ADVERTISEMENT

ನಾರಾಯಣ್‌ ಮಿಂಚು ಆರ್‌ಸಿಬಿಗೆ ಆಘಾತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 20:00 IST
Last Updated 8 ಏಪ್ರಿಲ್ 2018, 20:00 IST
ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪರ ಅರ್ಧಶತಕ ಗಳಿಸಿದ ಸುನಿಲ್‌ ನಾರಾಯಣ್‌ (ಎಡ) ಅವರು ರಾಬಿನ್ ಉತ್ತಪ್ಪ ಅವರೊಂದಿಗೆ ಸಂಭ್ರಮ ಹಂಚಿಕೊಂಡರು ಪಿಟಿಐ ಚಿತ್ರ
ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಪರ ಅರ್ಧಶತಕ ಗಳಿಸಿದ ಸುನಿಲ್‌ ನಾರಾಯಣ್‌ (ಎಡ) ಅವರು ರಾಬಿನ್ ಉತ್ತಪ್ಪ ಅವರೊಂದಿಗೆ ಸಂಭ್ರಮ ಹಂಚಿಕೊಂಡರು ಪಿಟಿಐ ಚಿತ್ರ   

ಕೋಲ್ಕತ್ತ: ಸುನಿಲ್ ನಾರಾಯಣ್‌ (50; 19 ಎ, 5 ಸಿ, 4 ಬೌಂ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತ ನೈಟರ್‌ ರೈಡರ್ಸ್ ತಂಡ ಗೆಲುವು ಸಾಧಿಸಿತು.

ಭಾನುವಾರ ರಾತ್ರಿ ನಡೆದ ಪಂದ್ಯ ದಲ್ಲಿ ಈ ತಂಡ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬ್ರೆಂಡನ್ ಮೆಕ್ಲಮ್ (43; 27ಎ, 6ಬೌಂ, 2ಸಿ) ಮತ್ತು ಎಬಿ ಡಿವಿಲಿಯರ್ಸ್ (44; 23ಎ,1ಬೌಂ, 5ಸಿ) ಅವರ ಚುರುಕಿನ ಬ್ಯಾಟಿಂಗ್‌ ನೆರವಿನಿಂದ ಹೋರಾಟದ ಮೊತ್ತ ಪೇರಿಸಿತು.

ಟಾಸ್‌ ಗೆದ್ದ ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಬಳಗವು ಫೀಲ್ಡಿಂಗ್ ಮಾಡಿತು.  ಬ್ರೆಂಡನ್ ಮೆಕ್ಲಮ್ ಮತ್ತು ಕ್ವಿಂಟನ್ ಡಿ ಕಾಕ್ (4 ರನ್) ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿ ಸಿದರು. ಪಿಯೂಷ್ ಚಾವ್ಲಾ ಹಾಕಿದೆ ಎರಡನೇ ಓವರ್‌ನಲ್ಲಿ ಡಿ ಕಾಕ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿನಯಕುಮಾರ್‌ಗೆ ಕ್ಯಾಚ್ ಕೊಟ್ಟರು.

ADVERTISEMENT

ನಂತರ ಬಂದ ನಾಯಕ ವಿರಾಟ್ ಕೊಹ್ಲಿ (31; 33ಎ, 1ಬೌಂ 1ಸಿ) ತಮ್ಮ ಎಂದಿನ ಲಯದಲ್ಲಿ ಆಡಲು ಪರದಾಡಿದರು. ಆದರೂ ಬ್ರೆಂಡನ್ ಜೊತೆಗೆ ಎರಡನೇ ವಿಕೆಟ್‌ಗೆ 44 ರನ್‌ ಪೇರಿಸಿದರು. ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಕಿದ 9ನೇ ಓವರ್‌ನಲ್ಲಿ ಮೆಕ್ಲಮ್ ಔಟಾದರು.

ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್‌ ಬೀಸಾಟ ಆರಂಭಿಸಿದರು. ಇನ್ನೊಂದೆಡೆ ವಿರಾಟ್ ರನ್‌ ಗಳಿಸಲು ಕಷ್ಟಪಡು ತ್ತಿದ್ದರು. ಆದರೆ ಎಬಿಡಿ ತಮ್ಮ ಎಂದಿನ ಅಬ್ಬರದ ಬ್ಯಾಟಿಂಗ್ ಮೂಲಕ ರನ್‌ಗಳ ಕೊಳ್ಳೆ ಹೊಡೆದರು. ಅದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಿತು. 15ನೇ ಓವರ್‌ನಲ್ಲಿ ನಿತೀಶ್ ರಾಣಾ ಎಸೆತವನ್ನು ಸಿಕ್ಸರ್‌ ಎತ್ತುವ ಪ್ರಯತ್ನದಲ್ಲಿ ಮಿಷೆಲ್‌ ಜಾನ್ಸನ್‌ಗೆ ಎಬಿಡಿ ಕ್ಯಾಚಿತ್ತರು.

ಅದರೊಂದಿಗೆ 64 ರನ್‌ಗಳ ಮೂರನೇ ವಿಕೆಟ್‌ ಜೊತೆಯಾಟ ಮುರಿದು ಬಿದ್ದಿತು. ನಂತರದ ಎಸೆತದಲ್ಲಿ  ವಿರಾಟ್ ಕ್ಲೀನ್ ಬೌಲ್ಡ್‌ ಆದರು. ನಂತರ ಬಂದ ಮನದೀಪ್ ಸಿಂಗ್ (37; 18ಎ, 4ಬೌಂ, 2ಸಿ) ತಂಡವು ಹೋರಾಟದ ಮೊತ್ತ ಗಳಿಸಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 176 (ಬ್ರೆಂಡನ್ ಮೆಕ್ಲಮ್ 43, ವಿರಾಟ್ ಕೊಹ್ಲಿ 31, ಎಬಿ ಡಿವಿಲಿಯರ್ಸ್ 44, ಮನದೀಪ್ ಸಿಂಗ್ 37, ಆರ್. ವಿನಯಕುಮಾರ್ 30ಕ್ಕೆ2, ನಿತೀಶ್ ರಾಣಾ 11ಕ್ಕೆ2).

ಕೆಕೆಆರ್‌: 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 177 (ಸುನಿಲ್‌ ನಾರಾಯಣ್‌ 50, ನಿತೀಶ್ ರಾಣ 34, ದಿನೇಶ್ ಕಾರ್ತಿಕ್ ಔಟಾಗದೆ 35).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.