ADVERTISEMENT

ನನ್ನಲ್ಲಿ ಹೆಚ್ಚು ಕ್ರಿಕೆಟ್ ಉಳಿದಿಲ್ಲ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST
ನನ್ನಲ್ಲಿ ಹೆಚ್ಚು ಕ್ರಿಕೆಟ್ ಉಳಿದಿಲ್ಲ
ನನ್ನಲ್ಲಿ ಹೆಚ್ಚು ಕ್ರಿಕೆಟ್ ಉಳಿದಿಲ್ಲ   

ನವದೆಹಲಿ (ಪಿಟಿಐ): ಕ್ರಿಕೆಟ್ ಭವಿಷ್ಯದ ಬಗ್ಗೆ ಮುಂದಿನ ತಿಂಗಳು ಪರಿಶೀಲನೆ ನಡೆಸುವುದಾಗಿ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ನುಡಿದಿದ್ದಾರೆ. ಕ್ರಿಕೆಟ್ ಬಗ್ಗೆ ಮೊದಲಿನಷ್ಟು ಆಸಕ್ತಿ ಇಲ್ಲ ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ.

`ವಿದಾಯ ವಿಷಯವನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ. ಆ ಸಂದರ್ಭ ಹೇಗಿರಲಿದೆ ಎಂಬುದನ್ನು ನಾನು ಊಹಿಸಿಕೊಳ್ಳಲಾರೆ. ವಿದಾಯದ ಬಳಿಕ ನನ್ನ ಜೀವನ ಹೇಗಿರಲಿದೆ ಎಂಬುದರ ಬಗ್ಗೆಯೂ ನನಗೆ ಗೊತ್ತಿಲ್ಲ. ಆದರೆ ನನ್ನ ಹೃದಯ ಏನು ಹೇಳಲಿದೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ.

ಮತ್ತೆ ಆಡಲು ನವೆಂಬರ್‌ನಲ್ಲಿ ಕಣಕ್ಕಿಳಿಯುತ್ತಿದ್ದೇನೆ. ಆಗ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ~ ಎಂದು ತೆಂಡೂಲ್ಕರ್ `ಟೈಮ್ಸ ನೌ~ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

`ನನಗೀಗ 39 ವರ್ಷ ವಯಸ್ಸಾಯಿತು. ನನ್ನಲ್ಲಿ ಹೆಚ್ಚು ಕ್ರಿಕೆಟ್ ಉಳಿದಿದೆ ಎಂದು ನನಗನಿಸುವುದಿಲ್ಲ. ಆದರೆ ಆಟ ಮುಂದುವರಿಸುವ ವಿಷಯ ನನ್ನ ಮನಸ್ಥಿತಿ ಹಾಗೂ ದೈಹಿಕ ಕ್ಷಮತೆ ಮೇಲೆ ಅವಲಂಬಿಸಿದೆ. ಅಗತ್ಯವಾದ ಆಟವನ್ನು ಆಡಲು ನನ್ನಿಂದ ಅಸಾಧ್ಯ ಎನಿಸಿದಾಗ ಒಂದು ನಿರ್ಧಾರಕ್ಕೆ ಬರಲಿದ್ದೇನೆ~ ಎಂದಿದ್ದಾರೆ.

ತಮ್ಮಲ್ಲಿ ಹೆಚ್ಚು ಕ್ರಿಕೆಟ್ ಉಳಿದಿಲ್ಲ ಎಂಬ ವಿಷಯವನ್ನು ತೆಂಡೂಲ್ಕರ್ ಇದೇ ಮೊದಲ ಬಾರಿ ಹೇಳಿದ್ದಾರೆ. ನವೆಂಬರ್-ಡಿಸೆಂಬರ್‌ನಲ್ಲಿ ಭಾರತ ತಂಡದವರು ಪ್ರವಾಸಿ ಇಂಗ್ಲೆಂಡ್ ಎದುರು ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆಡಲಿದ್ದಾರೆ. ಆ ಬಳಿಕ ಅವರು ತಮ್ಮ ನಿರ್ಧಾರ ಪರಿಶೀಲಿಸುವ ಸಾಧ್ಯತೆ ಇದೆ.

`ನನ್ನ ದೇಹ ಹಾಗೂ ಮನಸ್ಥಿತಿ ಯಾವ ರೀತಿ ಇದೆ ಎಂಬುದು ನನಗೆ ಮಾತ್ರ ಗೊತ್ತಿದೆ. ಸಮಯ ಬಂದಾಗ ವಿದಾಯ ಸಂಬಂಧ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದರೆ ಅದೊಂದು ಕಠಿಣ ನಿರ್ಧಾರವಾಗಿರಲಿದೆ. ನಿರ್ಧಾರದ ವಿಷಯ ಖಂಡಿತ ನನ್ನ ಮನಸ್ಸಿನಲ್ಲಿದೆ. ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ನನ್ನ ಹೃದಯ ಹೇಳುತ್ತಿದೆ. ಹಾಗಾಗಿ ಪ್ರತಿ ಸರಣಿ ಮುಗಿದಾಗ ನಿರ್ಧಾರ ಪರಿಶೀಲಿಸುತ್ತಾ ಹೋಗುತ್ತೇನೆ~ ಎಂದು ತೆಂಡೂಲ್ಕರ್ ಹೇಳಿದ್ದಾರೆ.

2015ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತೀರಾ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಅವರು, `ಈ ಹಂತದಲ್ಲಿ ಅದು ಅಸಾಧ್ಯ. ಈ ಮೊದಲು ಹೇಳಿದಂತೆ ಪ್ರತಿ ಸರಣಿ ಮುಗಿದಾಗ ನನ್ನ ನಿರ್ಧಾರ ಪರಿಶೀಲಿಸುತ್ತಾ ಹೋಗುತ್ತೇನೆ. ತಂಡದ ಅಗತ್ಯ ಹಾಗೂ ನನ್ನಲ್ಲಿ ಇನ್ನೂ ಸಾಮರ್ಥ್ಯ ಉಳಿದಿದೆಯೇ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ~ ಎಂದಿದ್ದಾರೆ.

`22 ವರ್ಷಗಳಿಂದ ನಾನು ಕಠಿಣ ಪ್ರಯತ್ನ ಹಾಕಿ ಆಡುತ್ತಾ ಬಂದಿದ್ದೇನೆ. ಭಾರತ ತಂಡದಲ್ಲಿ ಆಡಬೇಕು ಎಂಬುದು ನನ್ನ ಕನಸಾಗಿತ್ತು. ಭಾರತಕ್ಕಾಗಿ ಆಡುವುದು ಒಬ್ಬ ವ್ಯಕ್ತಿಗೆ ಸಿಗುವ ದೊಡ್ಡ ಗೌರವ. ಒಮ್ಮೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದಾಗ ಕಠಿಣ ಪ್ರಯತ್ನ ಹಾಕಿ ಆಡಲಿಲ್ಲ ಎನಿಸಬಾರದು~ ಎಂದೂ ತಿಳಿಸಿದ್ದಾರೆ.

ಆದರೆ ಯಾವಾಗ ವಿದಾಯ ಹೇಳಬಹುದು ಎಂಬುದನ್ನು ತಿಳಿಸಲು ಸಚಿನ್ ನಿರಾಕರಿಸಿದರು. `ಯಾರೇ ಇರಲಿ, ವಿದಾಯಕ್ಕೆಂದು ನಿರ್ದಿಷ್ಟ ಸಮಯ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಮುಂದೆ ಏನಾಗಲಿದೆ ಎಂಬುವುದನ್ನು ನಿರ್ಧರಿಸುವುದು ಕಷ್ಟ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.