ADVERTISEMENT

ನೀರಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಜಯಭೇರಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 17:55 IST
Last Updated 24 ಫೆಬ್ರುವರಿ 2011, 17:55 IST
ನೀರಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಜಯಭೇರಿ
ನೀರಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ಜಯಭೇರಿ   

ನವದೆಹಲಿ: ಯಾವ ರೋಮಾಂಚನ ಕೆರಳಿಸದೇ ಬೋರು ಹೊಡೆಸಿದ ಪಂದ್ಯದಲ್ಲಿ ಮಳೆರಾಯನೂ ವೆಸ್ಟ್‌ಇಂಡೀಸ್ ತಂಡವನ್ನು ಕಾಪಾಡಲಿಲ್ಲ.    
 
 ಗುರುವಾರ, ಹತ್ತನೇ ವಿಶ್ವ ಕಪ್ ಕ್ರಿಕೆಟ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ನಿರೀಕ್ಷೆಗಿಂತ ಸುಲಭವಾಗಿ ಏಳು ವಿಕೆಟ್‌ಗಳಿಂದ ಜಯ ಗಳಿಸಿತು.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಗುರುವಾರ ಸೇರಿದ್ದ ಸುಮಾರು 15 ಸಾವಿರ ಮಂದಿ ಪ್ರೇಕ್ಷಕರಿಗೆ ಆಟ ಖುಷಿ ಕೊಡಲಿಲ್ಲ. (ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಹೇಳಲಾಗಿತ್ತು. ಆದರೆ ಖಾಲಿ ಕುರ್ಚಿಗಳೇ ಹೆಚ್ಚಿದ್ದವು. ಟಿಕೆಟ್‌ಗಳು ಏನಾದವು ಗೊತ್ತಿಲ್ಲ.) ಗೆಲ್ಲಲು 223 ರನ್ ಮಾಡುವ ಸಣ್ಣ ಸವಾಲಿನೆದುರು ದಕ್ಷಿಣ ಆಫ್ರಿಕ ಬೇಗ ಎರಡು ವಿಕೆಟ್ ಕಳೆದುಕೊಂಡರೂ ನಂತರ ಎ.ಬಿ. ಡಿವಿಲಿಯರ್ಸ್ ಅವರ ಅಮೋಘ ಶತಕದಿಂದ ಇನ್ನೂ 7.1 ಓವರುಗಳು ಇರುವಂತೆಯೇ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.

ಮಧ್ಯಾಹ್ನ ಡರೆನ್ ಬ್ರಾವೊ ಹಾಗೂ ರಾತ್ರಿ ಎ.ಬಿ. ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಮಾತ್ರ ನೀರಸವಾಗಿದ್ದ ಆಟದಲ್ಲಿ ಗಮನ ಸೆಳೆದವು. ಈ ಇಬ್ಬರೂ ಆಟಗಾರರು ಒಂದು ದಿನದ ಪಂದ್ಯಕ್ಕೆ ತಕ್ಕ ಆಟವಾಡಿದರು. ವ್ಯತ್ಯಾಸ ಎಂದರೆ ಡಿವಿಲಿಯರ್ಸ್ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದು.

ವೆಸ್ಟ್‌ಇಂಡೀಸ್ ಕೂಡ ಎಡಗೈ ಸ್ಪಿನ್ನರ್ ಸುಲೈಮಾನ್ ಬೆನ್ ಅವರೊಂದಿಗೇ ದಾಳಿ ಆರಂಭಿಸಿತು. ಪ್ರಬಲ ಬ್ಯಾಟಿಂಗ್ ಹೊಂದಿರುವ ದಕ್ಷಿಣ ಆಫ್ರಿಕವನ್ನು ನಿಯಂತ್ರಿಸುವಷ್ಟು ಮೊತ್ತ ಅದರ ಬಳಿ ಇರಲಿಲ್ಲ. ಬೌಲಿಂಗ್‌ನಲ್ಲೂ ಮೊನಚಿರಲಿಲ್ಲ. ಆದರೂ ಹಾಶಿಮ್ ಆಮ್ಲಾ ಮತ್ತು ತಂಡದ ಅಗ್ರಮಾನ್ಯ ಆಟಗಾರ ಜ್ಯಾಕ್ ಕಾಲಿಸ್ 20 ರನ್ನುಗಳಾಗುವಷ್ಟರಲ್ಲಿ ಔಟಾದಾಗ ವಿಂಡೀಸ್ ಬೌಲರುಗಳು ದಕ್ಷಿಣ ಆಫ್ರಿಕವನ್ನು ಕಾಡಬಹುದು ಎಂದು ತೋರಿತ್ತು. ಆದರೆ ಮಧ್ಯಮ ವೇಗದ ಬೌಲರ್ ಡ್ವೇನ್ ಬ್ರಾವೊ ತಮ್ಮ ಮೂರನೇ ಓವರ್‌ನ ಮೊದಲ ಎಸೆತ ಬೌಲ್ ಮಾಡುತ್ತಿದ್ದಂತೆಯೇ ಪಿಚ್ ಮೇಲೆ ಜಾರಿ ಬಿದ್ದರು. ಅವರ ಎಡಮೊಳಕಾಲಿಗೆ ಪೆಟ್ಟು ಬಿತ್ತು. ಅವರು ಹೊರಬಿದ್ದರು. ಅವರ ಮೊಳಕಾಲಿಗೆ ಶುಕ್ರವಾರ ಸ್ಕ್ಯಾನ್ ಮಾಡಲಾಗುವುದು.

ನಾಯಕ ಗ್ರೇಮ್ ಸ್ಮಿತ್ ಮತ್ತು ಎ.ಬಿ. ಡಿವಿಲಿಯರ್ಸ್ ಮತ್ತೆ ಬೇಗ ವಿಕೆಟ್ ಬೀಳದಂತೆ ನೋಡಿಕೊಂಡರು. ಇಬ್ಬರೂ ಮೂರನೇ ವಿಕೆಟ್‌ಗೆ 141 ಎಸೆತಗಳಲ್ಲಿ 119 ರನ್ ಸೇರಿಸಿದರು. ಸ್ಮಿತ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಪೊಲಾರ್ಡ್‌ಗೆ ವಿಕೆಟ್ ಒಪ್ಪಿಸಿದರೂ ಅಷ್ಟೊತ್ತಿಗೆ ದಕ್ಷಿಣ ಆಫ್ರಿಕದ ಗುರಿ ಹತ್ತಿರವಾಗಿತ್ತು. ಡಿವಿಲಿಯರ್ಸ್ ಮತ್ತು ಜೆ.ಪಿ. ಡುಮಿನಿ ಯಾವ ತೊಂದರೆಯೂ ಇಲ್ಲದೇ ಮುರಿಯದ ನಾಲ್ಕನೇ ವಿಕೆಟ್‌ಗೆ 84 ರನ್ ಸೇರಿಸಿ, ದಕ್ಷಿಣ ಆಫ್ರಿಕಕ್ಕೆ ವಿಶ್ವ ಕಪ್ ಹೋರಾಟದಲ್ಲಿ ಉತ್ತಮ ಆರಂಭ ತಂದುಕೊಟ್ಟರು. ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದ ಎ.ಬಿ. ಡಿವಿಲಿಯರ್ಸ್ ಅವರ ಆಟ ಸೊಗಸಾಗಿತ್ತು. ಅವರು ಯಾವ ಹಂತದಲ್ಲೂ ಔಟಾಗುವಂತೆಯೇ ತೋರಲಿಲ್ಲ. ಸ್ಮಿತ್ ನಂತರ ಜೆ.ಪಿ ಡುಮಿನಿ ಅವರಿಗೆ ಉತ್ತಮ ಜೊತೆಯಾದರು. ಸ್ಕೋರು 3 ವಿಕೆಟ್‌ಗೆ 199 ರನ್ ಆಗಿದ್ದ ಸ್ವಲ್ಪ ಮಳೆ ಬಂತು. ಆದರೆ ಅದು ಜೋರಾಗದೇ ಹತ್ತು ನಿಮಿಷಗಳಲ್ಲಿ ಆಟ ಮುಂದುವರಿಯಿತು. ಡಿವಿಲಿಯರ್ಸ್ ಮತ್ತು ಡುಮಿನಿ ಆರಾಮವಾಗಿ ಬೇಕಿದ್ದ ರನ್ನುಗಳನ್ನು ಹೊಡೆದರು.

ಬ್ರಯಾನ್ ಲಾರಾ ಶೈಲಿಯಲ್ಲೇ ಆಡುವ ಡರೆನ್ ಬ್ರಾವೊ ಮತ್ತು ಡೆವಾನ್ ಸ್ಮಿತ್ ಹಾಕಿಕೊಟ್ಟ ಉತ್ತಮ ಅಡಿಪಾಯದ ಮೇಲೆ ಉತ್ತಮ ಮೊತ್ತವನ್ನು ಪೇರಿಸುವಲ್ಲಿ ವೆಸ್ಟ್‌ಇಂಡೀಸ್ ವಿಫಲವಾಯಿತು. ವೆಸ್ಟ್‌ಇಂಡೀಸ್ ಮೊದಲ ಓವರ್‌ನ ಮೂರನೇ ಎಸೆತಕ್ಕೇ ಬಿರುಸಿನ ಬ್ಯಾಟ್ಸಮನ್ ಕ್ರಿಸ್ ಗೇಯ್ಲಿ ಅವರನ್ನು ಕಳೆದುಕೊಂಡ ಮೇಲೆ ಸ್ಮಿತ್ ಮತ್ತು ಡರೆನ್ ಬ್ರಾವೊ ಎರಡನೇ ವಿಕೆಟ್‌ಗೆ 22.4 ಓವರುಗಳಲ್ಲಿ 111 ರನ್ ಸೇರಿಸಿದಾಗ ತಂಡ 250 ರ ಗಡಿ ದಾಟುವ ನಿರೀಕ್ಷೆ ಇತ್ತು. ಆದರೆ ಡರೆನ್ ಅವರ ಅಣ್ಣ ಡ್ವೇಯ್ನೆ ಬ್ರಾವೊ ಬಿಟ್ಟರೆ ಉಳಿದವರೆಲ್ಲ ವಿಫಲರಾದರು. ಕೊನೆಯ ಐದು ವಿಕೆಟ್‌ಗಳು ಕೇವಲ 13 ರನ್ನುಗಳ ಅಂತರದಲ್ಲಿ ಬಿದ್ದವು.

ದಕ್ಷಿಣ ಆಫ್ರಿಕದ ಬೌಲಿಂಗ್ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಆದರೆ ವಿಂಡೀಸ್ ಬ್ಯಾಟ್ಸಮನ್ನರು ಇದರ ಲಾಭ ಪಡೆಯಲಿಲ್ಲ. ಡರೆನ್ ಬ್ರಾವೊ ಒಬ್ಬರೇ ಆ ದಾಳಿಯನ್ನು ಛಿದ್ರಗೊಳಿಸಿದವರು. ನಾಲ್ಕು ವಿಕೆಟ್ ಪಡೆದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಬೌಲಿಂಗ್‌ನಲ್ಲಿ ಚೆಂಡನ್ನು ಮಿಡ್‌ಆನ್ ಮೇಲೆ ಸಿಕ್ಸರ್‌ಗೆ ಎತ್ತಿದ ಡರೆನ್ ಉಳಿದ ಬೌಲರುಗಳನ್ನೂ ಚೆನ್ನಾಗಿ ದಂಡಿಸಿದರು. ಬ್ರಯಾನ್ ಲಾರಾ ಅವರಂತೆಯೇ ಎಡಗೈ ಬ್ಯಾಟ್ಸಮನ್ ಆಗಿರುವ ಡರೆನ್ ಅವರ ಡ್ರೈವ್, ಪುಲ್‌ಗಳಲ್ಲೂ ಲಾರಾ ಅವರ ಛಾಪು ಕಂಡುಬಂತು. ಒಂದು ತುದಿಯಿಂದ ಇವರಿಂದ ರನ್ನುಗಳು ಹರಿದುಬರುತ್ತಿದ್ದರೆ ಇನ್ನೊಂದು ತುದಿಯಲ್ಲಿ ಸ್ಮಿತ್ ಉತ್ತಮ ಜೊತೆಗಾರನಾಗಿ ಬೆಂಬಲ ನೀಡಿದರು.

ಆಫ್‌ಸ್ಪಿನ್ನರ್ ಜೊಹಾನ್ ಬೋಥಾ ಅವರಿಂದಲೇ ದಕ್ಷಿಣ ಆಫ್ರಿಕದ ದಾಳಿ ಆರಂಭವಾಯಿತು. ಬೋಥಾ ಮೊದಲ ಓವರ್‌ನಲ್ಲೇ ಪೆಟ್ಟು ಕೊಟ್ಟರು. ಕ್ರಿಸ್ ಗೇಯ್ಲಿ ಬ್ಯಾಟ್ ಸವರಿದ ಚೆಂಡು ಸ್ಪಿಪ್‌ನಲ್ಲಿದ್ದ ಜ್ಯಾಕ್ ಕಾಲಿಸ್ ಕೈಸೇರಿತು. ಅದೇ ಓವರ್‌ನಲ್ಲಿ ಬೋಥಾ ಬೌಲಿಂಗ್‌ನಲ್ಲಿ ಚೆಂಡು ಡರೆನ್ ಅವರ ಪ್ಯಾಡ್‌ಗೆ ಅಪ್ಪಳಿಸಿದಾಗ, ಎಲ್‌ಬಿಡಬ್ಲ್ಯುಗೆ ಮಾಡಿದ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ದಕ್ಷಿಣ ಆಫ್ರಿಕ ಈ ನಿರ್ಧಾರದ ವಿರುದ್ಧ ಮರುಪರಿಶೀಲನೆಗೆ ಮನವಿ ಸಲ್ಲಿಸಿತು. ಅದರಲ್ಲೂ ಔಟಲ್ಲ ಎಂಬ ನಿರ್ಣಯ ಬಂತು. ಆದರೆ ಕೊನೆಗೆ ಬೋಥಾ ಅವರ ಎಲ್‌ಬಿಡಬ್ಲು ಬಲೆಗೇ ಡರೆನ್ ಬಿದ್ದರು. ಅಂಪೈರ್ ಅಮೀಷ್ ಸಾಹಿಬ ಔಟ್ ಕೊಟ್ಟಿದ್ದರ ವಿರುದ್ಧ ಡರೆನ್ ಮರುಪರಿಶೀಲನೆಗೆ ಕೋರಿದ್ದರು. ಆದರೆ ಅದರಲ್ಲಿ ಔಟ್ ಎಂಬ ನಿರ್ಣಯ ಬಂತು.

ಸ್ಕೋರ್ ವಿವರ
ವೆಸ್ಟ್‌ಇಂಡೀಸ್:  47.3 ಓವರುಗಳಲ್ಲಿ 222
ಕ್ರಿಸ್ ಗೇಯ್ಲಿ ಸಿ ಕಾಲಿಸ್ ಬಿ ಬೋಥಾ  02
(3 ಎಸೆತ)
ಡೆವಾನ್ ಸ್ಮಿತ್ ಸಿ ಮತ್ತು ಬಿ ತಾಹಿರ್  36
(57 ಎಸೆತ, 3 ಬೌಂಡರಿ)
ಡರೆನ್ ಬ್ರಾವೊ ಎಲ್‌ಬಿಡಬ್ಲ್ಯು  ಬಿ ಬೋಥಾ  73
(82 ಎಸೆತ, 8 ಬೌಂಡರಿ, ಒಂದು ಸಿಕ್ಸರ್)
ರಾಮನರೇಶ ಶರವಣ ಎಲ್‌ಬಿಡಬ್ಲ್ಯು ಬಿ ತಾಹಿರ್ 02
(10 ಎಸೆತ)
ಶಿವನಾರಾಯಣ ಚಂದ್ರಪಾಲ್ ಸಿ ಪೀಟರ್‌ಸನ್ ಬಿ ತಾಹಿರ್ 31
(51 ಎಸೆತ, ಒಂದು ಬೌಂಡರಿ, ಒಂದು ಸಿಕ್ಸರ್)
ಡ್ವೇಯ್ನಾ ಬ್ರಾವೊ ರನ್‌ಔಟ್ (ಮಾರ್ಕೆಲ್)  40
(37 ಎಸೆತ, ಒಂದು ಬೌಂಡರಿ, 3 ಸಿಕ್ಸರ್)
ಡೆವಾನ್ ಥಾಮಸ್ ಸಿ ಜೆಪಿ ಡುಮಿನಿ ಬಿ ತಾಹಿರ್  15
(26 ಎಸೆತ, ಒಂದು ಬೌಂಡರಿ)
ಕೀರನ್ ಪೊಲಾರ್ಡ್ ಎಲ್‌ಬಿಡಬ್ಲ್ಯು  ಬಿ ಸ್ಟೇಯ್ನಾ  00
(ಒಂದು ಎಸೆತ)
ಡರೆನ್ ಸ್ಯಾಮಿ ಎಲ್‌ಬಿಡಬ್ಲ್ಯು ಬಿ ಸ್ಟೇಯ್ನಾ 00
(4 ಎಸೆತ)
ಸುಲೈಮಾನ್ ಬೆನ್ ಸಿ ಮಾರ್ಕೆಲ್ ಬಿ ಸ್ಟೇಯ್ನಾ  06
(8 ಎಸೆತ, ಒಂದು ಬೌಂಡರಿ)
ಕೇಮರ್ ರೋಚ್ ಔಟಾಗದೆ 02
ಇತರೆ ರನ್ (ಬೈ-1, ಲೆಗ್‌ಬೈ-3, ವೈಡ್-11)  15
ವಿಕೆಟ್ ಪತನ: 1-2 (ಗೇಯ್ಲಾ), 2-113 (ಡರೆನ್ ಬ್ರಾವೊ), 3-117 (ಸ್ಮಿತ್), 4-120 (ಶರವಣ), 5- 178 (ಡ್ವೇಯ್ನಿ ಬ್ರಾವೊ), 6- 209 (ಚಂದ್ರಪಾಲ್), 7-213 (ಪೊಲಾರ್ಡ್), 8-213 (ಥಾಮಸ್), 9-213 (ಸ್ಯಾಮಿ).
ಬೌಲಿಂಗ್: ಜೊಹಾನ್ ಬೋಥಾ 9-0-48-2 (ವೈಡ್-3), ಡೇಲ್ ಸ್ಟೇಯ್ನಾ 7.3-1-24-3 (ವೈಡ್-2), ಮೋರ್ನ್ ಮಾರ್ಕೆಲ್ 8-0-35-0 (ವೈಡ್-2); ಜ್ಯಾಕ್ ಕಾಲಿಸ್ 3-0-21-0; ಇಮ್ರಾನ್ ತಾಹಿರ್ 10-1-41-4; ರಾಬಿನ್ ಪೀಟರ್‌ಸನ್ 10-0-49-0.
ದಕ್ಷಿಣ ಆಫ್ರಿಕ: 42.5 ಓವರುಗಳಲ್ಲಿ 3  ವಿಕೆಟ್‌ಗೆ 223
ಹಾಶಿಮ್ ಆಮ್ಲಾ ಸಿ ಥಾಮಸ್ ಬಿ ರೋಚ್  14
(15 ಎಸೆತ, 2 ಬೌಂಡರಿ)
ಗ್ರೇಮ್ ಸ್ಮಿತ್ ಬಿ ಪೊಲಾರ್ಡ್  45
(78 ಎಸೆತ, 2 ಬೌಂಡರಿ)
ಎ.ಬಿ. ಡಿವಿಲಿಯರ್ಸ್ ಔಟಾಗದೆ  107
(105 ಎಸೆತ, 8 ಬೌಂಡರಿ, 2 ಸಿಕ್ಸರ್)
ಜೆ.ಪಿ. ಡುಮಿನಿ ಔಟಾಗದೆ  42
(53 ಎಸೆತ, ಒಂದು ಬೌಂಡರಿ)
ಇತರೆ ರನ್ (ಲೆಗ್‌ಬೈ-10, ನೋಬಾಲ್-1)  15
ವಿಕೆಟ್ ಪತನ: 1-15 (ಆಮ್ಲಾ), 2-20 (ಕಾಲಿಸ್), 3-139 (ಸ್ಮಿತ್)
ಬೌಲಿಂಗ್: ಸುಲೈಮಾನ್ ಬೆನ್ 10-0-51-1; ಕೆಮರ್ ರೋಚ್ 8-0-42-1; ಡ್ವೇಯ್ನಿ ಬ್ರಾವೊ 2.1-0-12-0; ಡರೆನ್ ಸ್ಯಾಮಿ 8-0-40-0; ಕೀರನ್ ಪೊಲಾರ್ಡ್ 7.5-0-37-1 (ನೋಬಾಲ್-1); ಕ್ರಿಸ್ ಗೇಯ್ಲಿ 6-0-26-0; ಡೆವಾನ್ ಸ್ಮಿತ್ 0.4-0- 5-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.