ADVERTISEMENT

ಪದಕ ಖಚಿತಪಡಿಸಿದ ಅಮಿತ್‌

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಫೈನಲ್‌ ಪ್ರವೇಶಿಸಿದ ಭಾರತದ ಸ್ಪರ್ಧಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST
ಭಾರತದ ಅಮಿತ್‌ ಕುಮಾರ್‌ (ಎಡಬದಿ) ಅವರು ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ.ವಿಭಾಗದಲ್ಲಿ ಜಪಾನ್‌ನ ಯಸುಹಿರೊ ಇಬಾನಾ ಎದುರು ಪೈಪೋಟಿ ನಡೆಸಿದ ಪರಿ
ಭಾರತದ ಅಮಿತ್‌ ಕುಮಾರ್‌ (ಎಡಬದಿ) ಅವರು ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ.ವಿಭಾಗದಲ್ಲಿ ಜಪಾನ್‌ನ ಯಸುಹಿರೊ ಇಬಾನಾ ಎದುರು ಪೈಪೋಟಿ ನಡೆಸಿದ ಪರಿ   

ಬುಡಾಪೆಸ್ಟ್‌ (ಪಿಟಿಐ): ಏಷ್ಯನ್‌ ಚಾಂಪಿಯನ್‌ ಅಮಿತ್‌ ಕುಮಾರ್‌ ಇಲ್ಲಿ ಆರಂಭವಾದ ವಿಶ್ವ ಕುಸ್ತಿ ಚಾಂಪಿಯನ್‌­ಷಿಪ್‌ನ ಮೊದಲ ದಿನ ಭಾರತಕ್ಕೆ ಪದಕ ಖಚಿತಪಡಿಸಿಕೊಂಡರು.

ವಿಶ್ವ ರ‍್ಯಾಂಕ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಅಮಿತ್‌ ಫ್ರೀ ಸ್ಟೈಲ್‌ ವಿಭಾಗದ (55 ಕೆ.ಜಿ) ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದರಲ್ಲದೆ, ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಲಭಿಸುವುದನ್ನು ಖಚಿತಪಡಿಸಿದ್ದಾರೆ.

ಅಮಿತ್‌ ಫೈನಲ್‌ನಲ್ಲಿ ಇರಾನಿನ ಹಸನ್‌ ಫರ್ಮಾನ್‌ ರಹೀಮಿ ಅವರ ಸವಾಲನ್ನು ಎದುರಿಸುವರು. ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಭಾರತಕ್ಕೆ 2010 ರಲ್ಲಿ ಕೊನೆಯದಾಗಿ ಪದಕ ಲಭಿಸಿತ್ತು. ಅಂದು ಸುಶೀಲ್‌ ಚಿನ್ನ ಜಯಿಸಿದ್ದರು.

ಅದ್ಭುತ ಪ್ರದರ್ಶನ ನೀಡಿದ ಅಮಿತ್‌ ಸೆಮಿಫೈನಲ್‌ನಲ್ಲಿ ಟರ್ಕಿಯ ಸೆಸಾರ್‌ ಅಕುಲ್‌ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟರು.
ಭಾರತದ ಕುಸ್ತಿಪಟು ಮೊದಲ ಸುತ್ತಿನಲ್ಲಿ ಜಪಾನ್‌ನ ಯಸುಹಿರೊ ಇನಾಬ ವಿರುದ್ಧ ಗೆದ್ದರೆ, ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಜೊಹೀರ್‌ ಎಲ್‌ ಅರಾಕ್‌ ಅವರನ್ನು ಮಣಿಸಿದರು. ಇವರಿಬ್ಬರ ವಿರುದ್ಧ ಅಮಿತ್‌ ಏಳು ಪಾಯಿಂಟ್‌ಗಳಿಗೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಅಮೆರಿಕದ ಏಂಜೆಲ್‌ ಅಲೆಸ್ಮೊ ಎಸ್ಕೊಬೆಡೊ ವಿರುದ್ಧ ಗೆದ್ದರು.

ಲಂಡನ್‌ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಸುಶೀಲ್‌ ಕುಮಾರ್‌ ಫಿಟ್‌ನೆಸ್‌ ಸಮಸ್ಯೆಯ ಕಾರಣ ಸ್ಪರ್ಧಿಸಲಿಲ್ಲ. ಅವರ ಬದಲು 66 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿದ ಅರುಣ್‌ ಕುಮಾರ್‌ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಜಾರ್ಜಿಯದ ಲೆವನ್‌ ಕೆಲೆಕ್‌ಸಶ್ವಿಲಿ ಭಾರತದ ಸ್ಪರ್ಧಿಯನ್ನು ಮಣಿಸಿದರು.

96 ಕೆ.ಜಿ. ವಿಭಾಗದಲ್ಲಿ ಭಾರತದ ಸತ್ಯವರ್ತ್‌ ಕದಿಯಾನ್‌ ಎರಡನೇ ಸುತ್ತಿನಲ್ಲಿ ಪರಾಭವಗೊಂಡರು. ಮೊದಲ ಸುತ್ತಿನಲ್ಲಿ ಶ್ರೀಲಂಕಾದ ಮದಸಿಂಗ್‌ ಅಚ್ಚಿಲಗೆ ಗಾಮಿನಿ ಅವರನ್ನು ಸುಲಭವಾಗಿ ಮಣಿಸುವಲ್ಲಿ ಸತ್ಯವರ್ತ್‌ ಯಶಸ್ವಿಯಾದರು. ಆದರೆ ಎರಡನೇ ಸುತ್ತಿನ ಹೋರಾಟದಲ್ಲಿ ಅವರು ನಿಕೊಲಾಯ್‌ ಸೆಬಾನ್‌ ಎದುರು ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.