ADVERTISEMENT

ಪದಕದ ಭರವಸೆ ಮೂಡಿಸಿದ ಸಿಂಧು

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತದ ಆಟಗಾರ್ತಿ; ಯಿಂಗ್‌ ಗೆ ಕಾಡಿದ ನಿರಾಸೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ರಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಅವರ ಆಟದ ಭಂಗಿ –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್‌
ರಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ ಮಹಿಳಾ ವಿಭಾಗದ ಸಿಂಗಲ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಅವರ ಆಟದ ಭಂಗಿ –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್‌   

ರಿಯೊ ಡಿ ಜನೈರೊ (ಪಿಟಿಐ):  ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಗೆಲುವಿನ ಓಟ ಮುಂದುವರಿಸಿದ್ದಾರೆ.

ಚೊಚ್ಚಲ ಒಲಿಂಪಿಕ್ಸ್‌ ಪದಕದ ನಿರೀಕ್ಷೆಯಲ್ಲಿರುವ ಹೈದರಾಬಾದ್‌ನ ಆಟಗಾರ್ತಿ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು 21–13, 21–15ರ ನೇರ ಗೇಮ್‌ಗಳಿಂದ ಚೀನಾ ತೈಪೆಯ ಥೈ ಜು ಯಿಂಗ್‌ ಅವರನ್ನು ಮಣಿಸಿದರು.
ಎರಡು ಬಾರಿ ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಕಂಚು ಗೆದ್ದ ಸಾಧನೆ ಮಾಡಿರುವ ಸಿಂಧು ರಿಯೊದಲ್ಲೂ ಪದಕದ ಭರವಸೆ ಮೂಡಿಸಿದ್ದಾರೆ. ಸೈನಾ ನೆಹ್ವಾಲ್‌ ಗುಂಪು ಹಂತದಲ್ಲೇ ಹೊರಬಿದ್ದಿರುವ ಕಾರಣ ಸಿಂಧು ಮೇಲೆ ಅಪಾರ ನಿರೀಕ್ಷೆ ಇದೆ.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಉಭಯ ಆಟಗಾರ್ತಿಯರು ಈ ಹಿಂದೆ ಒಟ್ಟು ಆರು ಬಾರಿ ಮುಖಾಮುಖಿಯಾಗಿದ್ದರು. ಈ ಪೈಕಿ ಯಿಂಗ್‌ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದರೆ, ಸಿಂಧು ಎರಡು ಬಾರಿ ಚೀನಾ ತೈಪೆಯ ಆಟಗಾರ್ತಿಯನ್ನು ಮಣಿಸಿದ್ದರು.

ಹಿಂದಿನ ನಿರಾಸೆಯನ್ನು ಮರೆಯುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಸಿಂಧು ದಿಟ್ಟ ಆರಂಭ ಕಂಡರು. ಉತ್ತಮ ಲಯದಲ್ಲಿರುವ ಭಾರತದ ಆಟಗಾರ್ತಿ ಚುರುಕಿನ ಆಟ ಆಡಿ 3–1ರ ಮುನ್ನಡೆ ಗಳಿಸಿದರು.

ಇದರಿಂದ ಆತ್ಮ ವಿಶ್ವಾಸ ಕಳೆದುಕೊಳ್ಳದೆ ದಿಟ್ಟ ಹೋರಾಟ ನಡೆಸಿದ ಯಿಂಗ್‌ ಮನಮೋಹಕ ಸರ್ವ್‌ಗಳ ಮೂಲಕ ಪಾಯಿಂಟ್‌  ಗಳಿಸಿ 5–5ರಲ್ಲಿ ಸಮಬಲ ಮಾಡಿಕೊಂಡರು.

ಆ ನಂತರ ಸಿಂಧು ಅಂಗಳದಲ್ಲಿ ಮಿಂಚು ಹರಿಸಿದರು. ಅವರ ಹಿಂಗೈ ಹೊಡೆತಗಳು ನೋಡುಗರ ಮನಸೆಳೆಯು ವಂತಿದ್ದವು. ಜೊತೆಗೆ ಷಟಲ್‌ ಅನ್ನು ಡ್ರಾಪ್‌ ಮಾಡುವಲ್ಲೂ ಯಶಸ್ವಿಯಾದ ಅವರು  11–6ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದರು.  ಬಳಿಕ ಯಿಂಗ್‌ ಮೇಲುಗೈ ಸಾಧಿಸಿದರು. ಭಿನ್ನ ರಣತಂತ್ರ ಹೆಣೆದು ಕಣಕ್ಕಿಳಿದಿದ್ದ ಅವರು ಸೊಗಸಾದ ರ್‍ಯಾಲಿಗಳ ಜೊತೆಗೆ ಅದ್ಭುತವಾದ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಭಾರತದ ಆಟಗಾರ್ತಿಯನ್ನು ಕಂಗೆಡಿಸಿ ದರು. ಇದರೊಂದಿಗೆ  ಹಿನ್ನಡೆಯನ್ನು 10–12 ಕ್ಕೆ ತಗ್ಗಿಸಿಕೊಂಡರು.

ಇದರಿಂದ ಎಳ್ಳಷ್ಟು ಅಂಜದ ಸಿಂಧು ಷಟಲ್‌ ಅನ್ನು ಆದಷ್ಟು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ತಂತ್ರ ಅನುಸರಿಸಿದರು. ಇದರೊಂದಿಗೆ ನಿರಂತರವಾಗಿ ಪಾಯಿಂಟ್‌ ಹೆಕ್ಕಿದ ಅವರು ನಿರಾಯಾಸವಾಗಿ ಗೇಮ್‌ ಗೆದ್ದು ಮುನ್ನಡೆ ಗಳಿಸಿದರು.

ಎರಡನೇ ಗೇಮ್‌ನಲ್ಲಿ ಸಿಂಧು ಆಟ ಇನ್ನಷ್ಟು ರಂಗೇರಿತು. ಮೊದಲ ಗೇಮ್‌ ಕೈಚೆಲ್ಲಿದ್ದರಿಂದ ಅಲ್ಪ ಒತ್ತಡಕ್ಕೆ ಒಳಗಾಗಿ ದ್ದಂತೆ ಕಂಡ ಯಿಂಗ್‌ ಆರಂಭದಲ್ಲಿ ಎರಡು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಹೀಗಾಗಿ ಭಾರತದ ಆಟಗಾರ್ತಿ 3–1ರ ಮುನ್ನಡೆ ಪಡೆದರು.

ಆ ನಂತರ ಇಬ್ಬರೂ ತುರುಸಿನ ಪೈಪೋಟಿಗೆ ಇಳಿದರು. ಹೀಗಾಗಿ ಗೇಮ್‌ನಲ್ಲಿ 6–6ರ ಸಮಬಲ ಕಂಡುಬಂತು.

ಈ ಹಂತದಲ್ಲಿ ಚೀನಾ ತೈಪೆಯ ಆಟಗಾರ್ತಿ ಮತ್ತೆ ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಇದರ ಲಾಭ ಎತ್ತಿಕೊಂಡ ಸಿಂಧು ಸತತ ಐದು ಪಾಯಿಂಟ್‌ ಗಳಿಸಿ ಮುನ್ನಡೆಯನ್ನು 11–6ಕ್ಕೆ ಹಿಗ್ಗಿಸಿಕೊಂಡರು.

ಆ ನಂತರವೂ ತುಂಬು ವಿಶ್ವಾಸದಿಂದ ಆಡಿದ ಭಾರತದ ಆಟಗಾರ್ತಿ 14–7, 17–11 ಹೀಗೆ ಮುನ್ನಡೆ ಹೆಚ್ಚಿಸಿಕೊಂಡು ಸಾಗಿದರು.
ಇದರಿಂದ ಚೀನಾ ತೈಪೆಯ ಆಟಗಾರ್ತಿ ಮಂಕಾದಂತೆ ಕಂಡರು. ಸಿಂಧು ಬಾರಿಸುತ್ತಿದ್ದ ಷಟಲ್‌ ಅನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ      ಅವರು ಸುಲಭವಾಗಿ ಪಾಯಿಂಟ್‌ ಕೈಚೆಲ್ಲಿದರು. ಇದರ ಪೂರ್ಣ ಲಾಭ ಎತ್ತಿಕೊಂಡ ಭಾರತದ ಆಟಗಾರ್ತಿ  ಆ ನಂತರವೂ ಛಲದ ಆಟ ಆಡಿ 40ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.ಎಂಟರ ಘಟ್ಟದಲ್ಲಿ ಸಿಂಧುಗೆ ಚೀನಾದ ವಾಂಗ್‌ ಯಿಹಾನ್‌  ಸವಾಲು ಎದುರಾಗಲಿದೆ.

ಮುಖ್ಯಾಂಶಗಳು
* ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು–ಯಿಹಾನ್‌ ಪೈಪೋಟಿ

* ಸಿಂಧು ವಿರುದ್ಧ 4–3ರ ಗೆಲುವಿನ ದಾಖಲೆ ಹೊಂದಿರುವ ಯಿಂಗ್‌
* ವಿಶ್ವ ಚಾಂಪಿಯನ್‌ ಷಿಪ್‌ನಲ್ಲಿ ಎರಡು ಕಂಚು ಗೆದ್ದಿರುವ ಸಿಂಧು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT