ADVERTISEMENT

ನವೆಂಬರ್ ಒಂದರಿಂದ ವಿಶ್ವಕಪ್ ಕಬಡ್ಡಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

 ಚಂಡೀಗಡ (ಪಿಟಿಐ): ನವೆಂಬರ್ ಒಂದರಿಂದ ಇಲ್ಲಿ ಆರಂಭವಾಗಲಿರುವ ವಿಶ್ವಕಪ್ ಕಬಡ್ಡಿ ಟೂರ್ನಿಯ ದ್ವಿತೀಯ ಆವೃತ್ತಿಯ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ.

ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ತಂಡ ಈ ಸಲ ಎರಡು ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಈ ಮೊದಲು ಒಂದು ಕೋಟಿ ರೂ. ನೀಡಲಾಗುತ್ತಿತ್ತು. ರನ್ನರ್ ಅಪ್ ಆದ ತಂಡ ಒಂದು ಕೋಟಿ ಹಾಗೂ ಮೂರನೇ ಸ್ಥಾನ ಪಡೆದ ತಂಡ 51 ಲಕ್ಷ ರೂ. ಬಹುಮಾನ ಪಡೆಯಲಿದೆ ಎಂದು ಪಂಜಾಬ್ ಉಪ ಮುಖ್ಯಮಂತ್ರಿ ಹಾಗೂ ಟೂರ್ನಿಯ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬದಾಲ್ ತಿಳಿಸಿದ್ದಾರೆ.
 
ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳಿಗೂ ತಲಾ 10 ಲಕ್ಷ ರೂ. ಲಭಿಸಲಿದೆ. ಆತಿಥೇಯ ಭಾರತ ಸೇರಿದಂತೆ ಒಟ್ಟು 17 ಅಥವಾ 18 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ನ. 20ರ ವರೆಗೆ ಪಂಜಾಬ್‌ನ ವಿವಿಧ ಅಂಗಳಗಳಲ್ಲಿ ವಿಶ್ವಕಪ್‌ನ ಪಂದ್ಯಗಳು ನಡೆಯಲಿವೆ.

ಅರ್ಜೆಂಟೀನಾ, ಪಾಕಿಸ್ತಾನ, ಅಮೆರಿಕ, ಕೆನಡಾ, ಇಟಲಿ, ಅಫಘಾನಿಸ್ತಾನ್, ಶ್ರೀಲಂಕಾ, ಜರ್ಮನಿ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾಗವಹಿಸಲಿವೆ. ಈಗಾಗಲೇ ಕೆಲ ಆಟಗಾರರು ಉದ್ದೀಪನ ಮದ್ದು ಪರೀಕ್ಷೆ ನಡೆಸಲಾಗಿದೆ. ನಾಲ್ಕು ಮಹಿಳಾ ಕಬಡ್ಡಿ ತಂಡಗಳು ಸಹ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ವಿಜೇತ ತಂಡ 25 ಲಕ್ಷ ರೂ. ಬಹುಮಾನ ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.