ADVERTISEMENT

ಧವನ್‌ ಅರ್ಧಶತಕ: ಭಾರತಕ್ಕೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಶಿಖರ್ ಧವನ್‌ ಆಟದ ವೈಖರಿ. –ಪಿಟಿಐ ಚಿತ್ರ.
ಶಿಖರ್ ಧವನ್‌ ಆಟದ ವೈಖರಿ. –ಪಿಟಿಐ ಚಿತ್ರ.   

ಕೊಲಂಬೊ: ಮೊದಲ ಪಂದ್ಯದಲ್ಲಿ ಆತಿಥೇಯರ ಎದುರು ಸೋತ ಭಾರತ ತಂಡ ನಿದಾಸ್ ಕಪ್ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಸುಲಭ ಜಯ ಗಳಿಸಿದೆ.

ಬಾಂಗ್ಲಾದೇಶವನ್ನು 139 ರನ್‌ಗಳಿಗೆ ಆಲೌಟ್‌ ಮಾಡಿದ ಭಾರತ ನಂತರ ಎಂಟು ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು. ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ವೈಫಲ್ಯ ಕಂಡು 17 ರನ್‌ಗಳಿಗೆ ಔಟಾದರು. ಆದರೆ ಶಿಖರ್ ಧವನ್‌ (55; 43 ಎಸೆತ, 2 ಸಿ, 5 ಬೌಂ) ಭರ್ಜರಿ ಬ್ಯಾಟಿಂಗ್ ಮಾಡಿದರು. ಸುರೇಶ್ ರೈನಾ ಮತ್ತು ಮನೀಶ್ ಪಾಂಡೆ ಕೂಡ ಉತ್ತಮ ಕಾಣಿಕೆ ನೀಡಿದರು.

ಮಿಂಚಿದ ಯುವ ಬೌಲರ್‌ಗಳು
ಟಾಸ್ ಗೆದ್ದ ಭಾರತ ಎದುರಾಳಿ ತಂಡದವರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ದಿಟ್ಟತನದ ಬ್ಯಾಟಿಂಗ್ ಮಾಡುವಲ್ಲಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾದರು. ನಂತರ ಮೇಲುಗೈ ಸಾಧಿಸಿದ ಭಾರತದ ಯುವ ಬೌಲರ್‌ಗಳು 11ನೇ ಓವರ್‌ ಮುಗಿಯುವಷ್ಟರಲ್ಲಿ ನಾಲ್ಕು ವಿಕೆಟ್‌ ಕಬಳಿಸಿದರು. ಆಲ್‌ರೌಂಡರ್ ವಿಜಯಶಂಕರ್‌ ಎರಡು ವಿಕೆಟ್‌ ಪಡೆದರೆ ಎಡಗೈ ವೇಗಿ ಜಯದೇವ ಉನದ್ಕತ್‌ ಮೂರು ವಿಕೆಟ್ ಉರುಳಿಸಿದರು.

ADVERTISEMENT

ತಮೀಮ್‌ ಇಕ್ಬಾಲ್ ಮತ್ತು ಸೌಮ್ಯ ಸರ್ಕಾರ್‌ ಮೊದಲ ವಿಕೆಟ್‌ಗೆ ಕೇವಲ 20 ರನ್ ಸೇರಿಸಿದರು. ಲಿಟನ್ ದಾಸ್‌ ಜೊತೆ ಎರಡನೇ ವಿಕೆಟ್‌ಗೆ 15 ರನ್ ಗಳಿಸಿದ ನಂತರ ತಮೀಮ್‌ ಕ್ರೀಸ್ ತೊರೆದರು. ಮೂರು ಬೌಂಡರಿಗಳೊಂದಿಗೆ ಮಿಂಚಿದ ಲಿಟ್ಟನ್‌ ದಾಸ್‌ಗೆ ಮುಷ್ಫಿಕುರ್ ರಹೀಮ್ ಉತ್ತಮ ಬೆಂಬಲ ನೀಡಿದ್ದರಿಂದ ತಂಡ 50ರ ಗಡಿ ದಾಟಿತು. ಇವರಿಬ್ಬರು ಔಟಾದ ನಂತರ ಶಬ್ಬೀರ್ ರಹಿಮಾನ್‌ (30; 26 ಎ, 1 ಸಿ, 3 ಬೌಂ) ಏಕಾಂಗಿ ಹೋರಾಟ ನಡೆಸಿದರು. ಉಳಿದ ಯಾರಿಗೂ ಮಿಂಚಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ:
20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 139 (ತಮೀಮ್ ಇಕ್ಬಾಲ್ 15, ಲಿಟ್ಟನ್ ದಾಸ್ 34, ಶಬ್ಬೀರ್ ರೆಹಮಾನ್ 30, ಜಯದೇವ್ ಉನದ್ಕತ್ 38ಕ್ಕೆ3, ಶಾರ್ದೂಲ್ ಠಾಕೂರ್ 25ಕ್ಕೆ1, ಯಜುವೇಂದ್ರ ಚಾಹಲ್ 19ಕ್ಕೆ1, ವಿಜಯಶಂಕರ್ 32ಕ್ಕೆ2)

ಭಾರತ: 18.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 140 (ರೋಹಿತ್ ಶರ್ಮಾ 17, ಶಿಖರ್ ಧವನ್ ಬ್ಯಾಟಿಂಗ್ 55, ಸುರೇಶ್ ರೈನಾ ಬ್ಯಾಟಿಂಗ್ 28, ಮನೀಷ್ ಪಾಂಡೆ 27; ಮುಸ್ತಫಿಜುರ್ ರೆಹಮಾನ್ 31ಕ್ಕೆ1, ಟಸ್ಕಿನ್‌ ಅಹಮ್ಮದ್‌ 28ಕ್ಕೆ1, ರುಬೇಲ್ ಹುಸೇನ್ 24ಕ್ಕೆ2).

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ವಿಜಯಶಂಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.