ADVERTISEMENT

ನವಾಬನಿಗೆ ಕಲಾಕಾರನ ನಮನ...

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಅವತ್ತು ಅವರ ಒಂದು ಕಣ್ಣಿನ ದೃಷ್ಟಿಯನ್ನೇ ವಿಧಿ ಕಿತ್ತುಕೊಂಡಿತ್ತು. ಆದರೆ ಅವರ ಕ್ರಿಕೆಟ್ ಪ್ರೀತಿಯನ್ನು ಕದಲಿಸಲು ಆ ವಿಧಿಗೆ ಸಾಧ್ಯವಾಗಿರಲಿಲ್ಲ!

ಭಾರತ ಕ್ರಿಕೆಟ್‌ನ `ಟೈಗರ್~ ಎನಿಸಿಕೊಂಡ ಮನ್ಸೂರ್ ಅಲಿ ಖಾನ್ ಪಟೌಡಿ ಜೂನಿಯರ್ ವ್ಯಕ್ತಿತ್ವವೇ ವಿಶೇಷವಾದದ್ದು. ದೃಷ್ಟಿ ಕಳೆದುಕೊಂಡು ಭಾರತ ಕ್ರಿಕೆಟ್‌ಗೆ ಹೊಸ ದೃಷ್ಟಿಕೋನ ನೀಡಿದಾತ. ಅಷ್ಟೇ ಗ್ಲಾಮರ್ ಆದ ವ್ಯಕ್ತಿತ್ವ ಅವರದ್ದು. ರಾಜಮನೆತನದ ಈ ವ್ಯಕ್ತಿ ಅದೆಷ್ಟೊ ಕ್ರಿಕೆಟಿಗರ ಗುರು ಕೂಡ.

ಪಟೌಡಿ ಅವರ ಜೀವನ ಕಲ್ಲು ಮುಳ್ಳಿನ ಹಾದಿಯಿಂದ ಕೂಡಿದೆ. 11ನೇ ವಯಸ್ಸಿನಲ್ಲಿ ತಂದೆ ಇಹಲೋಕ ತ್ಯಜಿಸಿದ್ದರು. 20ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ಬಲಗಣ್ಣಿನ ದೃಷ್ಟಿ ಕಳೆದುಕೊಂಡರು. ಆದರೆ 21ನೇ ವಯಸ್ಸಿನಲ್ಲಿ ಭಾರತ ತಂಡದ ನಾಯಕರಾದರು.

ಅದು ಅವರು ಜೀವನಕ್ಕೇ ಸೆಡ್ಡು ಹೊಡೆದ ರೀತಿ. ಪ್ರತಿ ಅಡೆತಡೆಯನ್ನು ಸವಾಲಾಗಿ ಸ್ವೀಕರಿಸಿ ಬೆಳೆದರು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟವರೇ ಅಲ್ಲ. ಭಾರತದ ಕ್ರಿಕೆಟ್‌ನಲ್ಲಿದ್ದ ಪ್ರಾದೇಶಕ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಒಂದೇ ಕಣ್ಣಿನ ದೃಷ್ಟಿಯಿಂದ ಆರು ಶತಕ ಬಾರಿಸಿದರು. ಇಂಗ್ಲೆಂಡ್ ಎದುರು ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸಿಡಿಸಿದ ಅಜೇಯ ದ್ವಿಶತಕ ಕೂಡ ಅದರಲ್ಲಿ ಸೇರಿದೆ.

`ಇದು ನನ್ನ ಜೀವನದ ಅತ್ಯಂತ ದುಃಖದ ದಿನ. ವಿಷಯ ತಿಳಿಯುತ್ತಿದ್ದಂತೆ ನನ್ನ ಕಣ್ಣಾಲಿಗಳು ನೀರಾಡಿದವು.
 ಅವರು ನನ್ನ ಕ್ರಿಕೆಟ್ ಗುರು. ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಕಾರಣ ಪಟೌಡಿ~
- `ಪ್ರಜಾವಾಣಿ~ಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದು ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಜಿ.ಆರ್.ವಿಶ್ವನಾಥ್. ವಿಶೇಷವೆಂದರೆ ಜಿ.ಆರ್.ವಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಭಾರತ ತಂಡದ ನಾಯಕರಾಗಿದ್ದವರು ಪಟೌಡಿ.

`ಅದು ನನ್ನ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು. 1969ರಲ್ಲಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ಎದುರು ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದೆ. ತುಂಬಾ ಬೇಸರವಾಯಿತು. ಆಗ ಬೆನ್ನು ಸವರಿದ ಪಟೌಡಿ ಈ ಬಗ್ಗೆ ಚಿಂತಿಸಬೇಡ, ಮುಂದಿನ ಇನಿಂಗ್ಸ್‌ನಲ್ಲಿ ಶತಕ ಗಳಿಸುತ್ತೀಯಾ ಎಂದರು. ನಾನು ಎರಡನೇ ಇನಿಂಗ್ಸ್‌ನಲ್ಲಿ 137 ರನ್ ಗಳಿಸಿದೆ~ ಎಂದ ಜಿಆರ್‌ವಿ ಆ ಕ್ಷಣವನ್ನು ನೆನಪಿಸಿಕೊಂಡು ಭಾವುಕರಾದರು.

`ನನಗೆ ಮಾತ್ರವಲ್ಲ; ನನ್ನಂಥ ಹಲವು ಮಂದಿಗೆ ಪಟೌಡಿ ಸಹಾಯ ಮಾಡಿದ್ದಾರೆ. ಈಗ ಅದೆಲ್ಲಾ ಇತಿಹಾಸ. ಭಾರತದ ಕ್ರಿಕೆಟ್‌ನಲ್ಲಿ ಪಟೌಡಿ ಹೆಸರು ಶಾಶ್ವತ~ ಎಂದು ವಿಶಿ ಹೇಳಿದ್ದು ಪಟೌಡಿ ಯಾವ ರೀತಿಯ ವ್ಯಕ್ತಿ ಎನ್ನುವುದು ಗೊತ್ತಾಗುತ್ತದೆ.

ಮನ್ಸೂರ್ ಹರಿಯಾಣದ ಪಟೌಡಿಯ ಒಂಬತ್ತನೇ ಹಾಗೂ ಕೊನೆಯ ನವಾಬ ಕೂಡ. ಅವರ ಪತ್ನಿ ಶರ್ಮಿಳಾ ಟ್ಯಾಗೋರ್ ಬಾಲಿವುಡ್‌ನ ಖ್ಯಾತ ಅಭಿನೇತ್ರಿ. ಪುತ್ರ ಸೈಫ್ ಅಲಿ ಖಾನ್, ಪುತ್ರಿ ಸೋಹಾ ಅಲಿ ಖಾನ್ ಕೂಡ ಖ್ಯಾತ ಬಾಲಿವುಡ್ ನಟರು. ಮತ್ತೊಬ್ಬ ಪುತ್ರಿ ಸಬಾ ಅಲಿ ಖಾನ್ ಚಿನ್ನಾಭರಣ ವಿನ್ಯಾಸಕಿ.

ಪಟೌಡಿಯ ಅವರದ್ದು ರಾಜಮನತೆ. ಎಂಟನೇ ನವಾಬ ಇಫ್ತಿಕರ್ ಅಲಿ ಖಾನ್ ಪಟೌಡಿ ಹಾಗೂ ಸಜಿದಾ ಸುಲ್ತಾನ ಅವರ ಪುತ್ರ ಈ ಮನ್ಸೂರ್. ಅವರು ಜನಿಸಿದ್ದು 1941, ಜನವರಿ ಐದರಂದು. ಉನ್ನತ ವ್ಯಾಸಂಗ ಮಾಡ್ದ್ದಿದು ಇಂಗ್ಲೆಂಡ್‌ನಲ್ಲಿ.

ಮನ್ಸೂರ್ ಅರ್ಜುನ (1964) ಹಾಗೂ ಪದ್ಮಶ್ರೀ (967) ಪ್ರಶಸ್ತಿ ಪುರಸ್ಕೃತರಾಗಿದ್ದರು. ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿದ್ದ ಶರ್ಮಿಳಾ ಅವರನ್ನು 1969ರಲ್ಲಿ ವಿವಾಹವಾಗುವವರೆಗೆ ಪಟೌಡಿ ಅವರಿಗೆ ಕ್ರಿಕೆಟ್ ಮೊದಲ ಪ್ರೀತಿ ಆಗಿತ್ತು. ಅವರ ಜೀವನ ವಿವಾದಗಳಿಂದೇನೂ ಮುಕ್ತವಾಗಿರಲಿಲ್ಲ. ಕೃಷ್ಣಮೃಗ ಬೇಟಿಯಾಡಿದ್ದಕ್ಕೆ 2005ರಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ವಿವಾದ ಇನ್ನೂ ತೆರೆ ಬಿದ್ದಿಲ್ಲ.

ಇಂಗ್ಲೆಂಡ್ ಎದುರು ದೆಹಲಿಯಲ್ಲಿ 1961ರಲ್ಲಿ ಅವರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 14 ವರ್ಷ ಕಾಲ ಭಾರತದ `ಟೈಗರ್~ ಆಗಿ ಮೆರೆದ ಮನ್ಸೂರ್ ಭಾರತ ಕಂಡ ಯಶಸ್ವಿ ನಾಯಕ ಎನಿಸಿದರು. ವೆಸ್ಟ್‌ಇಂಡೀಸ್ ಎದುರು ಮುಂಬೈಯಲ್ಲಿ 1975ರಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದ ಅವರು ಅತ್ಯುತ್ತಮ ಫೀಲ್ಡರ್ ಕೂಡ.

ಅವರು ಮ್ಯಾಚ್ ರೆಫರಿ ಹಾಗೂ ಕ್ರಿಕೆಟ್ ಆಡಳಿತದಾರರಾಗಿಯೂ ಸೇವೆ ಸಲ್ಲಿಸ್ದ್ದಿದರು. ರಾಜಕಾರಣಕ್ಕೂ ಧುಮುಕಿದ್ದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. 1970ರಲ್ಲಿ ಪಟೌಡಿಯಿಂದ ಹರಿಯಾಣ ವಿಧಾನಸಭಾ ಚುನಾವಣೆ ಹಾಗೂ 1991ರಲ್ಲಿ ಭೋಪಾಲ್‌ನಿಂದ ಲೋಕಸಭಾ ಚುನಾವಣೆಗೆ ನಿಂತು ಸೋಲು ಕಂಡಿದ್ದರು.
 
ಇಂಗ್ಲೆಂಡ್, ಭಾರತದ ಪರ ಆಡಿದ್ದ ತಂದೆ

ಮನ್ಸೂರ್ ಅವರ ತಂದೆ ಇಫ್ತಿಕರ್ ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಏಕೈಕ ಕ್ರಿಕೆಟಿಗ. 1936ರಲ್ಲಿ ಭಾರತ ತಂಡದ ನಾಯಕರಾಗಿದ್ದರು. 1932-33ರಲ್ಲಿ ಇಂಗ್ಲೆಂಡ್ ಪರ ಆಡಿದ್ದರು.

ಒಟ್ಟು ಆರು ಟೆಸ್ಟ್ ಪಂದ್ಯ ಆಡಿದ್ದರು. ಆಸ್ಟ್ರೇಲಿಯಾ ಎದುರಿನ ಆ್ಯಷಸ್ ಸರಣಿಯ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಇಂಗ್ಲೆಂಡ್ ಪರ ಶತಕ ಬಾರಿಸಿದ್ದರು. ಅದು ಬಾಡಿಲೈನ್ ಸರಣಿ ಎಂದೇ ಪ್ರಸಿದ್ಧಿ ಪಡೆದಿದೆ. ಅಷ್ಟು ಮಾತ್ರವಲ್ಲದೇ, ಅತ್ಯುತ್ತಮ ಹಾಕಿ ಆಟಗಾರ ಕೂಡ ಆಗಿದ್ದರು.

ಪಟೌಡಿ ಸಾಧನೆ
ಟೆಸ್ಟ್ ಪಂದ್ಯ: 46, ರನ್: 2793, ಗರಿಷ್ಠ: ಅಜೇಯ 203, ಸರಾಸರಿ: 34.91, ಶತಕ: 6, ಅರ್ಧ ಶತಕ: 16
ಹುಟ್ಟೂರು: ಮಧ್ಯಪ್ರದೇಶದ ಭೋಪಾಲ್
ಪದಾರ್ಪಣೆ: ಇಂಗ್ಲೆಂಡ್ ಎದುರು ದೆಹಲಿಯಲ್ಲಿ (1961)
ಕೊನೆಯ ಪಂದ್ಯ: ವೆಸ್ಟ್‌ಇಂಡೀಸ್ ಎದುರು ಮುಂಬೈಯಲ್ಲಿ (1975), ವರ್ಷದ ವಿಸ್ಡನ್ ಕ್ರಿಕೆಟಿಗ (1968)

ಸ್ಪಿನ್ನರ್‌ಗಳ ಕನಸಿನ ನಾಯಕ: ಪ್ರಸನ್ನ
`ಸ್ಪಿನ್ನರ್‌ಗಳಿಗೆ ಅವರು ನೀಡಿದಷ್ಟು ಪ್ರೋತ್ಸಾಹ ಮತ್ಯಾವ ನಾಯಕನಿಂದ ಸಿಕ್ಕಿಲ್ಲ. ಸ್ಪಿನ್ ಸಾಮರ್ಥ್ಯ ಏನೆಂಬುದನ್ನು ಅವರು ಚೆನ್ನಾಗಿ ಅರಿತಿದ್ದರು. ಅದಕ್ಕೆ ಅವರು ಸೂಕ್ತ ಬೆಂಬಲ ನೀಡುತ್ತಿದ್ದರು. ಹಾಗಾಗಿ ಸ್ಪಿನ್ನರ್‌ಗಳಿಗೆ ಅವರೊಬ್ಬ ಕನಸಿನ ನಾಯಕ. ಆದರೆ ಅವರೀಗ ನಮ್ಮಂದಿಗಿಲ್ಲ~ ಎಂದು ಮಾಜಿ ಆಫ್ ಸ್ಪಿನ್ನರ್ ಇ.ಎ.ಎಸ್.ಪ್ರಸನ್ನ ನುಡಿದರು.

`ಅವರೊಬ್ಬ ಆಕ್ರಮಣಕಾರಿ ನಾಯಕರಾಗಿದ್ದರು. ಅತ್ಯುತ್ತಮ ದೃಷ್ಟಿಕೋನ ಹೊಂದಿದ್ದರು. ಆದರೆ ಅವರ ನಿಧನ ಭಾರತ ಕ್ರಿಕೆಟ್‌ಗೆ ನಷ್ಟ ಉಂಟು ಮಾಡಿದೆ~ ಎಂದಿದ್ದಾರೆ.

ಯುವ ಕ್ರಿಕೆಟಿಗರ ಕಣ್ಮಣಿ: ಜಾವಗಲ್ ಶ್ರೀನಾಥ್

ಈಗಿನ ಯವ ಪೀಳಿಗೆಗೆ ಅವರ ಆಟ ನೋಡಲು ಅವಕಾಶ ಸಿಕ್ಕಿಲ್ಲ. ಆದರೆ ಅವರೆಂಥ ಆಟಗಾರ ಎಂಬುದು ಅವರ ಸಮಕಾಲೀನ ಕ್ರಿಕೆಟಿಗರಿಂದ ಕೇಳಿ ತಿಳಿದಿದ್ದೇವೆ. ಭಾರತದ ಕ್ರಿಕೆಟ್‌ಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಹಾಗೇ, ಅವರು ಯುವ ಕ್ರಿಕೆಟಿಗರ ಕಣ್ಮಣಿ. ಅವರದ್ದು ರಾಜಮನೆತನದ ಕುಟುಂಬ. ಆದರೆ ಆಟಗಾರರೊಂದಿಗೆ ಸರಳವಾಗಿರುತ್ತಿದ್ದರು.

ಭಾರತದ ಕ್ರಿಕೆಟ್‌ಗೆ ದು:ಖದ ದಿನ: ಕುಂಬ್ಳೆ

ನನಗೆ ಅತೀವ ದುಃಖವಾಗಿದೆ. ಇದು ಭಾರತದ ಕ್ರಿಕೆಟ್‌ಗೆ ದುಃಖದ ದಿನ. ವೈಯಕ್ತಿಕವಾಗಿ ಪಟೌಡಿ ಹಾಗೂ ಅವರ ಕುಟುಂಬ ನನಗೆ ಚೆನ್ನಾಗಿ ಗೊತ್ತು. ಆಟಗಾರರೊಂದಿಗೆ ಆತ್ಮೀಯವಾಗಿದ್ದರು.

ಕ್ರಿಕೆಟಿಗರ ಸೌಲಭ್ಯಕ್ಕೆ ಕಾರಣ ಪಟೌಡಿ:  ದ್ರಾವಿಡ್

ಅವರ ಕೌಶಲ ಕೇವಲ ಕ್ರಿಕೆಟ್ ಅಂಗಳಕ್ಕೆ ಸೀಮಿತವಾಗಿರಲಿಲ್ಲ. ಕ್ರಿಕೆಟರಿಗೆ ಇವತ್ತಿನ ಸೌಲಭ್ಯ ಸಿಗಲು ಪಟೌಡಿ ಕಾರಣ. ಕಷ್ಟದ ಸಮಯದಲ್ಲಿ ಕೇಂದ್ರೀಕೃತ ಒಪ್ಪಂದ, ಪ್ರಥಮ ದರ್ಜೆ ಹಾಗೂ ಟೆಸ್ಟ್ ಕ್ರಿಕೆಟಿಗರಿಗೆ ಉತ್ತಮ ಭತ್ಯೆ ಸಿಗಲು ಪಟೌಡಿ ಪ್ರಯತ್ನ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.