂಗ್ ದೋನಿ. ಅವರೊಬ್ಬ ಧೈರ್ಯವಂತ ಕ್ರಿಕೆಟಿಗ’ ಎಂದು ಅವರು ಹೇಳಿದ್ದಾರೆ.
ಹ್ಯಾಟ್ರಿಕ್ ವಿಕೆಟ್ ಪಡೆದ ಶ್ರೀಲಂಕಾ ತಂಡದ ವೇಗಿ ಲಸಿತ್ ಮಹಾಲಿಂಗ ಅವರನ್ನು ಇಮ್ರಾನ್ ಶ್ಲಾಘಿಸಿದ್ದಾರೆ. ಹಾಗೇ, ಇಂಗ್ಲೆಂಡ್ ವಿರುದ್ಧ ಐರ್ಲೆಂಡ್ ಗೆದ್ದಿರುವುದು ‘ಬಿ’ ಗುಂಪಿನಲ್ಲಿ ಆತಂಕ ಸೃಷ್ಟಿಸಿದೆ ಎಂದು ವಿಶ್ಲೇಷಿಸಿದ್ದಾರೆ. ‘ಕೆವಿನ್ ಒಬ್ರಿಯನ್ ಅದ್ಭುತ ಪ್ರದರ್ಶನ ತೋರಿದರು. ಅದೊಂದು ಅಮೋಘ ಇನಿಂಗ್ಸ್. ಆ ತಂಡದವರು ಮತ್ತಷ್ಟು ಆಘಾತ ನೀಡಲಿದ್ದಾರೆ ಎಂದಿದ್ದಾರೆ. ಆದರೆ ಮೊದಲ ಹತ್ತು ದಿನಗಳ ಫಲಿತಾಂಶಗಳನ್ನು ವಿಶ್ಲೇಷಿಸಿದರೆ ಯಾರು ಚಾಂಪಿಯನ್ ಆಗುತ್ತಾರೆ ಎಂದು ಹೇಳುವುದು ಕಷ್ಟ ಎಂದು ಪಾಕ್ ತಂಡದ ಮತ್ತೊಬ್ಬ ಮಾಜಿ ನಾಯಕ ವಾಸೀಮ್ ಅಕ್ರಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.